ಸಾಂವಿಧಾನಿಕ ಮೌಲ್ಯಗಳಿಗೆ ಗೌರವ, ಜಾಗೃತಿ ಹೆಚ್ಚಿಸಲು ದಿನದ ಆಚರಣೆ
ಡಾ. ಎಸ್ ಆರ್ ಹರೀಶ್ ಆಚಾರ್ಯ
ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ 1947ರ ಆಗಸ್ಟ್ 15ರಂದು ಮೊದಲನೇ ಸ್ವಾತಂತ್ರ್ಯ ದಿನ ಆಚರಿಸಿತು. ಅದಾದ ಸುಮಾರು ಎರಡೂವರೆ ವರ್ಷಗಳ ಬಳಿಕ ದೇಶದ ಪ್ರಥಮ ಪ್ರಜಾಪ್ರಭುತ್ವ ದಿನವನ್ನು 1950ರ ಜನವರಿ 26ರಂದು ಆಚರಿಸಲಾಯಿತು. ನಮ್ಮ ದೇಶದಲ್ಲಿ ಸಾಂವಿಧಾನಿಕವಾಗಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಭಾರತದ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ. ಆದರೆ ವರ್ತಮಾನ ಕಾಲದಲ್ಲಿ ಸಂವಿಧಾನಕ್ಕೆ ಅಪಚಾರ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಎಂಬ ಆರೋಪಗಳು ಕೇಳುತ್ತಲೇ ಇದ್ದು ಪ್ರತಿಪಕ್ಷಗಳಂತೂ ಸಂವಿಧಾನ ಪ್ರತಿಯನ್ನು ಹಿಡಿದು ತಿರುಗುಷ್ಟರ ಮಟ್ಟಿಗೆ ಭಾರತದ ಸಂವಿಧಾನವನ್ನೇ ಪ್ರಶ್ನಿಸುವಷ್ಟರ ಮಟ್ಟಿಗೆ ಕಾಲ ಮುಂದುವರಿದಿದೆ. ಆದರೆ ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿಕೊಡುವ ದಿನವೊಂದಿದೆ ಎಂದು ಇನ್ನೂ ಅನೇಕರಿಗೆ ತಿಳಿದಿಲ್ಲ. ಅದುವೇ ಸಂವಿಧಾನ ದಿನ.
https://chat.whatsapp.com/JVAtKKe2M19AFO3W5629ZS?mode=ems_copy_t
ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನ ಆಚರಿಸುವಂತೆ 2015ರ ನವೆಂಬರ್ 19ರಂದು ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತು. ಇದಕ್ಕೂ ಮೊದಲು 2015ರ ಅಕ್ಟೋಬರ್ 11ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಸಂದರ್ಭ ಅವರ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಘೋಷಣೆ ಮಾಡಿದ್ದರು. ಅದರಂತೆ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ನವೆಂಬರ್ 26, 1949ರಂದು ಸಂವಿಧಾನ ಸಭೆಯು ‘ಭಾರತದ ಸಂವಿಧಾನ’ವನ್ನು ಔಪಚಾರಿಕವಾಗಿ ಅಂಗೀಕರಿಸಿದ ದಿನ. ಇದೇ ಕಾರಣಕ್ಕೆ ಈ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳಿಗೆ ಗೌರವ ಹಾಗೂ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.
