ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಭಾನುವಾರ ಹಿಂದೂ ಯುವ ಸೇನೆ ಕಾವುಬೈಲ್, ಬಜಾಲ್ ಶಾಖೆ ಹಾಗೂ ಶ್ರೀಸತ್ಯಸಾಯಿ ಬಾಲವಿಕಾಸ ಕೇಂದ್ರ ಮಂಗಳಾದೇವಿ ಇವುಗಳ ಸಹಯೋಗದೊಂದಿಗೆ ಕಾವುಬೈಲ್, ಬಜಾಲ್‌ನಲ್ಲಿನ ಹಿಂದೂ ಯುವಸೇನೆಯ ಸಭಾಂಗಣದಲ್ಲಿ ಬೃಹತ್ ಉಚಿತ ಆರೋಗ್ಯ -ದಂತ -ಕಣ್ಣಿನ ತಪಾಸಣಾ ಚಿಕಿತ್ಸಾ ಶಿಬಿರ ಆಯೋಜಿಸಿತ್ತು.
https://chat.whatsapp.com/EbVKVnWB6rlHT1mWtsgbch
ಮಂಗಳೂರಿನ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ ಹಾಗೂ ದೇರಳಕಟ್ಟೆ ಯೇನಪೊಯ ದಂತ ಕಾಲೇಜಿನ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. 365 ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಕಣ್ಣಿನ ಸಮಸ್ಯೆ ಇದ್ದ 65 ಜನರಿಗೆ ಸ್ಥಳದಲ್ಲೇ ಉಚಿತವಾಗಿ ಕನ್ನಡಕ ಹಾಗೂ ಎಲ್ಲಾ ಖಾಯಿಲೆಗಳಿಗೆ ಉಚಿತವಾಗಿ ಔಷಧ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯುಳ್ಳ 76 ಜನರಿಗೆ ಬುಧವಾರ KMC ಅತ್ತಾವರ ಆಸ್ಪತ್ರೆಗೆ ಹಾಗೂ ಹಲ್ಲಿನ ಸಮಸ್ಯೆಯುಳ್ಳವರಿಗೆ ದೇರಳಕಟ್ಟೆ ಯೆನೆಪೋಯ ದಂತ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ. ಅನೇಕರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದು ಅವರಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
ಶ್ರೀಶಾ ಸೊಸೈಟಿಯು ಪ್ರತಿ ತಿಂಗಳೂ ಮಂಗಳೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಶಿಬಿರವು 28ನೇ ಶಿಬಿರವಾಗಿದ್ದು ಮಂಗಳೂರು ಮಹಾನಗರದ ಹೊರವಲಯದಲ್ಲಿ ಆಯೋಜಿಸಿದ್ದು ದೊಡ್ಡ ಸಂಖ್ಯೆಯಲ್ಲಿ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಶಿಬಿರ ಉದ್ಘಾಟಿಸಿ ಮಾತನಾಡಿದ ಶ್ರೀಶಾ ಸೊಸೈಟಿ ಅಧ್ಯಕ್ಷ ಎಂ.ಎಸ್.ಗುರುರಾಜ್, ಶ್ರೀಶಾ ಸೊಸೈಟಿಯು ಐದು ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಪಾಲನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಶಿಕ್ಷಣ ಹಾಗೂ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸುತ್ತಿದೆ. ಸರ್ಕಾರಿ ಕನ್ನಡ ಮಾಧ್ಯಮದ 100 ಶಾಲೆಗಳ ಗ್ರಂಥಾಲಯಗಳಿಗೆ 10000 ಪುಸ್ತಕಗಳನ್ನು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಉತ್ತೇಜಿಸುವ ಉದ್ದೇಶದಿಂದ ನೀಡಲಾಗುತ್ತಿದ್ದು, ಈಗಾಗಲೇ 5000 ಪುಸ್ತಕಗಳನ್ನು 50 ಶಾಲೆಗಳಿಗೆ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಆರು ವಿದ್ಯಾರ್ಥಿನಿಯರನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸುತ್ತಿದೆ ಎಂದರು.
ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಹಿಂದೂ ಯುವಸೇನೆ, ಕಾವುಬೈಲ್, ಬಜಾಲ್ ಶಾಖೆಯ ಅಧ್ಯಕ್ಷ ವಿಕ್ರಂ ಶೆಟ್ಟಿ, ಅತ್ತಾವರ ಕೆಎಂಸಿ ಆಸ್ಪತ್ರೆಯ ವೈದ್ಯೆ ಡಾ.ಅನಘ ಹಾಗೂ ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಡಾ.ಸುಪ್ರಿಯ ಮತ್ತು ಶ್ರೀಶಾ ಸೊಸೈಟಿಯ ಉಪಾಧ್ಯಕ್ಷ ಉದಯ ವಿ.ಶಾಸ್ತ್ರಿ ಉಪಸ್ಥಿತರಿದ್ದರು.
ಶ್ರೀಶಾ ಸೊಸೈಟಿಯ ನಿರ್ದೇಶಕ ಹಾಗೂ ಶ್ರೀ ಸತ್ಯಸಾಯಿ ಬಾಲವಿಕಾಸ ಕೇಂದ್ರದ ಸಂಚಾಲಕ ಸುರೇಶ್ ಬೈಂದೂರ್ ಶಿಬಿರವನ್ನು ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com