ವಾರ್ಷಿಕ ಮಹಾಸಭೆಯಲ್ಲಿ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಬಣ್ಣನೆ
ಮಂಗಳೂರು: ಸಹಕಾರಿ ತತ್ವ ಮತ್ತು ಧ್ಯೇಯಗಳನ್ನು ಜಿಲ್ಲಾದ್ಯಂತ ಪ್ರಸಾರ ಮಾಡುವ ಮೂಲಕ ಸಹಕಾರಿ ಚಳವಳಿಯನ್ನು ಕಾಲಕಾಲಕ್ಕೆ ಮುನ್ನಡೆಸುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಕ್ರಿಯಾಶೀಲ ನಾಯಕತ್ವದಡಿಯಲ್ಲಿ ರಾಜ್ಯದಲ್ಲೇ ಮಾದರಿ ಯೂನಿಯನ್ ಆಗಿ ರೂಪುಗೊಂಡಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರೂ ಆಗಿರುವ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಬಣ್ಣಿಸಿದರು.
https://chat.whatsapp.com/FCEnlTkAKCC0MGPhXtX4i4
ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ದ.ಕ. ಜಿಲ್ಲಾ ಸಹಕಾರ ಯೂನಿಯನ್‌ನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಸಹಕಾರ ಸಂಘಗಳಿಗೆ ಕಾಲಕಾಲಕ್ಕೆ ಬೇಕಾದ ಮಾರ್ಗದರ್ಶನಗಳು, ಸರ್ಕಾರದಿಂದ ಆಗುತ್ತಿರುವ ತಿದ್ದುಪಡಿಗಳು, ಹೊಸ ಹೊಸ ಸುತ್ತೋಲೆಗಳ ಮಾಹಿತಿಗಳನ್ನು ನೀಡುತ್ತ ದ.ಕ ಜಿಲ್ಲಾ ಸಹಕಾರ ಯೂನಿಯನ್ ಸಹಕಾರಿ ಆಂದೋಲನವನ್ನು ಸಮರ್ಥವಾಗಿ ಮುನ್ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು, ದ.ಕ. ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು ಹೊಸ ನಿರ್ದೇಶಕ ಮಂಡಳಿ ಅಸ್ತಿತ್ವಕ್ಕೆ ಬಂದಾಗ ಅವರು ನೀಡಿದ ಸಲಹೆಯಂತೆ ಕೆಲಸ ನಿರ್ವಹಿಸುತ್ತಿದೆ. ಯೂನಿಯನ್ 2025-26ನೇ ಸಾಲಿನಲ್ಲಿ 14 ಲಕ್ಷ ಲಾಭ ಗಳಿಸಿರುವುದು ರಾಜ್ಯದಲ್ಲಿಯೇ ದಾಖಲೆ ಎನಿಸಿದೆ. ಅಲ್ಲದೆ ಸದಸ್ಯ ಸಂಘಗಳಿಗೆ ಶೇ.10 ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ರಾಜ್ಯದ ಎಲ್ಲಾ ಸಹಕಾರ ಯೂನಿಯನ್‌ಗಳ ಪೈಕಿ ದ.ಕ ಜಿಲ್ಲಾ ಸಹಕಾರ ಯೂನಿಯನ್ ಸದಸ್ಯ ಸಂಘಗಳಿಗೆ ಡಿವಿಡೆಂಡ್ ನೀಡಿರುವ ಉದಾಹರಣೆ ರಾಜ್ಯದಲ್ಲೇ ಮೊದಲು ಎನಿಸಿದೆ. ಇಷ್ಟೇ ಅಲ್ಲದೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲಕ್ಕೆ ಹಲವು ವರ್ಷಗಳಿಂದ ಶಿಕ್ಷಣ ನಿಧಿಯನ್ನೂ ನೀಡಲಾಗುತ್ತಿದೆ. ಇದು ಕೂಡ ರಾಜ್ಯದಲ್ಲಿ ಒಂದು ದಾಖಲೆಯಾಗಿದೆ. ಇದಕ್ಕೆಲ್ಲ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳಿದರು.

ಕರಾವಳಿ ಸಹಕಾರಿ ಮಾಸಪತ್ರಿಕೆ
ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಕಾರ್ಯಕ್ರಮಗಳು, ದ.ಕ. ಮತ್ತು ಉಡುಪಿ ಜಿಲ್ಲೆಗಳ ಸಹಕಾರ ಸಂಘಗಳ ಕಾರ್ಯಕ್ರಮಗಳು, ಮಾಹಿತಿಯುಕ್ತ ಬರವಣಿಗೆಗಳು, ಸಾಧನಾಪಥಗಳು ಇತ್ಯಾದಿಗಳನ್ನು ಸಹಕಾರಿ ವಲಯದಲ್ಲಿ ಪ್ರಚುರಪಡಿಸಲು ಕರಾವಳಿ ಸಹಕಾರಿ ಎಂಬ ಮಾಸಪತ್ರಿಕೆಯನ್ನು ದ.ಕ. ಜಿಲ್ಲಾ ಸಹಕಾರ ಯೂನಿಯನ್‌ನಿಂದ ಹೊರತರಲಾಗುತ್ತಿದೆ. ಈ ಪತ್ರಿಕೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳಿಗೂ ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯ ಸಹಕಾರ ಸಂಸ್ಥೆಗಳ ಪ್ರಗತಿ ಯಶೋಗಾಥೆ ಪರಿಚಯ- ಸಂದರ್ಶನ ಸೇರಿದಂತೆ ಒಟ್ಟಾರೆ ಚಳವಳಿಯ ಸಮಗ್ರ ಮಾಹಿತಿಗಳನ್ನು ಸಹಕಾರಿಗಳಿಗೆ ತಲುಪಿಸುವ ಉದ್ದೇಶದಿಂದ ಜಿಲ್ಲಾ ಯೂನಿಯನ್ ವತಿಯಿಂದ ಕರಾವಳಿ ಸಹಕಾರಿ ಎಂಬ ಮಾಸಪತ್ರಿಕೆಯನ್ನು ಆರಂಭಿಸಲಾಗಿದೆ ಎಂದು ಯೂನಿಯನ್‌ನ ನಿರ್ದೇಶಕ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು.
ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಗೌರವಿಸಲಾಯಿತು. ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ದ.ಕ. ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷರಾದ ನೀಲಯ ಎಂ.ಅಗರಿ, ನಿರ್ದೇಶಕರಾದ ಚಿತ್ತರಂಜನ್ ಬೋಳಾರ್, ಪದ್ಮಶೇಖರ ಜೈನ್, ಸುಧಾಕರ ಶೆಟ್ಟಿ, ಕೆ. ಸಂಜೀವ ಪೂಜಾರಿ, ಸವಿತಾ ಎನ್ ಶೆಟ್ಟಿ, ಜೋಯ್ಲಸ್ ಡಿಸೋಜ, ಸಾವಿತ್ರಿ ರೈ ಕೆ., ಸತೀಶ್ ಕೆ., ವಿಷ್ಣು ಭಟ್, ಮಂಜುನಾಥ್ ಎನ್. ಎಸ್, ಪ್ರವೀಣ್ ಪಿಂಟೋ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


