ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಶ್ಲಾಘನೆ
ಕಾಪು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಲ್ಪಾವಧಿಯಲ್ಲೇ ೩೩ ಶಾಖೆಗಳನ್ನು ತೆರೆದು, ಠೇವಣಿ ಮತ್ತು ಸಾಲ ನೀಡುವಿಕೆಯಲ್ಲಿ ಪ್ರತಿವರ್ಷ ಲಾಭ ಗಳಿಸಿ, ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಆತ್ಮಕ್ಕೆ ಹತ್ತಿರವಾಗಿರುವ ಸಹಕಾರಿ ಸಂಘವಾಗಿ ಎಲ್ಲ ಜನರ ವಿಶ್ವಾಸ ಗಳಿಸಿ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಮೂಡಿಬರುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಬರುತ್ತಿದ್ದು, ಕಾಪುವಿನ ಜನರ ಪೂರ್ಣ ಆಶೀರ್ವಾದ ಮತ್ತು ಸಹಕಾರ ಸಂಘದ ಮೇಲಿರಲಿ ಎಂದು ಬೆಳಪು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
https://chat.whatsapp.com/Ge11n7QCiMj5QyPvCc0H19
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕಾಪು ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ಕಾಪು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯರ ಸಹಕಾರದೊಂದಿಗೆ ಹೊಸ ಮಾರಿಗುಡಿ ಬಳಿಯಲ್ಲಿರುವ ಸಂಘದ ವಠಾರದಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಮೂಲಕ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಹಕಾರಿ ಸಂಘಗಳಿಗೆ ಮಾದರಿಯಾಗಿ ಉನ್ನತವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ರೋಟರಿ ಕ್ಲಬ್ ಕಾಪು ಅಧ್ಯಕ್ಷ ರೋ.ಬಾಲಕೃಷ್ಣ ಎಸ್.ಆಚಾರ್ಯ ಮಾತನಾಡಿ ನಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಉತ್ತಮವಾಗಿ ಜೀವನ ನಡೆಸಲು ನೆಮ್ಮದಿಯ ಆರೋಗ್ಯ ಅವಶ್ಯಕ. ಇಂತಹ ಆರೋಗ್ಯ ಶಿಬಿರವನ್ನು ನಡೆಸುತ್ತಾ ಬಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯ ಪ್ರಶಂಸನೀಯ ಎಂದರು.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ನಮ್ಮ ಸಂಘದ ಪ್ರತೀ ಶಾಖೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತಿದ್ದು ೭೭ನೇ ಉಚಿತ ಆರೋಗ್ಯ ಶಿಬಿರವು ಇದಾಗಿದೆ. ಈವರೆಗೆ ೧೬,೫೦೦ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ಶಿಬಿರಾರ್ಥಿಗಳು ವೈದ್ಯರು ನೀಡಿದ ಸಲಹೆಗಳನ್ನು ಪಡೆದುಕೊಂಡು ಪ್ರಾರಂಭದಲ್ಲೇ ತಮ್ಮ ಆರೋಗ್ಯ ಸಮಸ್ಯೆಗಳನ್ನು ತಿಳಿದು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಂತಾಗಲಿ ಎಂಬ ಆಶಯ ನಮ್ಮದು ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ರಮಾನಾಥ ಸನಿಲ್, ಮುದ್ದು ಮೂಡುಬೆಳ್ಳೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರಾದ ಡಾ|ವಿನು ಜೋಸೆಫ್ ಮತ್ತು ಶಾಹಿಲ್, ರೋಟರಿ ಕ್ಲಬ್ ಪದಾಧಿಕಾರಿಗಳಾದ ಶ್ರೀನಿವಾಸ ರಾವ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಸದಸ್ಯ ರತ್ನಾಕರ್ ಶೆಟ್ಟಿ, ಕಾಪು ಬಿಲ್ಲವ ಸಹಾಯಕ ಸಂಘದ ನಿಕಟಪೂರ್ವ ಅಧ್ಯಕ್ಷ ಮಾಧವ ಸಾಲ್ಯಾನ್ ಉಪಸ್ಧಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕಾಪು ಶಾಖೆಯ ಶಾಖಾಧಿಕಾರಿ ಸುಮನಾ ಪ್ರವೀಣ್ ಸ್ವಾಗತಿಸಿ, ಚೈತ್ರಾ ದಿನೇಶ್ ವಂದಿಸಿದರು. ಹಿರಿಯ ಶಾಖಾಧಿಕಾರಿ ಸ್ವಾತಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.
ಆತ್ಮಶಕ್ತಿಗೆ ಪ್ರಶಸ್ತಿಗಳ ಸರಮಾಲೆ
ಸಂಘದ ಸದಸ್ಯರು ಮತ್ತು ಗ್ರಾಹಕರ ಪ್ರೋತ್ಸಾಹದಿಂದ ಸಂಘವು ರೂ.೨೫೦ ಕೋಟಿಗೂ ಅಧಿಕ ಠೇವಣಿ, ರೂ.೨೦೦ ಕೋಟಿಗೂ ಅಧಿಕ ಸಾಲ ವಿತರಿಸಿದೆ. ಸಂಘವು ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ೭ ಬಾರಿ ರಾಜ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ೯ ವರ್ಷಗಳಿಂದ “ಸಾಧನಾ ಪ್ರಶಸ್ತಿ”, ಆರೋಗ್ಯ ವಿಮೆ ಯೋಜನೆಯ ಗುರಿ ಮೀರಿದ ಸಾಧನೆಗಾಗಿ ಸತತ ೯ ವರ್ಷಗಳಿಂದ “ವಿಮಾ ಪ್ರಶಸ್ತಿ” ಮತ್ತು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಇವರಿಂದ ಸತತ ೧೦ ವರ್ಷಗಳಿಂದ ಇ-ಸ್ಟಾಂಪಿಂಗ್ ಸೇವೆಗೆ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪಡೆಯಲು ಸಂಘದ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಕಠಿಣ ಪರಿಶ್ರಮದಿಂದ ಮತ್ತು ಕಾರ್ಯದಕ್ಷತೆಯಿಂದ ಸಾಧ್ಯವಾಗಿದೆ ಎಂದು ಚಿತ್ತರಂಜನ್ ಬೋಳಾರ್ ಹೇಳಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com