ಸಮಾವೇಶದಲ್ಲಿ ಮೂಡಿಬರಲಿದೆ ಮಹಿಳೆಯರ ಯಶೋಗಾಥೆ: ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾಹಿತಿ
ಮಂಗಳೂರು: ಮೇ 10ರಂದು ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿರುವ ನವೋದಯ ಸ್ವ ಸಹಾಯ ಗುಂಪುಗಳ ರಜತ ಸಂಭ್ರಮ ಸಮಾರಂಭ ನ ಭೂತೋ ಎಂಬಂತೆ ಅದ್ದೂರಿಯಾಗಿ ನಡೆಯಲಿದೆ ಎಂದು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
https://chat.whatsapp.com/EbVKVnWB6rlHT1mWtsgbch
ಗೋಲ್ಡ್ ಫಿಂಚ್ ಮೈದಾನದಲ್ಲಿ ಸಮಾವೇಶ ನಡೆಯುವ ಸ್ಥಳದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು, ರಾಜ್ಯದಲ್ಲಿ ಇಂಥಹ ಸಮಾವೇಶ ಪ್ರಥಮ ಬಾರಿ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿ ಮಾಡಿರುವ ಕಾರ್ಯಕ್ರಮಗಳು ಇರಬಹುದು. ಆದರೆ ಒಂದೂವರೆ ಲಕ್ಷ ಮಹಿಳೆಯರು ಒಂದೇ ರೀತಿಯ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲ ಸಲ. ಈ ಹಿಂದೆ ಎಂದೂ ನಡೆಯದ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
25 ವರ್ಷಗಳ ಹಿಂದೆ ಆರಂಭವಾದ ನವೋದಯ ಸ್ವಸಹಾಯ ಸಂಘಗಳು ಇಂದು ಅನೇಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಿದ್ದು, ಹಲವಾರು ಗುಂಪಿನಲ್ಲಿ ಅನೇಕ ಸಾಧಕ ಮಹಿಳೆಯರ ಯಶೋಗಾಥೆಗಳಿವೆ. 25 ವರ್ಷಗಳ ಹಿಂದೆ ಗುಂಪು ರಚನೆಯಾದಾಗಿನಿಂದ ತೊಡಗಿ ಇಂದಿನವರೆಗೆ ಗುಂಪಿನಲ್ಲಿದ್ದು ಅನೇಕ ಕಷ್ಟಗಳ ಮಧ್ಯೆಯೂ ಅವೆಲ್ಲವನ್ನೂ ಎದುರಿಸಿ ಸ್ವಾವಲಂಬಿಯಾಗಿ ಜೀವಿಸುತ್ತಿರುವ ಮಹಿಳೆ ಕಾಪು ತಾಲೂಕಿನ ಮಜೂರು ಗ್ರಾಮದ ನಂದಿನಿ ಎಂಬ ಸ್ವಸಹಾಯ ಗುಂಪಿನಲ್ಲಿರುವ ಪ್ರಭಾವತಿ ಎಂಬುವವರ ಜೀವನಗಾಥೆ ಕೇಳಲು ಸಮಾವೇಶದಲ್ಲಿ ಅವಕಾಶ ನೀಡಲಾಗುವುದು. ಪ್ರಭಾವತಿಯವರಂತೆ ಇಂದು ಅನೇಕ ಮಹಿಳೆಯರ ಯಶೋಗಾಥೆ ನಮ್ಮೆದುರು ಇದೆ. ಅವೆಲ್ಲವನ್ನೂ ಕೇಳುವ ಅವಕಾಶ ಸಿಗಲಿದೆ ಎಂದು ಡಾ.ರಾಜೇಂದ್ರ ಕುಮಾರ್ ಹೇಳಿದರು.

