ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರ್‌ವೆಲ್ ಶಾಖೆಯ ಹದಿಮೂರನೇ ವಾರ್ಷಿಕೋತ್ಸವ ಪ್ರಯುಕ್ತ ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಜಂಟಿ ಸಹಯೋಗದೊಂದಿಗೆ ಬೋಳೂರು ಮಾತಾ ಅಮೃತಾನಂದಮಯಿ ಮಠ, ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು, ಇವರುಗಳ ನುರಿತ ತಜ್ಞ ವೈದ್ಯ ತಂಡದವರಿಂದ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಜಪ್ಪಿನಮೊಗರು, ಕಂರ್ಬಿಬೈದೇದಿ ಚಾವಡಿಯಲ್ಲಿ ಇತ್ತೀಚೆಗೆ ಜರುಗಿತು.
https://chat.whatsapp.com/EbVKVnWB6rlHT1mWtsgbch
ಉದ್ಯಮಿ ಶ್ರೀ ಲಕ್ಷ್ಮೀನಾರಾಯಣ ಉದ್ಘಾಟಿಸಿದರು. ಲಯನ್ಸ್ ಕ್ಲಬ್, ಎಂಜೆಎಫ್ ಅಧ್ಯಕ್ಷ ಲಯನ್ ಜಯರಾಜ್ ಪ್ರಕಾಶ್ ಮಾತನಾಡಿ “ಇಂದಿನ ಜನರ ಜೀವನಶೈಲಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಇಂತಹ ಶಿಬಿರಗಳಿಂದ ಜನರು ಆರೋಗ್ಯದ ತಪಾಸಣೆ ಮಾಡಿಸುವುದು ಉತ್ತಮ” ಎಂದರು.
ಯೆನೆಪೋಯ ದಂತ ವಿಭಾಗದ ಮುಖ್ಯಸ್ಥರಾದ ಡಾ|| ರೇಖಾ ಪಿ.ಶೆಣೈ ಮಾತನಾಡಿ “ಕಾಯಿಲೆಗಳನ್ನು ಗುಣಪಡಿಸುವುದಕ್ಕಿಂತ ಮೊದಲು ಕಾಯಿಲೆ ಬಾರದ ಹಾಗೆ ತಡೆಗಟ್ಟುವುದು ಅಗತ್ಯ” ಎಂದರು.
ಮಾತಾ ಅಮೃತಾನಂದಮಯಿ ಮಠದ ವೈದ್ಯರಾದ ಡಾ|| ಸುಚಿತ್ರಾ ಸೊರಕೆ ಮಾತನಾಡಿ “ಇಂದಿನ ದಿನಗಳಲ್ಲಿ ಅಧಿಕವಾಗುತ್ತಿರುವ ಹೃದ್ರೋಗ ಸಮಸ್ಯೆಗಳಿಗೆ ಹಲವಾರು ಚಿಕಿತ್ಸೆಗಳು ಬಂದಿದ್ದು, ಇದರ ಪ್ರಯೋಜನ ಪಡೆಯಿರಿ” ಎಂದರು.
ಮುಖ್ಯ ಅತಿಥಿ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ವೀಣಾ ಮಂಗಳಾ ಮಾತನಾಡಿ “ಆರೋಗ್ಯವೇ ಭಾಗ್ಯ , ಮನುಷ್ಯನಲ್ಲಿ ಆಸ್ತಿ-ಸಂಪತ್ತು ಎಷ್ಟೇ ಇದ್ದರೂ ಜೀವ ಉಳಿಸಲು ಸಾಧ್ಯವಿಲ್ಲ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ಜನರ ಆರೋಗ್ಯದ ಕಾಳಜಿಗಾಗಿ ಇಂತಹ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ” ಎಂದರು.
