ಮಂಗಳೂರು: ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881ರ ಅಡಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು (ಆಗಸ್ಟ್ 25) ರಜೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕುಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳ ಕಾರ್ಯನಿರ್ವಹಣೆಯಲ್ಲಿ ಗೊಂದಲ ಉಂಟಾಗಿದೆ. ವಿಶೇಷವಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಲೀಡ್ ಬ್ಯಾಂಕ್ ಮಟ್ಟದಲ್ಲಿ ರಜೆ ಕುರಿತು ಹೊರಬಂದಿರುವ ಸೂಚನೆಗಳು ಬ್ಯಾಂಕಿಂಗ್ ವಲಯದಲ್ಲಿ ಕಾನೂನುಬದ್ಧ ಅಧಿಕಾರದ ವ್ಯಾಪ್ತಿಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
https://chat.whatsapp.com/FCEnlTkAKCC0MGPhXtX4i4
ರಾಜ್ಯ ಸರ್ಕಾರವು ಈದ್ ಮಿಲಾದ್‌ಗೆ ಜಿಲ್ಲಾವಾರು ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕ್‌ಗಳು, ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ ಈ ರಜೆ ಅನ್ವಯಿಸುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಸಹಕಾರ ಬ್ಯಾಂಕ್‌ಗಳು ಹಾಗೂ ಇತರ ಬ್ಯಾಂಕಿಂಗ್ ಸಂಸ್ಥೆಗಳು ತಮ್ಮದೇ ಆದ ನಿಯಂತ್ರಣ ವ್ಯವಸ್ಥೆ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಸಂಬಂಧಪಟ್ಟ ಸಂಸ್ಥೆಗಳ ಅಧಿಕಾರ ವ್ಯಾಪ್ತಿಗೆ ಬಾರದಿದ್ದರೂ ರಜೆ ಘೋಷಿಸಿರುವುದೇ? ಅಥವಾ ಈ ರಜೆ ಬ್ಯಾಂಕ್‌ಗಳಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆಯೇ? ಎಂಬ ಪ್ರಶ್ನೆ ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ಕೆಲವು ಬ್ಯಾಂಕುಗಳು ಕಾರ್ಯನಿರ್ವಹಣೆಗೆ ತೆರೆದುಕೊಂಡ ಬಳಿಕ ರಜೆ ಘೋಷಣೆಯಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Negotiable Instruments Actನ ಸೆಕ್ಷನ್ 25ರಲ್ಲಿ, ಪ್ರಾಮಿಸರಿ ನೋಟ್ ಅಥವಾ ಬಿಲ್ ಆಫ್ ಎಕ್ಸ್‌ಚೇಂಜ್‌ನ ಮೆಚ್ಯೂರಿಟಿ ದಿನ ಸಾರ್ವಜನಿಕ ರಜೆಯಾಗಿದ್ದರೆ ಅದರ ಪಾವತಿ ಸಂಬಂಧಿತ ನಿಯಮವನ್ನು ಸ್ಪಷ್ಟಪಡಿಸಲಾಗಿದೆ. ಈ ಕಾಯ್ದೆಯಲ್ಲಿ ‘public holiday’ಗೆ ಸಂಬಂಧಿಸಿದ ಕಾನೂನುಬದ್ಧ ವ್ಯವಸ್ಥೆಯೂ ಇದೆ. ಆದರೆ ಜಿಲ್ಲಾಧಿಕಾರಿ ಅಥವಾ ಲೀಡ್ ಬ್ಯಾಂಕ್ ಸ್ವತಂತ್ರವಾಗಿ Negotiable Instruments Actನ ಸೆಕ್ಷನ್ 25ರಡಿ ಬ್ಯಾಂಕ್ ರಜೆ ಘೋಷಿಸಬಹುದೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹಕಾರ ಬ್ಯಾಂಕ್‌ಗಳು, ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳ ಮೂಲಕ ಪ್ರತಿದಿನ ಸಾವಿರಾರು ಗ್ರಾಹಕರು ಹಣಕಾಸು ವ್ಯವಹಾರ ನಡೆಸುತ್ತಾರೆ. ರಜೆ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಠೇವಣಿ, ಸಾಲದ ಕಂತು ಪಾವತಿ, ಚೆಕ್ ವ್ಯವಹಾರ ಹಾಗೂ ಇತರ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ರಜೆ ಘೋಷಣೆಯ ಅಧಿಕಾರ, ಅದರ ಕಾನೂನು ವ್ಯಾಪ್ತಿ ಹಾಗೂ ಬ್ಯಾಂಕ್‌ಗಳಿಗೆ ಅದರ ಅನ್ವಯದ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳು ತಕ್ಷಣ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಬ್ಯಾಂಕಿಂಗ್ ವಲಯದ ಅಭಿಪ್ರಾಯದ ಪ್ರಕಾರ, Negotiable Instruments Actನ ಸೆಕ್ಷನ್ 25ರ ಅಡಿಯಲ್ಲಿ ಸಾರ್ವಜನಿಕ ರಜೆ ಘೋಷಣೆಗೆ ಸಂಬಂಧಿಸಿದ ಅಧಿಕಾರವನ್ನು ಸೂಕ್ತ ಸರ್ಕಾರದ ಅಧಿಸೂಚನೆ ಅಥವಾ ನಿಯೋಜನೆಯ ಮೂಲಕವೇ ಬಳಸಬೇಕಾಗುತ್ತದೆ. ಹೀಗಾಗಿ ಜಿಲ್ಲಾಮಟ್ಟದಲ್ಲಿ ಹೊರಡಿಸಲಾದ ಆದೇಶಕ್ಕೆ ರಾಜ್ಯ ಸರ್ಕಾರದ ಅಧಿಸೂಚನೆ ಅಥವಾ ಅಧಿಕಾರ ನಿಯೋಜನೆಯ ಆಧಾರವಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ. ಆರ್‌ಬಿಐ ತನ್ನ ಹಿಂದಿನ ಅಧಿಸೂಚನೆಗಳಲ್ಲಿ ಸೆಕ್ಷನ್ 25ರ ಅಡಿಯಲ್ಲಿ ಸಾರ್ವಜನಿಕ ರಜೆ ಘೋಷಣೆಯ ವ್ಯವಸ್ಥೆಯನ್ನು ಉಲ್ಲೇಖಿಸಿದೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಕೂಡ ಸೆಕ್ಷನ್ 25ರ ಅಡಿಯಲ್ಲಿ ಸಾರ್ವಜನಿಕ ರಜೆಯಾಗಿ ಘೋಷಿಸಿರುವುದನ್ನು ಆರ್‌ಬಿಐ ದಾಖಲಿಸಿದೆ.
