ತರಬೇತಿ ಕಾರ್ಯಾಗಾರದಲ್ಲಿ ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಲಹೆ
ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಉಪವಿಭಾಗದಲ್ಲಿ ಚುನಾವಣೆ ಇರುವ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಚುನಾವಣಾ ತರಬೇತಿ ಕಾರ್ಯಾಗಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆಯವರು, ಸಹಕಾರ ಕ್ಷೇತ್ರದಲ್ಲಿ ಚುನಾವನೆ ಎಂಬುದು ಸದಸ್ಯರನ್ನು ಒಳಗೊಂಡು ಮಾಡುವ ಪ್ರಕ್ರಿಯೆ. ಈ ಚುನಾವಣಾ ಪ್ರಕ್ರಿಯೆ ಜರುಗಿಸಲು ಬೇಕಾದ ನಿಯಮಗಳ ಬಗ್ಗೆ ಸಿಇಒಗಳಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವಿದಾಗಿದೆ. ಸಿಇಒಗಳಿಗೆ ಜಾಗೃತಿ ಮೂಡಿಸುವ ಮೂಲಕ ಚುನಾವಣೆಯ ಕುರಿತು ಸರಿಯಾದ ನಿಯಮಗಳನ್ನು ತಿಳಿದುಕೊಂಡು ಸುಗಮವಾಗಿ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಚುನಾವಣಾ ಪ್ರಕ್ರಿಯೆಗಳನ್ನು ಮಾಡುವಾಗ ಎದುರಾಗುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಈ ತರಬೇತಿ ಕಾರ್ಯಾಗಾರ ನೆರವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಿಇಒಗಳು ಚುನಾವಣೆಯ ಸಮಯದಲ್ಲಿ ತಮ್ಮ ಅಧೀನ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯನಿವರ್ಹಿಸಬೇಕು. ಚುನಾವಣಾ ಪ್ರಕ್ರಿಯೆಗಳನ್ನು ಸುಗಮವಾಗಿ ನೆರವೇರಿಸಲು ಸಿಇಒಗಳ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯ ಎಲ್ಲ ಅಂಶಗಳನ್ನೂ ತಿಳಿದುಕೊಂಡಿರಬೇಕು. ಆಗ ಮಾತ್ರ ಚುನಾವಣೆಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಚುನಾವಣಾ ಪ್ರಕ್ರಿಯೆಗಳು ಸಾಂಗವಾಗಿ ನೆರವೇರಲು ಸಿಇಒಗಳು ಯಾವುದೇ ಸಂದರ್ಭದಲ್ಲಿಯೂ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ಸಲಹೆ, ಮಾಹಿತಿ, ಮಾರ್ಗದರ್ಶನ ಪಡೆದು ಅವರು ಕೊಟ್ಟ ನಿರ್ದೇಶನಗಳನ್ನು ಪಾಲಿಸಿ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಬೇಕು ಎಂದು ಕಿವಿಮಾತು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ ಉಪನ್ಯಾಸ ನೀಡಿ, ಚುನಾವಣಾ ಪಟ್ಟಿ ತಯಾರಿಸುವುದು ಹೇಗೆ?, ಚುನಾವಣಾ ಪೂರ್ವ ತಯಾರಿ ಹೇಗೆ? ಎಂಬಿತ್ಯಾದಿ ವಿವರಗಳ ಬಗ್ಗೆ ಮಾಹಿತಿ ನೀಡಿ ಸಿಇಒಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸುವಂತೆ ಸಲಹೆ ನೀಡಿದರು.
ದ.ಕ. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








