ಕೆಎಸ್ಎಸ್ಎಫ್ಸಿಎಲ್ಗೆ ಭೇಟಿ ನೀಡಿದ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಕುಲಪತಿ; ಸೌಹಾರ್ದ ಸಹಕಾರ ಚಳವಳಿಯ ಕಾರ್ಯವೈಖರಿ ಕುರಿತು ಅಧ್ಯಯನ
ಬೆಂಗಳೂರು: ಕರ್ನಾಟಕದ ಸೌಹಾರ್ದ ಸಹಕಾರ ಚಳವಳಿ ನೂತನವಾಗಿ ಸ್ಥಾಪನೆಯಾಗಿರುವ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ (TSU)ದ ಅಧ್ಯಯನಕ್ಕೆ ಪ್ರಮುಖ ಮಾದರಿಯಾಗಿ ಹೊರಹೊಮ್ಮುತ್ತಿದೆ.
https://chat.whatsapp.com/FCEnlTkAKCC0MGPhXtX4i4
ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಕುಲಪತಿ ಸಂಜಯ್ ಪ್ರತಾಪ್ ಸಿಂಗ್ ಅವರು ಅಕ್ಟೋಬರ್ 3ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರ ನಿಯಮಿತ (KSSFCL) ಕಚೇರಿಗೆ ಭೇಟಿ ನೀಡಿ, ರಾಜ್ಯದ ಸೌಹಾರ್ದ ಸಹಕಾರ ವ್ಯವಸ್ಥೆಯ ರಚನೆ, ಬೆಳವಣಿಗೆ ಹಾಗೂ ಕಾರ್ಯನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ಪಡೆದರು. ಅವರೊಂದಿಗೆ ಟಿಎಸ್ಯು ಸಹ-ಅಧ್ಯಕ್ಷ ರಾಜೇಶ್ ಜೈನ್ ಉಪಸ್ಥಿತರಿದ್ದರು. ಕೆಎಸ್ಎಸ್ಎಫ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ್, ಉಪ ಪ್ರಧಾನ ವ್ಯವಸ್ಥಾಪಕ ನಾರಾಯಣ ಹೆಗಡೆ, ಎಜಿಎಂ ಶ್ರೀಧರ್ ಸೇರಿದಂತೆ ಅಧಿಕಾರಿಗಳು ಟಿಎಸ್ಯು ನಿಯೋಗವನ್ನು ಸ್ವಾಗತಿಸಿ ಪೂರಕ ಮಾಹಿತಿ ನೀಡಿದ್ದಾರೆ.
ಸೌಹಾರ್ದ ಸಹಕಾರ ವ್ಯವಸ್ಥೆಯನ್ನು “ವಿಶಿಷ್ಟ ಸಹಕಾರ ಚಳವಳಿ” ಎಂದು ಬಣ್ಣಿಸಿರುವ ಕುಲಪತಿ ಸಂಜಯ್ ಪ್ರತಾಪ್ ಸಿಂಗ್, ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಸ್ವಯಂ ನಿಯಂತ್ರಣಕ್ಕೆ ಒತ್ತು ನೀಡುವ ಈ ಮಾದರಿಯನ್ನು ಅಧ್ಯಯನ ಮಾಡುವುದು ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ. ಉದಾರವಾದ ಶಾಸನಾತ್ಮಕ ಚೌಕಟ್ಟಿನಲ್ಲಿ ಸಹಕಾರ ಸಂಘಗಳು ಹೆಚ್ಚಿನ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸುವ ವ್ಯವಸ್ಥೆ ಸೌಹಾರ್ದ ಮಾದರಿಯಲ್ಲಿದೆ. ಈ ಅನುಭವವನ್ನು ದೇಶದ ಇತರ ರಾಜ್ಯಗಳಲ್ಲಿಯೂ ಸಹಕಾರ ಕ್ಷೇತ್ರದ ಸುಧಾರಣೆ ಹಾಗೂ ಅಭಿವೃದ್ಧಿಗೆ ಪರಿಗಣಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭೇಟಿಯ ಸಂದರ್ಭದಲ್ಲಿ ಕೆಎಸ್ಎಸ್ಎಫ್ಸಿಎಲ್ ಅಧಿಕಾರಿಗಳು ಸೌಹಾರ್ದ ಸಹಕಾರ ಚಳವಳಿಯ ಉದಯ, ಉದ್ದೇಶಗಳು, ಸಂಘಟನಾ ವ್ಯವಸ್ಥೆ ಮತ್ತು ರಾಜ್ಯದಲ್ಲಿ ಅದರ ಬೆಳವಣಿಗೆಯ ಕುರಿತು ವಿವರವಾದ ಪ್ರಾತ್ಯಕ್ಷಿಕೆ ನೀಡಿದರು. ಸೌಹಾರ್ದ ಸಹಕಾರ ಸಂಘಗಳಿಗೆ ಫೆಡರಲ್ ಸಂಸ್ಥೆಯಾಗಿ ಕೆಎಸ್ಎಸ್ಎಫ್ಸಿಎಲ್ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆಯೂ ನಿಯೋಗಕ್ಕೆ ಮಾಹಿತಿ ನೀಡಲಾಯಿತು. ಸಹಕಾರ ಶಿಕ್ಷಣ ಮತ್ತು ತರಬೇತಿ, ಸಾಮರ್ಥ್ಯವರ್ಧನೆ, ಸಂಸ್ಥೆಗಳ ಅಭಿವೃದ್ಧಿ, ಸದಸ್ಯಕೇಂದ್ರಿತ ಸೇವೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಫೆಡರಲ್ ಸಂಸ್ಥೆ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಲಾಯಿತು.
