ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
ಮಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದ್ದು, 12 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ ಘೋಷಿಸಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ವೇತನದಾರರಿಗೆ ನೆರವಾಗಲಿದೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್ ಆರ್ ಹರೀಶ್ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧ್ಯಮ ವರ್ಗದ ಜನರನ್ನು ವಿಶೇಷವಾಗಿ ಗಮನದಲ್ಲಿರಿಸಿ ಆದಾಯ ತೆರಿಗೆ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಮಧ್ಯಮ ವರ್ಗದವರ ತೆರಿಗೆ ಪಾವತಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಅವರಿಗೆ ಸಿಗುವ ವೇತನದ ಹೆಚ್ಚಿನ ಹಣ ಅವರದೇ ಕೈಸೇರುವಂತೆ ಮಾಡುವುದಕ್ಕೆ ಒತ್ತು ಕೊಟ್ಟಿರುವುದು ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ಕಂಡುಬರುತ್ತದೆ. ಈ ಕ್ರಮ ಉಳಿತಾಯ ಮತ್ತು ಹೂಡಿಕೆಯ ಪ್ರಮಾಣವನ್ನೂ ಹೆಚ್ಚಿಸಲಿದೆ. ಈ ಹಿಂದೆ 7 ಲಕ್ಷ ರೂ.ವರೆಗಿನ ಒಟ್ಟು ಆದಾಯ ಹೊಂದಿರುವ ವ್ಯಕ್ತಿ ತೆರಿಗೆ ಪಾವತಿಸುವುದಕ್ಕೆ ಇರಲಿಲ್ಲ. ಈಗ ಅದನ್ನು 12 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಇದ್ದು ಹೀಗಾಗಿ 12,75,000 ರೂ.ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದೊಂದು ಉತ್ತಮ ಉಪಕ್ರಮ ಎಂದು ಹರೀಶ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ 36 ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡುವ ಕ್ರಮವೂ ಉಪಯೋಗಕರ. ಬಾಡಿಗೆ ಮೇಲಿನ ವಾರ್ಷಿಕ ಟಿಡಿಎಸ್ ಮಿತಿಯನ್ನು 2.4 ಲಕ್ಷ ರೂ.ಗಳಿಂದ 6 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು, ಹಿರಿಯ ನಾಗರಿಕರಿಗೆ ಟಿಡಿಎಸ್ ಮಿತಿಯನ್ನು 50,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಕೂಡ ಕೇಂದ್ರ ಬಜೆಟ್‌ನ ದೂರದೃಷ್ಟಿತ್ವವನ್ನು ಸಾರಿದೆ. ಒಟ್ಟಾರೆ ಬಜೆಟ್ ಅನ್ನು ಮಧ್ಯಮ ವರ್ಗದ ಜನರ ಸ್ನೇಹಿಯಾಗಿ ಮಾಡಿರುವುದಲ್ಲದೆ, ಸಣ್ಣ ರೈತರು, ಮಧ್ಯಮ ವರ್ಗದ ರೈತರು ಹಾಗೂ ಮಹಿಳೆಯರಿಗೆ ಪ್ರಯೋಜನಕಾರಿಯಾಗಿ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com