ನವದೆಹಲಿ: ಭಾರತೀಯ ರಾಷ್ಟ್ರೀಯ ಸಹಕಾರಿ ಒಕ್ಕೂಟದ (ಎನ್‌ಸಿಯುಐ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕರ್ನಾಟಕದ ಜಿ.ಟಿ ದೇವೇಗೌಡ ಮತ್ತು ಅಗಡಿ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಕರ್ನಾಟಕದ ಹಿರಿಯ ಸಹಕಾರಿ ಎಚ್.ಕೆ ಪಾಟೀಲ್ ಅವರ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ಕಂಡುಬಂದಿವೆ. ನಾಮಪತ್ರ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ ದೇವೇಗೌಡ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಅಗಡಿ ಅಶೋಕ್ ಅವರ ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ಹಾಗೂ ಅವರ ಸ್ಥಾನಕ್ಕೆ ಎದುರಾಳಿಗಳು ಇಲ್ಲದ ಕಾರಣ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಮಂಗಳವಾರ ನಾಮಪತ್ರ ಪರಿಶೀಲನೆಯ ನಂತರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ 40 ನಾಮಪತ್ರಗಳು 37 ಮಾನ್ಯವೆಂದು ಕಂಡುಬಂದರೆ, ಮೂರು ನಾಮಪತ್ರಗಳು ತಿರಸ್ಕೃತಗೊಂಡಿವೆ. ತಿರಸ್ಕೃತಗೊಂಡ ನಾಮಪತ್ರಗಳಲ್ಲಿ ಛತ್ತೀಸ್‌ಗಢ ರಾಜ್ಯ ಸಹಕಾರಿ ಸಂಘದ ಆಡಳಿತಾಧಿಕಾರಿ ಸೌರಭ್ ಶರ್ಮ, ತೆಲಂಗಾಣ ಸಹಕಾರಿ ಒಕ್ಕೂಟದ ಟಿಪ್ಪಿ ಮೋಹನ್ ರೆಡ್ಡಿ ಮತ್ತು ಇಫ್ಕೋ ನಿರ್ದೇಶಕ ಮತ್ತು ಉತ್ತರ ಪ್ರದೇಶ ಸಹಕಾರಿ ಒಕ್ಕೂಟದ ಅಧ್ಯಕ್ಷ ವಾಲ್ಮೀಕಿ ತ್ರಿಪಾಠಿ ಸೇರಿದ್ದಾರೆ. ಅವಿರೋಧ ಆಯ್ಕೆಯಲ್ಲಿ ಜಿ.ಟಿ ದೇವೇಗೌಡ ಮತ್ತು ಅಗಡಿ ಅಶೋಕ್ ಸೇರಿ ಒಟ್ಟು ಎಂಟು ಅಭ್ಯರ್ಥಿಗಳು ಸೇರಿದ್ದು, ಪ್ರವೀಣ್ ದಾರೇಕರ್, ಜಿ.ಎಚ್. ಅಮೀನ್, ಸುನಿಲ್ ಕುಮಾರ್, ಟಿ.ಪ್ರಸಾದ್ ಡೋರಾ, ಮೇಘನಾದ್ ಪಾಲ್ ಮತ್ತು ಮುದಿತ್ ವರ್ಮ ಅವರಿದ್ದಾರೆ.
ಭಾರತದ ಉತ್ತರ ಮತ್ತು ಪೂರ್ವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಬಹು-ರಾಜ್ಯ ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ಸ್ಪರ್ಧೆಯ ಸಾಧ್ಯತೆಗಳಿವೆ. ಇಲ್ಲಿ, ಹಿಂಪಡೆಯುವ ಮೊದಲು ಎಂಟು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 44 ಮತದಾರರಿದ್ದಾರೆ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶವನ್ನು ಪ್ರತಿನಿಧಿಸುವ ರಾಜ್ಯ ಸಹಕಾರಿ ಸಂಘಗಳ ಕ್ಷೇತ್ರದಲ್ಲೂ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಇಲ್ಲಿ ಒಂದು ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಇಫ್ಕೋ ನಿರ್ದೇಶಕ ಪ್ರದೀಪ್ ಕುಮಾರ್ ಮತ್ತು ಎನ್‌ಸಿಡಿಸಿ ಜನರಲ್ ಕೌನ್ಸಿಲ್ ಸದಸ್ಯ ಧನಂಜಯ್ ಸಿಂಗ್ ನಡುವೆ ಸ್ಪರ್ಧೆ ಇದ್ದು, ಒಬ್ಬರು ಹಿಂದೆ ಸರಿಯುತ್ತಾರೋ ಅಥವಾ ಆ ಸ್ಥಾನ ಚುನಾವಣೆಗೆ ಹೋಗುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ. ಉತ್ತರದ ಮತ್ತೊಂದು ರಾಜ್ಯ ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ಮಂಗಳಜಿತ್ ರೈ ಮತ್ತು ಜೀನಾ ಪೋತ್ಸಂಗ್‌ಬಮ್ ಒಂದು ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ನಗರ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸಂಘಗಳ ರಾಷ್ಟ್ರೀಯ ಒಕ್ಕೂಟವನ್ನು ಪ್ರತಿನಿಧಿಸುವ ಒಂದು ಸ್ಥಾನವು ಯಾವುದೇ ಅಭ್ಯರ್ಥಿ ಹಿಂದೆ ಸರಿಯದಿದ್ದರೆ ಸ್ಪರ್ಧೆಗೆ ಸಾಕ್ಷಿಯಾಗಬಹುದು. ಹಿರಿಯ ಸಹಕಾರಿ ನಾಯಕ ಎಚ್.ಕೆ. ಪಾಟೀಲ್ ಅವರ ವಿರುದ್ಧ ಸುನಿಲ್ ಗುಪ್ತಾ ಸ್ಪರ್ಧಿಸಲಿದ್ದಾರೆ.







