ಬಿ.ಸಿ.ರೋಡ್ ಶಾಖೆಯ ನವೀಕೃತ, ಹವಾನಿಯಂತ್ರಿತ ಶಾಖೆ ಉದ್ಘಾಟಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಶ್ಲಾಘನೆ
ಬಂಟ್ವಾಳ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತರಿತ ಹಾಗೂ ಹವಾನಿಯಂತ್ರಿತ ಬಿ.ಸಿ.ರೋಡ್ ಶಾಖೆಯ ಉದ್ಘಾಟನಾ ಸಮಾರಂಭ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಬಿ.ಸಿ.ರೋಡ್‌ನಲ್ಲಿ 2012ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಿ.ಸಿ.ರೋಡ್ ಶಾಖೆಯು ಸಂಘದ ಸದಸ್ಯರ ಅಪೇಕ್ಷೆಯಂತೆ ವಿಸ್ತಾರಗೊಂಡು ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಯಾಗಿ ಪರಿವರ್ತಿತಗೊಂಡಿದೆ.
https://chat.whatsapp.com/FCEnlTkAKCC0MGPhXtX4i4
ಮಾಜಿ ಸಚಿವರಾದ ಬಿ.ರಮಾನಾಥ ರೈಯವರು ನವೀಕೃತ, ವಿಸ್ತರಿತ ಹಾಗೂ ಹವಾನಿಯಂತ್ರಿತ ಬಿ.ಸಿ.ರೋಡ್ ಶಾಖೆಯನ್ನು ಉದ್ಘಾಟಿಸಿ, ಮಾತನಾಡಿ ಆತ್ಮಶಕ್ತಿ ಸಹಕಾರ ಸಂಘವು ಮಂಗಳೂರಿನ ಪಡೀಲ್‌ನಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ 33 ಶಾಖೆಗಳನ್ನು ಹೊಂದಿದೆ. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಸಂಘವಾಗಿ ಹೆಸರು ಮಾಡಿದೆ. ಈ ಕಾರ್ಯಕ್ರಮವು ಸಹಕಾರಿ ಸಂಘಗಳ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ. ನೂತನ ಶಾಖೆಯಲ್ಲಿ ಗ್ರಾಹಕರಿಗೆ ಇನ್ನಷ್ಟು ಸೌಲಭಗಳು ದೊರೆಯಲಿ” ಎಂದು ಶುಭ ಹಾರೈಸಿದರು.
ದೇಯಿ ಬೈದೈತಿ –ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಭದ್ರತಾ ಕೋಶವನ್ನು ಉದ್ಘಾಟಿಸಿ ಮಾತನಾಡಿ, ಆತ್ಮಶಕ್ತಿ ಸಹಕಾರ ಸಂಘವು ಕೇವಲ ಹದಿನಾಲ್ಕು ವರ್ಷಗಳಲ್ಲಿ ಉತ್ತಮ ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಸಹಕಾರಿ ರಂಗದಲ್ಲಿ ಮಾಡಿರುವ ಸಾಧನೆಗಳು ಶ್ಲಾಘನೀಯ. ಆತ್ಮಶಕ್ತಿ ಸಂಘವು ಇತರ ಸಹಕಾರಿ ಸಂಘ -ಸಂಸ್ಥೆಗಳಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಯೊನಿಕ್ಸ್ ಮಾಜಿ ಅಧ್ಯಕ್ಷಹರಿಕೃಷ್ಣ ಬಂಟ್ವಾಳ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆರ್ಥಿಕ ಶಕ್ತಿಯನ್ನು ತುಂಬುವ ಹಿನ್ನೆಲೆಯಲ್ಲಿ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ. ಸಂಘವು ತನ್ನ ಕಾರ್ಯವೈಖರಿಯಿಂದ ಜಿಲ್ಲಾದ್ಯಂತ ಉತ್ತಮ ಹೆಸರು ಮಾಡಿದೆ. ಸಂಸ್ಥೆ ಇನ್ನಷ್ಟು ಜನಸಾಮಾನ್ಯರ ಆರ್ಥಿಕ ಶಕ್ತಿಯನ್ನು ಈಡೇರಿಸುವ ಶಕ್ತಿಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ಸೇವೆಯ ಮುಖಾಂತರ ಜನರಿಗೆ ಶಕ್ತಿ ನೀಡುತ್ತಿರುವ ಸಂಘವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಸೇವೆ ನೀಡುತ್ತಿದೆ. ಸಂಘದ ಅಭಿವೃದ್ದಿಯಲ್ಲಿ ಸಂಘದ ಸಿಬ್ಬಂದಿಗಳ ಪಾತ್ರವು ತುಂಬಾ ಮುಖ್ಯವಾಗಿದೆ ಎಂದರು.
