ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ನೂತನ ಗವರ್ನರ್ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಇವರು ಆರ್‌ಬಿಐ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ಅವರ ಸ್ಥಾನ ತುಂಬಲಿದ್ದಾರೆ. ಶಕ್ತಿಕಾಂತ್ ದಾಸ್ ಅವರ ಅವಧಿ ಇಂದು ಸಂಜೆಗೆ ಕೊನೆಗೊಳ್ಳಲಿದ್ದು ಮಲ್ಹೋತ್ರಾ ಡಿಸೆಂಬರ್ 11ರಿಂದಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮುಂದಿನ ಮೂರು ವರ್ಷಗಳ ಕಾಲ ಸಂಜಯ್ ಮಲ್ಹೋತ್ರಾ ಅಧಿಕಾರಾವಧಿ ಇರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 26ನೇ ಗವರ್ನರ್ ಆಗಲಿರುವ ಮಲ್ಹೋತ್ರಾ 1990ರ ಬ್ಯಾಚ್ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಆರ್‌ಬಿಐನ ಕಾರ್ಯನಿರ್ವಹಣೆಯನ್ನು ಸಾಮಾನ್ಯವಾಗಿ ಕೇಂದ್ರೀಯ ನಿರ್ದೇಶಕರ ಮಂಡಳಿಯು ನೋಡಿಕೊಳ್ಳುತ್ತಿದ್ದು, ಸಂಜಯ್ ಮಲ್ಹೋತ್ರಾ ಈ ಕೆಲಸದಲ್ಲಿ ಮುಂಚೂಣಿಯಲಿದ್ದರಿಂದ ಅವರ ಹೆಸರೇ ಆರ್‌ಬಿಐ ಗವರ್ನರ್ ಹುದ್ದೆಗೆ ಪ್ರಧಾನವಾಗಿ ಕೇಳಿಬರುತ್ತಿತ್ತು.
ಸಂಜಯ್ ಮಲ್ಹೋತ್ರಾ ಅವರು ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 33 ವರ್ಷಗಳ ವ್ಯಾಪಕ ಅನುಭವ ಹೊಂದಿರುವ ಇವರು, ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ಮತ್ತು ತಂತ್ರಜ್ಞಾನ, ಗಣಿಗಾರಿಕೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿದ್ದು ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಶಕ್ತಿಕಾಂತ್ ದಾಸ್ ಅವರ ಆರು ವರ್ಷಗಳ ಆರ್‌ಬಿಐ ಗವರ್ನರ್ ಕಾರ್ಯಾವಧಿಯು ಗಮನಾರ್ಹವಾಗಿ ಸಾಗಿದ್ದು ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯ ಸಂದರ್ಭ ಶಕ್ತಿಕಾಂತ್ ದಾಸ್ ಆರ್‌ಬಿಐ ಗವರ್ನರ್ ಆಗಿ ನೇಮಕವಾಗಿದ್ದರು. ಕೋವಿಡ್ ಸಮಯದಲ್ಲಿ ಹಾಗೂ ಆ ಬಳಿಕದ ವರ್ಷಗಳಲ್ಲಿ ಅವರು ದೇಶದ ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com