ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟ, ಸಾಲದ ಇಎಂಐ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ಸತತ 11ನೇ ಬಾರಿ ರೆಪೊ ದರವನ್ನು ಬದಲಿಸದೆ ಶೇಕಡಾ 6.5ರಷ್ಟು ಯಥಾಸ್ಥಿತಿಯಲ್ಲೇ ಕಾಯ್ದಿರಿಸಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 7.2 ರ ಬದಲು ಶೇಕಡಾ 6.6ಕ್ಕೆ ತಗ್ಗಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು 7 ತ್ರೈಮಾಸಿಕ ಕನಿಷ್ಠ 5.4 ಶೇಕಡಾಕ್ಕೆ ಕುಸಿದಿದ್ದರೂ ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇಕಡಾ 6.5ದಲ್ಲಿ ಇರಿಸಲು ನಿರ್ಧರಿಸಿದೆ ಮತ್ತು ನೀತಿ ನಿಲುವನ್ನು ತಟಸ್ಥವಾಗಿ ಇರಿಸಿದೆ ಎಂದು ಹೇಳಿದರು.
https://chat.whatsapp.com/Ge11n7QCiMj5QyPvCc0H19
ಆರ್‌ಬಿಐ, ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಹಿಂದಿನ ಶೇಕಡಾ 7.2ರಿಂದ ಶೇಕಡಾ 6.6ಕ್ಕೆ ಕಡಿತಗೊಳಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಗುರಿಯನ್ನು ಶೇಕಡಾ 4.5ರಿಂದ ಶೇಕಡಾ 4.8ಕ್ಕೆ ಹೆಚ್ಚಿಸಿದೆ.
ಡಿಸೆಂಬರ್ 6ರಂದು ಶುಕ್ರವಾರ ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರುವ ತೀರ್ಮಾನಕ್ಕೆ ಬರಲಾಗಿದೆ. ಈ ಮೂಲಕ ಬಡ್ಡಿ ದರ ಇಳಿದು, ಸಾಲದ ಇಎಂಐ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಡಿಸೆಂಬರ್ 6ರಂದು ಮುಕ್ತಾಯಗೊಂಡ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರುವ ತೀರ್ಮಾನಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ 4:2ರಷ್ಟು ಸದಸ್ಯರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಹಿಂದಿನ ಸಭೆಯಲ್ಲಿಯೂ ಕೇಂದ್ರೀಯ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸದೇ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಸತತ 11 ಸಭೆಗಳಲ್ಲಿ ಹಣದುಬ್ಬರದ ಕಾರಣಕ್ಕೆ ರೆಪೋ ದರವನ್ನು ಇಳಿಕೆ ಮಾಡದೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಶೇ.6.5ರಲ್ಲೇ ಉಳಿಯಲಿದೆ ರೆಪೋ ದರ
ಆರ್‌ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಮೊದಲಿನಷ್ಟೇ ಅಂದರೆ ಶೇ. 6.5ರಲ್ಲೇ ಉಳಿಸಿಕೊಂಡಿದೆ. ಕೊನೆಯದಾಗಿ ಕಳೆದ ವರ್ಷದ ಫೆಬ್ರವರಿ 8, 2023ರಂದು ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಆರ್‌ಬಿಐ ಬದಲಾವಣೆ ತಂದಿತ್ತು. 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ಅಂದಾಜನ್ನು ಶೇ.7.2ರಿಂದ ಶೇ. 6.6ಕ್ಕೆ ಇಳಿಕೆ ಮಾಡಲಾಗಿದೆ. ಒಂದೊಮ್ಮೆ ಇದು ನಿಜವಾದಲ್ಲಿ ಇದೇ ಮೊದಲ ಬಾರಿ ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಜಿಡಿಪಿ ದರವು ಶೇ.7ಕ್ಕಿಂತ ಕಡಿಮೆ ಇದ್ದಂತೆ ಆಗಲಿದೆ.
ಮುಖ್ಯ ಅಂಶಗಳು
> ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇಕಡಾ 7.2 ರಿಂದ ಶೇಕಡಾ 6.6ಕ್ಕೆ ಪರಿಷ್ಕರಿಸಲಾಗಿದೆ.
> ನಗದು ಮೀಸಲು ಅನುಪಾತವನ್ನು 4.5% ರಿಂದ 4% ಕ್ಕೆ ಇಳಿಸಲಾಗಿದೆ, ಬ್ಯಾಂಕ್‌ಗಳಿಗೆ 1.16 ಲಕ್ಷ ಕೋಟಿ ಲಿಕ್ವಿಡಿಟಿ ಲಭ್ಯವಾಗುತ್ತದೆ.
> ಅಕ್ಟೋಬರ್‌ನಲ್ಲಿ ಕಳೆದ ಹಣಕಾಸು ನೀತಿಯಿಂದ ಸಮೀಪಾವಧಿಯ ಹಣದುಬ್ಬರ ಬೆಳವಣಿಗೆಯ ದೃಷ್ಟಿಕೋನವು ಸ್ವಲ್ಪಮಟ್ಟಿಗೆ ಪ್ರತಿಕೂಲವಾಗಿದೆ.
ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ. ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್‌ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್‌ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣದ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com