ಮಂಗಳೂರು: ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆಯಾಗಿದ್ದಾರೆ.
ದಾವಣಗೆರೆಯ ಶ್ರೀ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ನವೆಂಬರ್ 22ರದು ಜರುಗಿದ ಸಹಕಾರ ಭಾರತಿಯ 7ನೇ ರಾಜ್ಯ ಅಧಿವೇಶನದಲ್ಲಿ ಸಾಣೂರು ನರಸಿಂಹ ಕಾಮತ್ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆರಿಸಲಾಯಿತು. ಚುನಾವಣಾ ಅಧಿಕಾರಿಯಾಗಿದ್ದ ಹಿರಿಯ ಸಹಕಾರಿ ಬಾಗಲಕೋಟೆಯ ಜಿ.ಎನ್ ಪಾಟೀಲ್ ಈ ಆಯ್ಕೆಯನ್ನು ಘೋಷಿಸಿದರು.
https://chat.whatsapp.com/Ge11n7QCiMj5QyPvCc0H19
ನಿರ್ಗಮನ ಪ್ರಧಾನ ಕಾರ್ಯದರ್ಶಿ ಉತ್ತರ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ್‌ದಾಸ್ ನಾಯಕ್ ಸಹಕಾರಿ ಧ್ವಜ ಹಸ್ತಾಂತರಿಸುವುದರ ಮೂಲಕ ಜವಾಬ್ದಾರಿಯ ವರ್ಗಾವಣೆ ಮಾಡಿದರು. ಈ ಸಂದರ್ಭ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪುರೆ, ರಾಷ್ಟ್ರೀಯ ಸಂರಕ್ಷಕ ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು, ಉತ್ತರ ಪ್ರಾಂತ ಸಂಘದ ಹಿರಿಯರಾದ ಅರವಿಂದ ದೇಶಪಾಂಡೆ ಹುಬ್ಬಳ್ಳಿ ನಿರ್ಗಮನ ಅಧ್ಯಕ್ಷ ಬಾಗಲಕೋಟೆಯ ರಾಜಶೇಖರ ಶೀಲವಂತ, ನೂತನ ಅಧ್ಯಕ್ಷ ದಾವಣಗೆರೆಯ ಪ್ರಭುದೇವ ಆರ್.ಎಂ, ರಾಯಚೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಪಾಟೀಲ್ ಉಪಸ್ಥಿತರಿದ್ದರು.
ಕೆಎಂಎಫ್ ಮಂಗಳೂರು ಮತ್ತು ಭಾರತಿ ಟೂರಿಸಂ ಡೆವಲಪ್‌ಮೆಂಟ್ ಕೋಆಪರೇಟಿವ್ ನಿರ್ದೇಶಕರಾಗಿರುವ ಸಾಣೂರು ನರಸಿಂಹ ಕಾಮತ್ ಎರಡು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು, ಪರಂಪರಾ ವಿವಿಧೋದ್ದೇಶ ಸಹಕಾರಿ ಸಂಘ ಕಾರ್ಕಳ ಇದರ ನಿರ್ದೇಶಕರಾಗಿದ್ದುಸಹಕಾರ ಭಾರತಿಯ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣದ ಜೊತೆಗೆ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಶ್ರೇಯಸ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯ ತಜ್ಞರಾಗಿರುವ ಇವರು ಸಾಣೂರು ಗ್ರಾಮ ಪಂಚಾಯತ್ ನಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿದ್ದು ಅಂತರಾಷ್ಟ್ರೀಯ ಗೂಗಲ್ ಗ್ರಾಮ ಪಂಚಾಯತ್ ಪುರಸ್ಕಾರ ಮತ್ತು ರಾಷ್ಟ್ರಪತಿಗಳ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com