ಸುಮಂಗಲಾ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿ ಅಧ್ಯಕ್ಷರಾದ ನಾಗೇಶ್ ಕಲ್ಲಡ್ಕ ಮಾತನಾಡಿ ಒಳ್ಳೆಯ ಕಾರ್ಯನಿರ್ವಹಣೆ ಹಾಗೂ ತಾಂತ್ರಿಕ ವ್ಯವಸ್ಥೆ ಇದ್ದರೆ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉತ್ತಮ ಉದಾಹರಣೆಯಾಗಿದೆ. ಸಹಕಾರಿಗಳಾದ ನಾವೆಲ್ಲರೂ ಒಟ್ಟಿಗೆ ಯಾವುದೇ ಪೈಪೋಟಿ ಇಲ್ಲದೇ ಸಹಕಾರಿ ರಂಗದಲ್ಲಿ ವ್ಯವಹಾರ ಮಾಡುತ್ತಿದ್ದು, ನಮ್ಮ ಸಂಘಗಳ ನಿಯಮಗಳನ್ನು ಒಪ್ಪಿಕೊಂಡವರು ನಮ್ಮಲ್ಲಿ ವ್ಯವಹಾರ ಮಾಡುತ್ತಾರೆ ಎಂದರು.
ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬಿ.ಸಿ ರೋಡ್ ಇದರ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೋ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪಾದರಸದಂತೆ ಚುರುಕಾದ ಸಂಸ್ಥೆಯಾಗಿದ್ದು, ಕೇವಲ ಹದಿನಾಲ್ಕು ವರ್ಷಗಳಲ್ಲಿ 310 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದೆ. ಗ್ರಾಹಕರಿಗೆ ಇನ್ನೂ ಉತ್ತಮ ಸೇವೆಯನ್ನು ನೀಡುತ್ತಾ ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಖೆಯನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಬಿ.ಸಿ ರೋಡ್ ಶಾಖೆಯು ಸಂಘದ ಸದಸ್ಯರ ಅಪೇಕ್ಷೆಯಂತೆ ವಿಸ್ತಾರಗೊಂಡು ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಯಾಗಿ ಪರಿವರ್ತನೆ ಮಾಡಲಾಗಿದೆ. ನೂತನ ಶಾಖೆಯ ಉದ್ಘಾಟನಾ ಪ್ರಯುಕ್ತ 100 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.8.50, 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.00 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50 ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಟ ಮೌಲ್ಯ ರೂ. 12,000ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು. ಎಂದು ಹೇಳಿದರು.
ಸಮಾರಂಭದಲ್ಲಿ ಬಿ.ಸಿ.ರೋಡ್ ಶಾಖೆಯ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಸದಸ್ಯರನ್ನು ಗೌರವಿಸಲಾಯಿತು. ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಬಂಟ್ವಾಳ ಇದರ ಅಧ್ಯಕ್ಷರಾದ ಸುಭಾಷ್‌ಚಂದ್ರ ಜೈನ್, ಕಾವಳಮೂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಬಿ.ಸಿ.ರೋಡ್ ಶಾಖೆಯ ಕಟ್ಟಡದ ಮಾಲೀಕರಾದ ವಿಶ್ವನಾಥ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಆನಂದ್ ಎಸ್.ಕೊಂಡಾಣ, ಸೀತಾರಾಮ್ ಎನ್, ಮುದ್ದು ಮೂಡಬೆಳ್ಳೆ, ಗೋಪಾಲ್ ಎಮ್., ಚಂದ್ರಾವತಿ ಮತ್ತಿತರರು ಪಾಲ್ಗೊಂಡಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿ, ಉಪಾಧ್ಯಕ್ಷರಾದ ನೇಮಿರಾಜ್ ಪಿ ವಂದಿಸಿದರು. ಸಹಾಯಕ ಪ್ರಭಂದಕರಾದ ವಿಶ್ವನಾಥ್ ಹಾಗೂ ಶಾಖಾಧಿಕಾರಿ ಸುರಕ್ಷಾ ಡಿ. ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