ಅತ್ಯಂತ ವ್ಯವಸ್ಥಿತ ಕಾರ್ಯಕ್ರಮ
ರಜತ ಸಂಭ್ರಮ ಕಾರ್ಯಕ್ರಮವು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಲಿದ್ದು, ವ್ಯವಸ್ಥಿತವಾಗಿ ಮೂಡಿಬರಲಿದೆ. ಈ ಸಮಾವೇಶದ ಸುದ್ದಿ ಕೇಳಿ ಬೇರೆ ಕಡೆಯಲ್ಲೂ ಇಂಥ ಸಮಾವೇಶ ಮಾಡಲು ಮುಂದೆ ಬಂದಿದ್ದಾರೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು. ಒಬ್ಬ ಮಹಿಳೆಯು ನಮ್ಮ ನವೋದಯ ಸ್ವಸಹಾಯ ಸಂಘದ ನೆರವಿನಿಂದ ಆರ್ಥಿಕವಾಗಿ ಸಬಲರಾಗಿ ಬೆಳೆದರೆ ಅದರಿಂದ ಒಂದು ಗ್ರಾಮದ ಅಭಿವೃದ್ಧಿಯೇ ಸಾಧ್ಯವಾಗಲಿದೆ. ಮಹಿಳೆಯರಿಂದ ಆಕೆಯ ಮಕ್ಕಳು, ಇದರಿಂದ ಗ್ರಾಮ ಅಭಿವೃದ್ಧಿಯಾಗಿ ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತಿಳಿಸಿದರು.
ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಏನಾದರೊಂದು ಕೊಡುಗೆ ನೀಡಬೇಕೆಂಬ ನಿಟ್ಟಿನಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ೨೫ ವರ್ಷಗಳ ಹಿಂದೆ ನವೋದಯ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿದರು. ಅದು ಈಗ ಹೆಮ್ಮರವಾಗಿ ಬೆಳೆದುನಿಂತಿದೆ. ನವೋದಯ ಸಂಘದಲ್ಲಿ ಜಾಮೀನು ರಹಿತ ಸಾಲ ನೀಡಲಾಗುತ್ತಿದ್ದು, ೧೦೦ ಶೇಕಡಾದಷ್ಟೂ ಮರು ಪಾವತಿಯಾಗುತ್ತಿದೆ. ಎಂಟು ಜಿಲ್ಲೆಗಳಲ್ಲಿ ಇದರ ಕಾರ್ಯವ್ಯಾಪ್ತಿ ಹರಡಿದ್ದು, ಐದು ಲಕ್ಷ ಕುಟುಂಬಕ್ಕೆ ಪ್ರಯೋಜನ ಸಿಗುತ್ತಿದೆ ಎಂದು ಹೇಳಿದರು.
ವ್ಯವಸ್ಥೆಗೆ ಸಂಬಂಧಿಸಿ ಸಕಲ ರೀತಿಯಲ್ಲೂ ತಯಾರಿ ನಡೆದಿದ್ದು, ದೂರದ ಊರುಗಳಿಂದ ಬರುವ ಪ್ರತಿನಿಧಿಗಳಿಗೆ ಬೆಳಗ್ಗಿನ ಉಪಾಹಾರಕ್ಕೆ ನಿರ್ದಿಷ್ಟ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಂಬುಲೆನ್ಸ್, ವೈದ್ಯಕೀಯ ವ್ಯವಸ್ಥೆಗಳೂ ಸನ್ನದ್ಧವಾಗಿದ್ದು, ೧೬೦ ಊಟದ ಕೌಂಟರ್‌ಗಳನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಿ., ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಡಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್.ಜೈನ್, ಸುನೀಲ್ ಕುಮಾರ್ ಬಜಗೋಳಿ, ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಡಾಕ್ಟ್ರಾ ಭಟ್ರಾ ತುಳು ಸಿನಿಮಾ ಪೋಸ್ಟರ್ ಬಿಡುಗಡೆ
ಎಂಎನ್‌ಆರ್ ಪ್ರೊಡಕ್ಷನ್‌ನಲ್ಲಿ ಮೂಡಿಬರಲಿರುವ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಹೊಸ ತುಳು ಸಿನಿಮಾ ಡಾಕ್ಟ್ರಾ ಭಟ್ರಾ ಇದರ ಪೋಸ್ಟರ್ ಅನ್ನು ಸುದ್ದಿಗೋಷ್ಠಿಯ ಬಳಿಕ ಬಿಡುಗಡೆಗೊಳಿಸಲಾಯಿತು. ಸುಮಾರು ೧೫ ವರ್ಷಗಳ ಹಿಂದೆಯೇ ಈ ಸಿನಿಮಾ ಮಾಡುವ ಬಗ್ಗೆ ಡಾ.ಎಂ.ಎನ್ ರಾಜೇಂದ್ರ ಅವರ ಬಳಿ ಚರ್ಚಿಸಿದ್ದು ಬೇರೆ ಬೇರೆ ಕಾರಣಗಳಿಂದ ಅದು ಕೈಗೂಡಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ ಎಂದು ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com