ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾರತಿ ಜಿ.ಭಟ್ ಆಶಯ
ಮಂಗಳೂರು: ಐದು ವರ್ಷಗಳ ಹಿಂದೆ ಕೃಷಿ ಇಲಾಖೆಯ ಅಧೀನದಲ್ಲಿದ್ದ ಸಹಕಾರ ಕ್ಷೇತ್ರವು ಈಗ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯದ ಅಧೀನಕ್ಕೆ ಬಂದಿದೆ. ಸಮರ್ಥ ಸಹಕಾರ ಸಚಿವರೂ ಸಿಕ್ಕಿದ್ದಾರೆ. ಎಲ್ಲ ವಲಯಗಳಲ್ಲೂ ಸಹಕಾರ ಕ್ಷೇತ್ರದ ಬೇರು ಹರಡಿಸಲು ಇದು ಸಕಾಲ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಕೇಂದ್ರ ಸಹಕಾರ ಸಚಿವಾಲಯಕ್ಕೆ ಐದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಲಾಗುತ್ತಿರುವ ವಿಶೇಷ ಸಹಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಆಶ್ರಯದಲ್ಲಿ ಶುಕ್ರವಾರ ಮಂಗಳೂರಿನ ಕಾಪಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸಹಕಾರ ಸಚಿವಾಲಯಕ್ಕೆ ಐದು ವರ್ಷ ತುಂಬುತ್ತಿರುವ ವಿಶೇಷ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆರೋಗ್ಯ, ಸಾರಿಗೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಿಗೆ ಸಹಕಾರ ಕ್ಷೇತ್ರವನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಸಹಕಾರದಿಂದ ಸಾರ್ಥಕ ಜೀವನ ನಡೆಸಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಪ್ರಾಸ್ತಾವಿಕ ಮಾತನಾಡಿ, ಮೈಸೂರು ವಿಭಾಗದ ಎಂಟು ಜಿಲ್ಲೆಗಳಲ್ಲೂ ವಿವಿಧ ಕಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬಿಸಿಲಿನ ವಾತಾವರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಪರಿಸರದ ಜೊತೆ ಕನೆಕ್ಟ್ ಆಗಬೇಕು. ಯುರೋಪ್ ಭಾಗದಲ್ಲಿ ಬಿಸಿಲಿನ ಆಘಾತದಿಂದ ಆಗುತ್ತಿರುವ ಅನಾಹುತಗಳು ದೊಡ್ಡ ಮಟ್ಟದ ಸುದ್ದಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಅಗತ್ಯವಿದ್ದು ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಸಹಕಾರ ಸಂಘಗಳ ಮಂಗಳೂರು ಉಪವಿಭಾಗ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್, ಶಾಲೆಯ ಮುಖ್ಯ ಶಿಕ್ಷಕಿ ಶೀಲಾವತಿ ಎಸ್., ಶಿಕ್ಷಕಿ ಬಿಂದು ಆರ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ರೈ, ಶ್ರೀಶಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಸ್ ಗುರುರಾಜ್, ಶರ್ವಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ರೋಹಿಣಿ ಉದಯ ಕುಮಾರ್, ಸಿಇಒ ಉದಯ ಕುಮಾರ್, ಯುವ ಸ್ಪಂದನ ಸೌಹಾರ್ದ ಸಹಕಾರಿ ಸಂಘದ ಸಿಇಒ ರಾಜೇಶ್ ಅತ್ಯಾಡಿ, ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ ಸಿಇಒ ಪುಷ್ಪಾನಂದ, ಶ್ರೀ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಸಿಇಒ ಲತೇಶ್ ಉಪಸ್ಥಿತರಿದ್ದರು. ಸೌಹಾರ್ದ ದ.ಕ. ಜಿಲ್ಲಾ ಅಭಿವೃದ್ಧಿ ಅಧಿಕಾರಿ ನಂದನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೋಹಿತ್ ಸಹಕರಿಸಿದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