ಪ್ರಸಾದ್ ನೇತಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ|| ವಿಶ್ವಾಸ್ ಮಾತನಾಡಿ “ದುಡಿಯುವ ಜನರು ಆರೋಗ್ಯದಿಂದ ಇರಬೇಕು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿರುವುದು ಪುಣ್ಯದ ಕೆಲಸ. ಇದರಿಂದ ಜನಸೇವೆಯೇ ಜನಾರ್ದನ ಸೇವೆ ಎನ್ನುವುದಕ್ಕೆ ಅರ್ಥ ಬರುತ್ತದೆ.” ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವರ್ಧಂತಿ ಉತ್ಸವ ಪ್ರಯುಕ್ತ ಆಯೋಜಿಸಿರುವ ಆರೋಗ್ಯ ಶಿಬಿರ ಇದಾಗಿದ್ದು, ನಮ್ಮ ಸಂಘದ ಪ್ರತಿ ಶಾಖೆಗಳ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ ಆಯೋಜಿಸುತ್ತಿದ್ದು ಇದು ೮೦ನೇ ಆರೋಗ್ಯ ಶಿಬಿರವಾಗಿದೆ. ಹಲವಾರು ಸಂಘ ಸಂಸ್ಥೆ ಸಹಯೋಗದೊಂದಿಗೆ ಭಾನುವಾರ ಬಿಡುವಿನ ಸಮಯದಲ್ಲಿ ಈ ಶಿಬಿರ ಆಯೋಜಿಸುತ್ತಿರುವುದರಿಂದ ತುಂಬ ಜನರಿಗೆ ಇದರ ಪ್ರಯೋಜನವನ್ನು ಪಡೆಯಲು ಸಹಕಾರಿಯಾಗಿದೆ. ಈ ಶಿಬಿರಗಳನ್ನು ಆಯೋಜಿಸಲು ಸಹಕರಿಸಿರುವ ಬೋಳೂರು ಮಾತಾ ಅಮೃತಾನಂದಮಯಿ ಮಠ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರು ಹಾಗೂ ಅಧಿಕಾರಿ ವರ್ಗದವರಿಗೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಸರ್ವ ಪದಾಧಿಕಾರಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸಿದರು.
ಅತಿಥಿಯಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಅಂಚನ್ ಮಾತನಾಡಿ “ಆರೋಗ್ಯವೇ ಭಾಗ್ಯ, ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗೆ ಶಿಬಿರದ ಮೂಲಕ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಿದೆ, ಇದರ ಪ್ರಯೋಜನವನ್ನು ಎಲ್ಲರೂ ಪಡೆಯಿರಿ” ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ನಾಗರಾಜ್ ಬಿ.ವಿ. ವಹಿಸಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ, ನಿರ್ದೇಶಕರಾದ ಗೋಪಾಲ್ ಎಂ, ಉಮಾವತಿ , ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ , ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಚಂದ್ರಶೇಖರ್, ಮಂದಿರದ ಅರ್ಚಕ ಮನೋಜ್ ಪೂಜಾರಿ, ಆರೋಗ್ಯ ಸಂಚಾಲಕ ಹರೀಶ್ ಸನಿಲ್, ಲಯನ್ ರವಿಶಂಕರ್ ರೈ , ಡಾ|| ಅಶೋಕ್ ಶೆಣೈ , ಲಯನ್ ಸೀನಾ ಪೂಜಾರಿ ಹಾಗೂ ಮತ್ತಿತರರು ಉಪಸ್ಧಿತರಿದ್ದರು.
೧೫೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸೆ, ಕಣ್ಣಿನ ತಪಾಸಣೆ ಮಾಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಾರ್ಯದರ್ಶಿ ಅಶೋಕ್ ತಂದೊಳಿಗೆ ಸ್ವಾಗತಿಸಿ, ಕೋಶಾಧಿಕಾರಿ ಚಿತ್ರಾಕ್ಷ ಪೂಜಾರಿ ವಂದಿಸಿದರು. ಚಂದ್ರಹಾಸ್ ಕಟ್ಟಪುಣಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com