ಬ್ಯಾಂಕುಗಳಿಗೆ ಏಕೆ ಸಮಸ್ಯೆ?
ರಜೆ ಘೋಷಣೆಯ ಕುರಿತು ಸ್ಪಷ್ಟತೆ ಇಲ್ಲದಿದ್ದರೆ ಬ್ಯಾಂಕುಗಳ ದಿನನಿತ್ಯದ ಕಾರ್ಯಾಚರಣೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಖ್ಯವಾಗಿ, ಚೆಕ್‌ಗಳ ಪ್ರಸ್ತುತಿ ಮತ್ತು ಕ್ಲಿಯರಿಂಗ್, ಚೆಕ್ ರಿಟರ್ನ್ ಹಾಗೂ ಪಾವತಿ ದಿನಾಂಕ, ಸಾಲದ ಕಂತು ಮತ್ತು ಬಡ್ಡಿ ಲೆಕ್ಕಾಚಾರ, ಸರ್ಕಾರಿ ಹಾಗೂ ಸಂಸ್ಥೆಗಳ ಪಾವತಿ ವ್ಯವಹಾರ, ಬ್ಯಾಂಕ್‌ಗಳ ನಡುವಿನ ಸೆಟ್ಲ್‌ಮೆಂಟ್, ಗ್ರಾಹಕರಿಗೆ ಸಂಬಂಧಿಸಿದ ನಿಗದಿತ ಪಾವತಿ ದಿನಾಂಕಗಳು ಇತ್ಯಾದಿ ವಿಷಯಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಒಂದು ಜಿಲ್ಲೆಯಲ್ಲಿ ರಜೆ ಮತ್ತು ಮತ್ತೊಂದು ಜಿಲ್ಲೆಯಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾದರೆ, ವಿಶೇಷವಾಗಿ ಚೆಕ್ ಕ್ಲಿಯರಿಂಗ್ ಮತ್ತು ಇಂಟರ್-ಬ್ಯಾಂಕ್ ಸೆಟ್ಲ್‌ಮೆಂಟ್ ವಿಚಾರದಲ್ಲಿ ಪ್ರಾಯೋಗಿಕ ಸಮಸ್ಯೆಗಳು ಎದುರಾಗಬಹುದು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳು ಇಂದು ಘೋಷಿಸಿರುವ ರಜೆ ಯಾವ ಅಧಿಸೂಚನೆಯ ಆಧಾರದ ಮೇಲೆ ಜಾರಿಯಾಗಿದೆ? ಜಿಲ್ಲಾಧಿಕಾರಿಗೆ ಅಂತಹ ಅಧಿಕಾರವನ್ನು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ನಿಯೋಜಿಸಿದೆಯೇ? ಲೀಡ್ ಬ್ಯಾಂಕ್‌ಗೆ ಬ್ಯಾಂಕ್ ರಜೆ ಘೋಷಿಸುವ ಕಾನೂನುಬದ್ಧ ಅಧಿಕಾರವಿದೆಯೇ? ರಜೆಯಿಂದಾಗಿ ಚೆಕ್ ಕ್ಲಿಯರಿಂಗ್ ಮತ್ತು ಇತರ ಪಾವತಿ ವ್ಯವಹಾರಗಳ ಸ್ಥಿತಿ ಏನು? ಸಹಕಾರ, ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳಿಗೆ ಒಂದೇ ರೀತಿಯ ಮಾರ್ಗಸೂಚಿ ನೀಡಲಾಗಿದೆಯೇ? ಈ ವಿಷಯಗಳಲ್ಲಿ ಸ್ಪಷ್ಟತೆಯನ್ನು ನೀಡಬೇಕಾದ ಅಗತ್ಯವಿದೆ.


