ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ‘ದೀಪಾವಳಿ ಸಂಭ್ರಮ’ ಕಾರ್ಯಕ್ರಮದಲ್ಲಿ ಪದ್ಮರಾಜ್ ಆರ್ ಪೂಜಾರಿ ಹೇಳಿಕೆ
ಮೂಲ್ಕಿ: ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ವೇದಿಕೆಗಳಾಗಬೇಕು ಎಂಬ ಆಶಯದೊಂದಿಗೆ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ‘ದೀಪಾವಳಿ ಸಂಭ್ರಮ’ ಕಾರ್ಯಕ್ರಮ ಮಂಗಳವಾರ ಸಂಜೆ ಹಳೆಯಂಗಡಿ ಸಮೀಪದ ಬೆರ್ನಾರ್ಡ್ ರಿವರ್ ವ್ಯೂನಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೀಪಾವಳಿ ಹಬ್ಬವು ಸಮಾಜದಲ್ಲಿರುವ ಅಜ್ಞಾನ, ಅಂಧಕಾರವನ್ನು ದೂರ ಮಾಡಿ ಜ್ಞಾನ ಮತ್ತು ಬೆಳಕನ್ನು ಪಸರಿಸುವ ಸಂಕೇತವಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಸುಖ, ಶಾಂತಿ ಹಾಗೂ ನೆಮ್ಮದಿಯ ಬೆಳಕು ಮೂಡಲಿ ಎಂಬ ಆಶಯ ವ್ಯಕ್ತಪಡಿಸಿದರು. ಪ್ರಿಯದರ್ಶಿನಿ ಬ್ಯಾಂಕ್ ಇಂದು ಜನಪರವಾಗಿ ಮುನ್ನಡೆಯುತ್ತಿದ್ದು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಜನರ ಅಗತ್ಯಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಬ್ಯಾಂಕ್‌ನಲ್ಲಿ ವಿವಿಧ ಜಾತಿ ಮತ್ತು ಧರ್ಮದವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಧರ್ಮಗಳ ಹಬ್ಬಗಳನ್ನು ಗೌರವದಿಂದ ಆಚರಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಮಾದರಿಯಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮರಸ್ಯದ ಸಮಾಜ ನಿರ್ಮಾಣವೇ ಆಶಯ: ವಸಂತ ಬೆರ್ನಾರ್ಡ್
ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ವಸಂತ ಬೆರ್ನಾರ್ಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಬಲಪಡಿಸುವ ಉದ್ದೇಶದಿಂದ ಮೂರು ಧರ್ಮಗಳ ಹಬ್ಬಗಳನ್ನು ಆಚರಿಸುವ ನಿರ್ಧಾರವನ್ನು ಆಡಳಿತ ಮಂಡಳಿ ಕೈಗೊಂಡಿದೆ. ಅದರಂತೆ ಪ್ರಥಮವಾಗಿ ದೀಪಾವಳಿ ಸಂಭ್ರಮವನ್ನು ಆಯೋಜಿಸಲಾಗಿದೆ. ಜಾತಿ, ಮತ, ಧರ್ಮದ ಭೇದಭಾವಗಳನ್ನು ಮರೆತು ನಾವೆಲ್ಲರೂ ಒಂದಾಗಿ ಬೆರೆತಾಗ ಮಾತ್ರ ಸಮಾಜ ಬಲಿಷ್ಠವಾಗಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಪರಸ್ಪರ ಧರ್ಮಗಳ ಗೌರವವೇ ನಿಜವಾದ ಸೌಹಾರ್ದತೆ
ದೀಪಾವಳಿ ಸಂದೇಶ ನೀಡಿದ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೋರಿಯಾರ್ ಮಾತನಾಡಿ, ಭಾರತದ ಹಬ್ಬಗಳು ಮತ್ತು ಆಚರಣೆಗಳು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಚರ್ಚ್, ಮಸೀದಿ ಹಾಗೂ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಧರ್ಮದ ಜನರು ಪರಸ್ಪರ ಗೌರವದಿಂದ ಪಾಲ್ಗೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ನಮ್ಮ ಧರ್ಮದ ಆಚರಣೆಗಳನ್ನು ಪಾಲಿಸುವುದರ ಜೊತೆಗೆ ಇತರರ ಧರ್ಮವನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವುದೇ ನಿಜವಾದ ಧಾರ್ಮಿಕ ಸೌಹಾರ್ದತೆ ಎಂದು ಅಭಿಪ್ರಾಯಪಟ್ಟರು.
ಪಕ್ಷಿಕೆರೆ ಸಂತ ಜೂದರ ಚರ್ಚ್‌ನ ಧರ್ಮಗುರು ರೆ.ಫಾ. ಅನಿಲ್ ಡಿಸೋಜ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಬ್ಯಾಂಕ್ ಉಪಾಧ್ಯಕ್ಷ ವಿಜಯ್ ಕುಮಾರ್ ಸನಿಲ್, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸೇರಿದಂತೆ ಗಣ್ಯರು, ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