ವಾಸ್ತವವಾಗಿ ನವೆಂಬರ್ 26 ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ದಿನವಾಗಬೇಕು. ಪ್ರತಿ ಭಾರತೀಯನಿಗೂ ಸಮಾನತೆಯ ಹಕ್ಕು, ಮುಕ್ತವಾಗಿ ಬದುಕುವ ಹಕ್ಕು ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ನೀಡುವ ದಾಖಲೆಯನ್ನು ರಚಿಸಿದ ದಿನ ಇದಾಗಿದೆ. ಯಾವುದೇ ವ್ಯಕ್ತಿಯ ಹಕ್ಕುಗಳನ್ನು ನಿರಾಕರಿಸದಂತೆ ನೋಡಿಕೊಳ್ಳಲು ಈ ಸಂವಿಧಾನ ರೂಪಿಸಲು ಹಗಲಿರುಳು ಪ್ರಯತ್ನ ನಡೆದಿತ್ತು. ಸಂವಿಧಾನ ರಚನೆಯ ಬಗ್ಗೆ ಹಲವಾರು ದೃಷ್ಟಿಕೋನಗಳು ಎದ್ದು ಬಂದಿದ್ದರಿಂದ ಅದರ ಪ್ರತಿಯೊಂದು ಅಂಶವನ್ನೂ ತಿದ್ದಿ ತೀಡಿ, ತೇಯ್ದೆ ತೆಗೆಯಲು ಸುಮಾರು ಮೂರು ವರ್ಷಗಳೇ ಬೇಕಾಯಿತು. ನಮ್ಮದ್ದು ವೈವಿಧ್ಯತೆಯಿಂದ ಕೂಡಿರುವ ದೇಶವಾಗಿರುವ ಕಾರಣ ಸಂವಿಧಾನ ರಚನೆಯ ಕೆಲಸ ಸುಲಭದ ಕೆಲಸವಾಗಿರಲಿಲ್ಲ. ಎಲ್ಲಾ ಧರ್ಮಗಳು, ನಂಬಿಕೆಗಳು, ಜಾತಿಗಳು ಮತ್ತು ವೈವಿಧ್ಯಮಯ ಸಿದ್ಧಾಂತಗಳ ಜನರನ್ನು ಒಟ್ಟುಗೂಡಿಸುವುದು ಹಾಲು ಕುಡಿದಷ್ಟೇ ಸಲೀಸು ಆಗಿರಲಿಲ್ಲ. ಈ ವರ್ಷದ ಸಂವಿಧಾನ ದಿನದ ಧ್ಯೇಯವಾಕ್ಯ ನಮ್ಮ ಸಂವಿಧಾನ -ನಮ್ಮ ಸ್ವಾಭಿಮಾನ. ಈ ದಿನದಂದು, ಸಾಂವಿಧಾನಿಕ ಸಾಕ್ಷರತೆ ಮತ್ತು ನಾಗರಿಕರಲ್ಲಿ ದೇಶದ ಕುರಿತಾದ ಹೆಮ್ಮೆಯನ್ನು ಉತ್ತೇಜಿಸಲು ದೇಶಾದ್ಯಂತ ಸ್ಪರ್ಧೆಗಳು, ಅಭಿಯಾನಗಳು ಮತ್ತು ಸಂವಿಧಾನದ ಪೀಠಿಕೆಯ ಸಾಮೂಹಿಕ ಓದುವಿಕೆಯಂತಹ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಸಾಂವಿಧಾನಿಕ ಘನತೆ, ಏಕತೆ ಮತ್ತು ನಾಗರಿಕರ ಭಾಗವಹಿಸುವಿಕೆಗಾಗಿ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಾಗುತ್ತದೆ. ಎಲ್ಲಾ ಹಂತದ ಪ್ರಮುಖ ಚಟುವಟಿಕೆಗಳು ಮತ್ತು ಸ್ಪರ್ಧೆಗಳು ಸಾಂವಿಧಾನಿಕ ಮೌಲ್ಯಗಳು, ರಾಷ್ಟ್ರೀಯ ಕರ್ತವ್ಯಗಳು ಮತ್ತು ನಾಗರಿಕ ಹೆಮ್ಮೆಯ ವಿಷಯಗಳನ್ನು ಆಧರಿಸಿರುತ್ತವೆ. ಆದರೆ ಸುಮಾರು ಮೂರು ವರ್ಷಗಳ ಕಾಲ ಕುಳಿತು ರಚಿಸಿದ ಸಂವಿಧಾನದ ಕುರಿತ ಆಚರಣೆ ಇಂದು ಕೇವಲ ಸಂವಿಧಾನದ ಪೀಠಿಕೆ ಓದಿ ಮುಗಿಸಲಷ್ಟೇ, ಸ್ಪರ್ಧೆಗಳ ಆಯೋಜನೆಗಷ್ಟೇ, ಅಭಿಯಾನಕ್ಕಷ್ಟೇ ಸೀಮಿತವಾಗಿರುವುದು ಖೇದಕರ ಸಂಗತಿ.
