22.55 ಲಕ್ಷ ರೂ. ಲಾಭ, ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ
ಉಡುಪಿ: ಇಲ್ಲಿನ ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ನಿ. ಪರ್ಕಳ ಇದರ 13ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಭಾನುವಾರ ಪರ್ಕಳದ ಶ್ರೀ ಸುರಕ್ಷಾ ಸಭಾಭವನದಲ್ಲಿ ನಡೆಯಿತು. ಸೊಸೈಟಿಯು 22.55 ಲಕ್ಷ ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಸಹಕಾರಿಯ ಅಧ್ಯಕ್ಷರಾದ ಬಿ.ಎಚ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಹಕಾರಿಯ ಬೆಳವಣಿಗೆಗೆ ಸದಸ್ಯರ ಸಹಕಾರ ತುಂಬಾ ಮುಖ್ಯ. ಮುಂದೆ ಕೂಡಾ ಇದೇ ರೀತಿಯಲ್ಲಿ ಸದಸ್ಯರು ಸಹಕಾರ ನೀಡಿ ಸೊಸೈಟಿಯ ಅಭಿವದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿನಂತಿಸಿದರು. ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರತ್ನಾ ಎಸ್.ಶೆಟ್ಟಿಯವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಈ ಆರ್ಥಿಕ ವರ್ಷದಲ್ಲಿ ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯು ರೂ.22,55,646 ಲಾಭ ಗಳಿಸಿದೆ ಮತ್ತು ಸದಸ್ಯರಿಗೆ 10% ಡಿವಿಡೆಂಡ್ ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಹಕಾರಿಯ ಸುಸ್ತಿ ಸಾಲದ ಪ್ರಮಾಣವು 0.05% ಮತ್ತು ನಮ್ಮ ಸಹಕಾರಿ ಸತತವಾಗಿ ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆಯುತ್ತಿದೆ ಎಂದು ತಿಳಿಸಿದರು.

ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಈ ಬಾರಿ ಸಹಕಾರಿಗೆ ಸ್ವಂತ ಕಟ್ಟಡ ಖರೀದಿಸುವ ಕುರಿತು ನಿರ್ಣಯ ಮಾಡಲಾಯಿತು. ಸಹಕಾರಿಯ ಸಿಬ್ಬಂದಿಗಳಾದ ಅಶ್ವಿನಿ, ಸೌಮ್ಯ ಮತ್ತು ಗಾಯತ್ರಿ ಪ್ರಾರ್ಥಿಸಿದರು. ಸೊಸೈಟಿಯ ನಿರ್ದೇಶಕಿ ಜಯಲಕ್ಷ್ಮಿ ಶೆಟ್ಟಿಗಾರ್ ಸ್ವಾಗತಿಸಿದರು. ಸಹಕಾರಿಯ ಉಪಾಧ್ಯಕ್ಷರಾದ ಗಂಗಾಧರ ಶೆಟ್ಟಿಗಾರ್, ಸುಕೇಶ್ ಶೆಟ್ಟಿಗಾರ್, ಕಾಂತಪ್ಪ ಶೆಟ್ಟಿಗಾರ್, ಭಾಸ್ಕರ ಶೆಟ್ಟಿಗಾರ್, ಅಶೋಕ ಶೆಟ್ಟಿಗಾರ್, ಜಯಕರ ಶೆಟ್ಟಿಗಾರ್, ಕೊರಗಪ್ಪ ಶೆಟ್ಟಿಗಾರ್, ರುಕ್ಮಯ್ಯ ಶೆಟ್ಟಿಗಾರ್, ಜಯಲಕ್ಷ್ಮಿ ಶೆಟ್ಟಿಗಾರ್ ಮತ್ತು ಶ್ರೀಮತಿ ಸುಮಿತ್ರಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
13 ವರ್ಷಗಳಿಂದ ಉತ್ತಮ ವ್ಯವಹಾರ
ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸಹಕಾರಿಯು 2013ರಲ್ಲಿ ಪ್ರಾರಂಭವಾಗಿ 13 ವರ್ಷಗಳಿಂದ ವ್ಯವಹಾರ ನಡೆಸುತ್ತಿದೆ. ವರದಿ ವರ್ಷದಲ್ಲಿ ಸಹಕಾರಿಯಲ್ಲಿ 16 ಕೋಟಿ ರೂ. ಠೇವಣಿ, 47.90 ಲಕ್ಷ ರೂ. ಪಾಲು ಬಂಡವಾಳ, 54 ಲಕ್ಷ ರೂ. ನಿಧಿಗಳು ಇವೆ. ಸಹಕಾರಿಯ ಒಟ್ಟು ದುಡಿಯುವ ಬಂಡವಾಳ ರೂ.17 ಕೋಟಿ ಮತ್ತು ಒಟ್ಟು ವ್ಯವಹಾರ ರೂ.34 ಕೋಟಿಗೂ ಮೀರಿ ಇರುತ್ತದೆ. ಸಹಕಾರಿಯಲ್ಲಿ ಒಟ್ಟು 2046 ಸದಸ್ಯರಿದ್ದು ಅವರಲ್ಲಿ 1180 ಎ ತರಗತಿಯ ಸಾಮಾನ್ಯ ಸದಸ್ಯರಿದ್ದಾರೆ. ಸೊಸೈಟಿಯಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್, ಆರ್‌ಟಿಸಿ, ನೆಫ್ಟ್, ಆರ್‌ಟಿಜಿಎಸ್ ಮುಂತಾದ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ವೈಯಕ್ತಿಕ ಸಾಲ ಪಡೆದವರಿಗೆ ವಿಮಾ ಸೌಲಭ್ಯ, ಸೇಫ್ ಲಾಕರ್ ಸೌಲಭ್ಯ, ಮತ್ತು ಯುನಿಹೋಮ್ ಪಾಲಿಸಿಯ ಮೂಲಕ ಮೂಲಕ ಆಸ್ತಿ ಅಡಮಾನ ಸಾಲ ಪಡೆದವರಿಗೆ ಆಸ್ತಿಯ ಜತೆಗೆ ವೈಯಕ್ತಿಕ ವಿಮೆಯನ್ನೂ ಮಾಡಿಸಲಾಗುತ್ತಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com