ಸಹಕಾರ ಶಿಕ್ಷಣಕ್ಕೆ ಹೊಸ ಆಯಾಮ
ಸಹಕಾರ ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಾಮರ್ಥ್ಯವರ್ಧನೆಯ ಪ್ರಮುಖ ಕೇಂದ್ರವಾಗಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಸೌಹಾರ್ದ ಅನುಭವ ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ ಸಹಕಾರ ಆಡಳಿತ, ಸ್ವಯಂ ನಿಯಂತ್ರಣ, ಸದಸ್ಯರ ಭಾಗವಹಿಸುವಿಕೆ, ಸಂಸ್ಥೆಗಳ ಸ್ವಾಯತ್ತತೆ ಮತ್ತು ದೀರ್ಘಕಾಲೀನ ಸ್ಥಿರತೆ ಕುರಿತ ಪಠ್ಯಕ್ರಮ ಹಾಗೂ ಸಂಶೋಧನೆ ರೂಪಿಸುವಲ್ಲಿ ಸೌಹಾರ್ದ ಮಾದರಿ ಉಪಯುಕ್ತವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸೌಹಾರ್ದ ಸಹಕಾರ ಕ್ಷೇತ್ರದಲ್ಲಿ ಕೆಎಸ್ಎಸ್ಎಫ್ಸಿಎಲ್ ಕೇವಲ ಪ್ರತಿನಿಧಿತ್ವದ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದಲ್ಲದೆ, ಸಹಕಾರ ಸಂಘಗಳಿಗೆ ಮಾರ್ಗದರ್ಶನ, ತರಬೇತಿ, ತಾಂತ್ರಿಕ ಮತ್ತು ಸಾಂಸ್ಥಿಕ ನೆರವು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಸ್ವಾಯತ್ತತೆಯನ್ನು ಕಾಪಾಡಿಕೊಂಡೇ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ರಾಜ್ಯ ಮಟ್ಟದ ಫೆಡರಲ್ ಸಂಸ್ಥೆಯ ಪಾತ್ರವನ್ನು ಅರ್ಥಮಾಡಿಕೊಳ್ಳಲು ಟಿಎಸ್ಯು ನಿಯೋಗದ ಭೇಟಿ ಸಹಕಾರಿಯಾಯಿತು. ಟಿಎಸ್ಯು ಮತ್ತು ಕೆಎಸ್ಎಸ್ಎಫ್ಸಿಎಲ್ ನಡುವಿನ ಈ ಸಂವಾದವು ಸಹಕಾರ ಕ್ಷೇತ್ರದ ಶಿಕ್ಷಣ, ಸಂಶೋಧನೆ ಮತ್ತು ಪ್ರಾಯೋಗಿಕ ಅನುಭವಗಳ ನಡುವೆ ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕದ ಸೌಹಾರ್ದ ಸಹಕಾರ ಮಾದರಿ ಮುಂದಿನ ದಿನಗಳಲ್ಲಿ ದೇಶದ ಸಹಕಾರ ಶಿಕ್ಷಣ ಮತ್ತು ನೀತಿ ಅಧ್ಯಯನಕ್ಕೆ ಪ್ರಮುಖ ಕೇಸ್ ಸ್ಟಡಿಯಾಗಿ ರೂಪುಗೊಳ್ಳುವ ಸಾಧ್ಯತೆ ಇದೆ.