ಸಂವಿಧಾನ ದಿನದ ಆಚರಣೆ ಕೇವಲ ಪೀಠಿಕೆ ಓದಿ ಮುಗಿಸಲಷ್ಟೇ ಸೀಮಿತವಾಗಿರಬೇಕೆ? ಪೀಠಿಕೆ ಎಂಬುದು ಭಾರತದ ಸಂವಿಧಾನದ ಆತ್ಮ ಎಂದು ಅಂಬೇಡ್ಕರ್ ಅವರೇ ಬಣ್ಣಿಸಿದ್ದರೂ ನಿಜವಾದ ಸಂವಿಧಾನದ ಮೌಲ್ಯವನ್ನು ಅರಿಯಲು ಅದರ ಒಳಹೊಕ್ಕು ಓದಬೇಕು. ಪೀಠಿಕೆಯ ಓದು ಸಂವಿಧಾನದ ಭಾವಾರ್ಥವನ್ನು ಸೂಚಿಸಿದ್ದರೂ ಒಟ್ಟು ಮೌಲ್ಯವನ್ನು ಅರಿಯಲು ಸಂವಿಧಾನದ ಪುಟಪುಟವನ್ನೂ ಅರಿಯಬೇಕು.

ಸಂವಿಧಾನವನ್ನು ಹೇಗೆ ರಚಿಸಲಾಯಿತು..?
ಭಾರತೀಯ ಸಂವಿಧಾನವನ್ನು ರಚಿಸಲು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳು ಬೇಕಾಯಿತು. ನವೆಂಬರ್ 26, 1949ರಂದು ನಮ್ಮ ಸಂವಿಧಾನವು ಪೂರ್ಣಗೊಂಡಿತು. ನಮ್ಮದು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ. ಸಂವಿಧಾನವನ್ನು ರಚಿಸುವಾಗ ಜನಸಾಮಾನ್ಯರ ಜೀವನ ಸುಧಾರಣೆಯ ತತ್ವಗಳನ್ನು ಅಳವಡಿಸಲಾಯಿತು. ಇದಕ್ಕಾಗಿ ಅಮೆರಿಕಾ, ಐರ್ಲೆಂಡ್, ಕೆನಡಾ, ಜಪಾನ್, ಆಸ್ಟ್ರೇಲಿಯಾ, ಬ್ರಿಟನ್ ಮೊದಲಾದ ದೇಶಗಳ ಸಂವಿಧಾನಗಳ ಅಧ್ಯಯನವನ್ನೂ ಮಾಡಲಾಯಿತು. ಆ ದೇಶಗಳ ಸಂವಿಧಾನಗಳಿಂದ ನಾಗರಿಕರ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ಸರ್ಕಾರದ ಪಾತ್ರ, ಪ್ರಧಾನಿ, ಅಧ್ಯಕ್ಷರು, ರಾಜ್ಯಪಾಲರು ಮತ್ತು ಚುನಾವಣಾ ಪ್ರಕ್ರಿಯೆಯಂತಹ ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಆಸಕ್ತಿದಾಯಕ ಸಂಗತಿಗಳು
* ಸುಮಾರು ವರ್ಷಗಳ ಕಾಲ ನಡೆದ ಸಂವಿಧಾನದ ಕರಡು ರಚನೆಯ ಸಮಯದಲ್ಲಿ ನಡೆದ ಚರ್ಚೆಗಳಲ್ಲಿ 53,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
* ಭಾರತದ ಸಂವಿಧಾನ ಮೊದಲ ಅಳವಡಿಕೆಯಾದಾಗ 395 ವಿಧಿಗಳು, 22 ಭಾಗಗಳು, ಮತ್ತು 8 ಅನುಸೂಚಿಗಳಿದ್ದು, ವಿಶ್ವದ ಅತಿ ಉದ್ದದ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
* ಸಂವಿಧಾನವನ್ನು ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಕೈಬರಹದ ಕ್ಯಾಲಿಗ್ರಫಿಯಲ್ಲಿ ಬರೆಯಲಾಗಿದೆ. ಇದರ ಮೂಲ ಪ್ರತಿಗಳನ್ನು ಪ್ರೇಮ್ ಬಿಹಾರಿ ನಾರಾಯಣ ರೈಜಾದಾ ಅವರು ಕ್ಯಾಲಿಗ್ರಫಿ ಮಾಡಿದ್ದು, ಆಚಾರ್ಯ ನಂದಲಾಲ್ ಬೋಸ್ ಅವರ ನೇತೃತ್ವದಲ್ಲಿ ಶಾಂತಿನಿಕೇತನದ ಕಲಾವಿದರು ಕೈಯಿಂದ ರಚಿಸಿದ್ದಾರೆ. ಸಂವಿಧಾನದ ಮೂಲ ಪ್ರತಿಗಳನ್ನು ಈಗಲೂ ಸಹ ಸಂಸತ್ತಿನ ಗ್ರಂಥಾಲಯದಲ್ಲಿ ಸಾರಜನಕ ತುಂಬಿದ ಪೆಟ್ಟಿಗೆಗಳಲ್ಲಿ ಸಂರಕ್ಷಿಸಲಾಗಿದೆ.
