ಬಜ್ಪೆಯಲ್ಲಿ 11ನೇ ಶಾಖೆ ಉದ್ಘಾಟಿಸಿ ಬಜ್ಪೆ ಸೈಂಟ್ ಜೋಸೆಫ್ ಚರ್ಚ್ ಧರ್ಮಗುರು ಫಾ. ಆ್ಯಂಡ್ರು ಡಿಸೋಜ ಅಭಿಪ್ರಾಯ
ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಧೈರ್ಯದಿಂದ ಹಣ ಹೂಡಿಕೆ ಮಾಡಬಹುದು. ಸಂಸ್ಥೆಯ ಮೇಲೆ ಅಪಾರ ವಿಶ್ವಾಸವಿದ್ದು, ಹಲವಾರು ವರ್ಷಗಳಿಂದ ಈ ಸಂಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಸೊಸೈಟಿಯಿಂದ ಉತ್ತಮ ಸೇವೆ ಗ್ರಾಹಕರಿಗೆ ಸಿಗುತ್ತಿದೆ ಎಂದು ಬಜ್ಪೆ ಸೈಂಟ್ ಜೋಸೆಫ್ ಚರ್ಚ್ ಧರ್ಮಗುರು ಫಾ. ಆ್ಯಂಡ್ರು ಡಿಸೋಜ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಬಜ್ಪೆಯ ನ್ಯೂಲೈಟ್ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 11ನೇ ಶಾಖೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಳೆದ 29 ವರ್ಷಗಳಿಂದ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಹತ್ತು ಶಾಖೆಗಳ ಮೂಲಕ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿಕೊಂಡು ಬಂದಿದೆ. ಇದೀಗ 11ನೇ ಶಾಖೆಯನ್ನು ಬಜ್ಪೆಯಲ್ಲಿ ಆರಂಭಿಸಿರುವುದರಿಂದ ಇಲ್ಲಿನ ಗ್ರಾಮಸ್ಥರಿಗೆ ಉತ್ತಮ ಸೇವೆ ದೊರೆಯಲಿದೆ ಎಂಬ ವಿಶ್ವಾಸವಿದೆ. ಪ್ರಸ್ತುತ ಆಡಳಿತ ಮಂಡಳಿಯ ನಿರಂತರ ಪರಿಶ್ರಮ, ಸದಸ್ಯರು ಮತ್ತು ಸಾರ್ವಜನಿಕರ ವಿಶ್ವಾಸದಿಂದ ಸಂಸ್ಥೆ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೀವನ್ ಲಾಯ್ಡ್ ಪಿಂಟೊ, 29 ವರ್ಷಗಳಿಂದ ಹಿರಿಯರು ನಡೆಸಿಕೊಂಡು ಬಂದ ಉತ್ತಮ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು ಶೇ.98ಕ್ಕಿಂತಲೂ ಅಧಿಕ ಸಾಲ ವಸೂಲಾತಿ ಮಾಡಿದೆ, ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದಂತೆ ಸೇವೆ ನೀಡಲಾಗುತ್ತಿದೆ. ಪ್ರತಿವರ್ಷ ಲೆಕ್ಕಪರಿಶೋಧನೆಯಲ್ಲಿ ‘ಎ’ ಗ್ರೇಡ್ ಪಡೆದುಕೊಳ್ಳುತ್ತಿದೆ ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಮತ್ತೊಂದು ಶಾಖೆ ಆರಂಭಿಸುವ ಉದ್ದೇಶವಿದೆ ಎಂದರು. ಬಜ್ಪೆ ಶಾಖೆಯ ಉದ್ಘಾಟನೆ ಅಂಗವಾಗಿ 400 ದಿನಗಳ ಠೇವಣಿಗೆ ಶೇ.10.50ರ ವಿಶೇಷ ಬಡ್ಡಿದರ ಸೇರಿದಂತೆ ನಾನಾ ಆಕರ್ಷಕ ಯೋಜನೆಗಳನ್ನು ಸಂಸ್ಥೆ ಪ್ರಕಟಿಸಿದೆ. ಚಿನ್ನದ ಸಾಲ, ಠೇವಣಿ ಆಧಾರಿತ ಸಾಲ, ಆಸ್ತಿ ಅಡಮಾನ ಸಾಲ, ಗೃಹ ನಿರ್ಮಾಣ ಸಾಲ ಹಾಗೂ ವಾಹನ ಸಾಲ ಸೇರಿದಂತೆ ಹಲವು ಹಣಕಾಸು ಸೌಲಭ್ಯಗಳು ಲಭ್ಯವಿವೆ ಎಂದರು.

ಬಜ್ಪೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಪೂಜಾರಿ ಭದ್ರತಾ ಕೊಠಡಿ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಷ್ ಡಿಸೋಜ ಗಣಕ ಯಂತ್ರ ಉದ್ಘಾಟಿಸಿದರು. ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ಸಿರಾಜ್ ಬಜ್ಪೆ ಹಾಗೂ ಕಟ್ಟಡ ಮಾಲೀಕ ಚಾರ್ಲ್ಸ್ ಡಿಕುನ್ಹ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಸ್ಥೆಯ ಉದ್ಘಾಟನೆಗೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸೊಸೈಟಿಯ ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ, ನಿರ್ದೇಶಕರಾದ ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫರ್ನಾಂಡಿಸ್, ಗ್ಲೋರಿಯ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲಾರೆನ್ಸ್ ಕ್ಲಿಫೋರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸಾ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ, ಅನಿತಾ ನೊರೊನ್ಹಾ, ಬೆನೆಡಿಕ್ಷಾ ಸಲ್ಡಾನ್ಹಾ ಹಾಗೂ ವಿಶಾಲ್ ಡಿಸೋಜ ಉಪಸ್ಥಿತರಿದ್ದರು. ಸೊಸೈಟಿ ಸಿಬ್ಬಂದಿ ಸಿಲ್ವಿಯಾ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಬಜ್ಪೆ ಶಾಖಾ ವ್ಯವಸ್ಥಾಪಕ ಜೇಸನ್ ರುಬೆನ್ ಫರ್ನಾಂಡಿಸ್ ವಂದಿಸಿದರು.











