ಉಡುಪಿ: ಉಡುಪಿ ಜಿಲ್ಲೆಯ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಶುಕ್ರವಾರ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಕಾರ್ಯಕ್ರಮದಲ್ಲಿ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೊಸೈಟಿಯ ಅಧ್ಯಕ್ಷರಾದ ಲೂವಿಸ್ ಲೋಬೊ ಪ್ರಶಸ್ತಿ ಸ್ವೀಕರಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು. ಸಹಕಾರ ಸಚಿವ ಲಕ್ಷ್ಮಣ ಸವದಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ ದೇವೇಗೌಡ, ಶಾಸಕರಾದ ಯಶ್‌ಪಾಲ್ ಸುವರ್ಣ, ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಮೊದಲಾದವರು ಹಾಜರಿದ್ದರು.
https://chat.whatsapp.com/FCEnlTkAKCC0MGPhXtX4i4
1997ರ ಡಿಸೆಂಬರ್ 16ರಂದು ಕಥೋಲಿಕ್ ಸಭಾ ಕಲ್ಯಾಣಪುರ ಮತ್ತು ಉಡುಪಿ ವಾರ್ಡ್‌ಗಳ ಜಂಟಿ ಆಶ್ರಯದಲ್ಲಿ 20 ಜನ ಪ್ರವರ್ತಕರ ಸಲಹೆ ಸೂಚನೆ ಮೇರೆಗೆ ಅನೇಕ ಸಹಕಾರಿ ಧುರೀಣರ ಸಹಕಾರದ ಫಲವಾಗಿ ಸ್ಥಾಪನೆಗೊಂಡ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2027ರಲ್ಲಿ ಯಶಸ್ವಿ 30 ವರ್ಷಗಳನ್ನು ಪೂರ್ಣಗೊಳಿಸುವ ಹೊಸ್ತಿಲಿನಲ್ಲಿದ್ದು ಪ್ರಗತಿ ಪಥದೆಡೆಗೆ ಸಾಗುತ್ತಿದೆ. ಉಡುಪಿ ಸೂಪರ್ ಬಜಾರ್‌ನ ಕ್ರಿಸ್ತಜ್ಯೋತಿ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಸಂಸ್ಥೆಯ ಆಡಳಿತ ಕಚೇರಿಯಿದ್ದು ಪ್ರಧಾನ ಕಚೇರಿ ಹಾಗೂ ಮಲ್ಪೆ, ಉದ್ಯಾವರ, ಶಿರ್ವ ಹಾಗೂ ಹೂಡೆ-ಕೆಮ್ಮಣ್ಣುವಿನಲ್ಲಿ ಒಟ್ಟು ಐದು ಶಾಖೆಗಳಿವೆ. ಪ್ರಸ್ತುತ ಲೂವಿಸ್ ಲೋಬೊ ಅವರು ಸೊಸೈಟಿಯ ಅಧ್ಯಕ್ಷರಾಗಿಯೂ, ಜೇಮ್ಸ್ ಡಿಸೋಜ ಉಪಾಧ್ಯಕ್ಷರಾಗಿಯೂ ಸಂದೀಪ್ ಫೆರ್ನಾಂಡಿಸ್ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ 30 ವರ್ಷಗಳಿಂದಲೂ ಸಂಘವು ಲಾಭದಾಯಕವಾಗಿ ನಡೆಯುತ್ತಿದ್ದು, ಪ್ರತಿವರ್ಷವೂ ತನ್ನ ಸದಸ್ಯರಿಗೆ ಪಾಲು ಮುನಾಫೆ ವಿತರಿಸುತ್ತ ಬಂದಿದೆ. ಸಾಲದ ವಸೂಲಾತಿ ಪ್ರಮಾಣ ಶೇಕಡಾ 97 ಆಗಿದೆ. ಲೆಕ್ಕಪರಿಶೋಧನೆಯಲ್ಲಿ “ಎ” ಶ್ರೇಣಿ ಪಡೆದುಕೊಂಡಿದೆ. ಸಂಸ್ಥೆಯ ಗ್ರಾಹಕರಿಗಾಗಿ ಈಗಾಗಲೇ ನೆಫ್ಟ್/ಆರ್.ಟಿ.ಜಿ.ಎಸ್ ಮತ್ತು ಮುದ್ರಿತ ಪಾಸ್‌ಬುಕ್, ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ನೂತನ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಸಂಸ್ಥೆಯ ವೆಬ್‌ಸೈಟ್ ಕೂಡ ತೆರೆಯಲಾಗಿದೆ.
ಕೇವಲ ಬ್ಯಾಂಕಿಂಗ್ ಉದ್ದೇಶದಿಂದ ಮಾತ್ರವಲ್ಲದೇ ಅನೇಕ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳನ್ನು ವಾರ್ಷಿಕ ಮಹಾಸಭೆಯ ಸಮಯದಲ್ಲಿ ಮಾಡಲಾಗುತ್ತಿದೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಆರ್ಥಿಕ ಸಹಾಯ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಅಂತಹವರಿಗೆ ಧನಸಹಾಯ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

ಮುಂದಿನ ಯೋಜನೆಗಳು
ಮುಂದಿನ ಯೋಜನೆಯಾಗಿ ಜನವರಿ 2027ರಲ್ಲಿ ಸಂಘದ ನೂತನ 6ನೇ ಶಾಖೆಯನ್ನು ಉಡುಪಿ ನಗರಸಭಾ ವ್ಯಾಪ್ತಿಯ ಅಂಬಾಗಿಲುವಿನಲ್ಲಿ ತೆರೆಯುವ ಉದ್ದೇಶವಿದ್ದು, ಸಂಘದ ಸ್ವಂತ ಕಟ್ಟಡವನ್ನು ನಿರ್ಮಿಸುವ ಸಂಬಂಧ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ವ್ಯಾಪ್ತಿಯಲ್ಲಿ ಜಾಗವನ್ನು ಖರೀದಿಸುವ ವಿಚಾರವಾಗಿ ಸ್ಥಳ ಪರಿಶೀಲನೆ ಮಾಡಿದ್ದು, ದಾಖಲೆ ಪತ್ರಗಳ ತಾಂತ್ರಿಕ ತೊಡಕು ನಿವಾರಣೆ ಅಂತಿಮ ಹಂತದಲ್ಲಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಸ್ವಂತ ಕಟ್ಟಡದಲ್ಲಿಯೇ ಸಂಘದ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಲೂವಿಸ್ ಲೋಬೊ ತಿಳಿಸಿದ್ದಾರೆ.