* ಸಂವಿಧಾನದ ಪ್ರತಿ ಭಾಗವು ಭಾರತದ ಇತಿಹಾಸವನ್ನು ಚಿತ್ರಿಸುವ ಕಲಾಕೃತಿಯೊಂದಿಗೆ ಪ್ರಾರಂಭವಾಗುತ್ತದೆ. ನಂದಲಾಲ್ ಬೋಸ್ ಅವರು ರಚಿಸಿದ 22 ಕಲಾಕೃತಿಗಳು ಸಿಂಧೂ ಕಣಿವೆ, ವೈದಿಕ ಅವಧಿ, ಗುಪ್ತ ಮತ್ತು ಮೌರ್ಯ ಸಾಮ್ರಾಜ್ಯಗಳು, ಮೊಘಲ್ ಯುಗ ಮತ್ತು ಸ್ವಾತಂತ್ರ್ಯ ಚಳುವಳಿಯ ದೃಶ್ಯಗಳನ್ನು ಚಿತ್ರಿಸಿವೆ.
* ಜನವರಿ 24, 1950ರಂದು, 284 ಸದಸ್ಯರು ನವದೆಹಲಿಯ ಸಂವಿಧಾನ ಭವನದಲ್ಲಿ ಭಾರತದ ಸಂವಿಧಾನಕ್ಕೆ ಸಹಿ ಹಾಕಿದರು. ಅದೇ ದಿನ ಡಾ.ರಾಜೇಂದ್ರ ಪ್ರಸಾದ್ ಅವರು ಭಾರತದ ಮೊದಲ ರಾಷ್ಟ್ರಪತಿಯಾಗಿ ಘೋಷಿಸಲ್ಪಟ್ಟರು.
* ಸಂವಿಧಾನ ರಚನಾ ಸಭೆಯಲ್ಲಿ ಸರೋಜಿನಿ ನಾಯ್ಡು, ರಾಜಕುಮಾರಿ ಅಮೃತ್ ಕೌರ್, ಹನ್ಸಬೆನ್ ಮೆಹ್ತಾ, ಸುಚೇತಾ ಕೃಪಲಾನಿ, ಜಿ.ದುರ್ಗಾಬಾಯಿಯವರನ್ನೊಳಗೊಂಡಂತೆ 15 ಮಹಿಳಾ ಸದಸ್ಯರು ಸಮಾನ ಹಕ್ಕುಗಳಿಗಾಗಿ ಬೇಡಿಕೆ ಮಂಡಿಸಿದ್ದರು.
* 2 ವರ್ಷ 11 ತಿಂಗಳು, 17 ದಿನಗಳ ಅವಧಿಯಲ್ಲಿ ರಚಿಸಿದ ಸಂವಿಧಾನ ನಮ್ಮದಾಗಿದ್ದು, ಇಂಗ್ಲಿಷ್‌ನಲ್ಲಿ ಒಟ್ಟು 1,17,369 ಪದಗಳನ್ನು ಹೊಂದಿದೆ.
ಈ ಹಿಂದೆ ಕಾನೂನು ದಿನದ ಆಚರಣೆ
ಕುತೂಹಲಕರ ವಿಷಯವೆಂದರೆ ಸಂವಿಧಾನ ದಿನ ಎಂಬ ಆಚರಣೆ ಆರಂಭವಾಗಿದ್ದು 2015ರಿಂದ. ಅದಕ್ಕೂ ಹಿಂದೆ ಕಾನೂನು ದಿನ ಆಚರಿಸಲಾಗುತ್ತಿತ್ತು. 1930ರಲ್ಲಿ ಅಂದಿನ ಕಾಂಗ್ರೆಸ್ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯಕ್ಕೆ ಪಣ ತೊಡಲಾಯಿತು. ಆ ಐತಿಹಾಸಿಕ ದಿನ ಕೂಡ ನವೆಂಬರ್ 26 ಆಗಿದೆ. ಸಂವಿಧಾನ ರಚನಾ ಸಭೆಯನ್ನು ರೂಪಿಸಿದ್ದು 1946ರಲ್ಲಿ. ಆಗ ಭಾರತದ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾದೇಶದಿಂದಲೂ ಪ್ರತಿನಿಧಿಗಳು ಆ ಸಭೆಯಲ್ಲಿ ಭಾಗವಹಿಸಿದ್ದರು. ವಿಭಜನೆ ಆದ ಬಳಿಕ ಅವೆರಡು ದೇಶಗಳು ಪ್ರತ್ಯೇಕ ಸಂವಿಧಾನ ರೂಪಿಸಿವೆ.
ಹೇಗಿರಬೇಕು ಆಚರಣೆ?
ಹತ್ತು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸಂವಿಧಾನ ದಿನದ ಆಚರಣೆ ಬಗ್ಗೆ ಘೋಷಣೆ ಮಾಡಿ ಆಚರಣೆಗಳು ಆರಂಭವಾಗಿವೆ. ಆದರೆ ಆಚರಣೆಯ ರೀತಿಗಳು ಗಂಭೀರವಾಗಿವೆಯೇ…? ಬೆಳಗ್ಗೆ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಓದಿ ಮುಗಿಸಿದರೆ ಮುಗಿಯಿತು. ಆ ಬಳಿಕ ಅದರ ನೆನಪಾಗುವುದು ಮುಂದಿನ ವರ್ಷವೇ ಎಂದಾದರೆ ಆಚರಣೆಗೆ ಅರ್ಥವೇನು? ಕೇಂದ್ರ ಸರ್ಕಾರದ ಪೋರ್ಟರ್‌ಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಅದರ ಕನಿಷ್ಠ ಮಾಹಿತಿಯೂ ಜನರಿಗೆ ಇರುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಆಯೋಜಿಸುವ ಕಾರ್ಯಕ್ರಮಗಳ ಸಮರ್ಪಕ ಮಾಹಿತಿ ಇರದೆ ಜನ ಪ್ರಮುಖ ವಿಷಯಗಳಲ್ಲಿ ಭಾಗವಹಿಸುವುದನ್ನೇ ಮರೆತುಬಿಡುತ್ತಾರೆ. ಹೇಗೆ ಸ್ವಾತಂತ್ರ್ಯ ದಿನಾಚರಣೆಗೆ ಸರ್ಕಾರಗಳು ಆದ್ಯತೆ ಕೊಡುತ್ತವೆಯೋ ಅದೇ ರೀತಿ ಸಂವಿಧಾನ ದಿನದ ಆಚರಣೆಗೆ ಮಹತ್ವ ಕೊಡಬೇಕು. ಕೇವಲ ಸಂವಿಧಾನದ ಪೀಠಿಕೆ ಓದಿ ಮುಗಿಸುವ ಬದಲು ಪಂಚಾಯತಿ ವ್ಯಾಪ್ತಿಯಲ್ಲೋ, ಶಾಲಾ -ಕಾಲೇಜು ಮಟ್ಟದಲ್ಲೋ ಈ ಕುರಿತ ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆಗೆ ಮಹತ್ವ ನೀಡಬೇಕು. ಆಗ ಒಂದಷ್ಟು ಜನರಾದರೂ ಸಂವಿಧಾನದ ಪುಟಗಳನ್ನು ತಿರುವಿ ಹಾಕಿಯಾರು. ಇಲ್ಲದಿದ್ದರೆ ಸಂವಿಧಾನ ದಿನದ ಆಚರಣೆಯೂ ಮತ್ತೊಂದು “ಮಹಾನುಭಾವರ ಜಯಂತಿʼʼ ಆಚರಣೆಯಂತೆ ಕಾಟಾಚಾರದಲ್ಲಿ ಮುಗಿದು ಹೋದೀತು.

ಲೇಖನ: ಡಾ. ಎಸ್ ಆರ್ ಹರೀಶ್ ಆಚಾರ್ಯ,
ಅಧ್ಯಕ್ಷರು, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ.

