ಮಂಗಳೂರು: ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ವಿ.ಸತ್ಯನಾರಾಯಣ ಅವರು ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ, ಅಡಿಕೆ ಬೆಳೆಗಾರರು ಮತ್ತು ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.
ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ‘ಮಂಡಿ ತೆರಿಗೆ’ಯಿಂದಾಗಿ ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ನಿಯೋಗವು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಸುಮಾರು 1.5 ಲಕ್ಷಕ್ಕೂ ಹೆಚ್ಚು ರೈತ ಸದಸ್ಯರನ್ನು ಹೊಂದಿರುವ ಬಹು-ರಾಜ್ಯ ಸಹಕಾರ ಸಂಸ್ಥೆಯಾದ ಕ್ಯಾಂಪ್ಕೊ ಪ್ರಸ್ತುತ ತೆರಿಗೆ ಪದ್ಧತಿಯಿಂದ ತೀವ್ರವಾಗಿ ತೊಂದರೆಗಳನ್ನು ಅನುಭವಿಸುತ್ತಿದೆ. ಇದರಿಂದಾಗಿ ನ್ಯಾಯಸಮ್ಮತ ವ್ಯಾಪಾರದ ನಡೆಸುವ ಸಹಕಾರ ಸಂಸ್ಥೆಗಳ ವೆಚ್ಚ ಹೆಚ್ಚಾಗಿದ್ದು, ಖಾಸಗಿ ಮಾರುಕಟ್ಟೆ ನಿರ್ವಾಹಕರ ವಿರುದ್ಧ ಪೈಪೋಟಿ ನಡೆಸುವುದು ಕಷ್ಟಕರವಾಗಿದೆ ಎಂದು ವಿವರಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಕರ್ನಾಟಕದಿಂದ ಖರೀದಿಸುವ ಅಡಿಕೆಗೆ ಈಗಾಗಲೇ ಮೂಲ ಸ್ಥಳದಲ್ಲಿಯೇ (ಕರ್ನಾಟಕದಲ್ಲಿ) ಎಪಿಎಂಸಿ ಸೆಸ್/ಮಾರುಕಟ್ಟೆ ಶುಲ್ಕವನ್ನು ವಿಧಿಸಲಾಗಿರುತ್ತದೆ. ಇದೇ ಅಡಿಕೆಗೆ ಉತ್ತರ ಪ್ರದೇಶದಲ್ಲಿ ಮತ್ತೆ ಮಂಡಿ ತೆರಿಗೆ ವಿಧಿಸಲಾಗುತ್ತಿದ್ದು, ಒಂದೇ ಕೃಷಿ ಉತ್ಪನ್ನದ ಮೇಲೆ ಎರಡು ಬಾರಿ ಮಾರುಕಟ್ಟೆ ಶುಲ್ಕದ ಹೊರೆ ಬೀಳುತ್ತಿದೆ ಎಂದು ಕ್ಯಾಂಪ್ಕೊ ನಿಯೋಗವು ಬೊಟ್ಟು ಮಾಡಿತು. ಈ ಹೆಚ್ಚುವರಿ ತೆರಿಗೆ ಹೊರೆಯು ಉತ್ತರ ಪ್ರದೇಶದಲ್ಲಿನ ನಮ್ಮ ವ್ಯಾಪಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ವಹಿವಾಟಿನಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಗಿದೆ ಮತ್ತು ಕಾನ್ಪುರದ ಮಾರಾಟ ಮಳಿಗೆಯನ್ನು ಅನಿವಾರ್ಯವಾಗಿ ಮುಚ್ಚಲ್ಪಟ್ಟಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಯಿತು.
ಅಡಿಕೆ ಮೇಲಿನ ಮಂಡಿ ತೆರಿಗೆಯನ್ನು ರದ್ದುಗೊಳಿಸಬೇಕು ಅಥವಾ ಪರ್ಯಾಯವಾಗಿ ಸಹಕಾರ ಸಂಸ್ಥೆಗಳಿಗಾದರೂ ವಿನಾಯಿತಿ ನೀಡಬೇಕು ಹಾಗೂ ದ್ವಿಗುಣ ಮಾರುಕಟ್ಟೆ ಶುಲ್ಕದ ಹೊರೆಯಿಂದ ಪರಿಹಾರ ಒದಗಿಸುವಂತೆ ಕ್ಯಾಂಪ್ಕೊ, ಉತ್ತರ ಪ್ರದೇಶ ಸರ್ಕಾರವನ್ನು ವಿನಂತಿಸಿತು. ಇಂತಹ ಕ್ರಮಗಳಿಂದ ಸಹಕಾರಿ ಸಂಸ್ಥೆಗಳ ವ್ಯಾಪಾರ ಬಲಗೊಳ್ಳುತ್ತವೆ, ಲಕ್ಷಾಂತರ ರೈತರ ಹಿತಾಸಕ್ತಿ ಕಾಪಾಡಿದಂತಾಗುತ್ತದೆ ಮತ್ತು ನ್ಯಾಯಸಮ್ಮತ ವ್ಯಾಪಾರ ಚಟುವಟಿಕೆಗಳ ಮೂಲಕ ಸರ್ಕಾರಕ್ಕೂ ಹೆಚ್ಚಿನ ಆದಾಯ ಲಭಿಸುವುದು ಎಂದು ಮನವರಿಕೆ ಮಾಡಲಾಯಿತು.
ಕ್ಯಾಂಪ್ಕೊ ನಿಯೋಗವು ಪ್ರಸ್ತಾಪಿಸಿದ ವಿಷಯಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಹಕಾರ ಸಂಸ್ಥೆಗಳಿಗೆ ಸರ್ಕಾರವು ಎಲ್ಲಾ ರೀತಿಯ ಬೆಂಬಲವನ್ನು ನೀಡಲಿದೆ ಹಾಗೂ ಮಂಡಿಸಿದ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಅವರು ಕ್ಯಾಂಪ್ಕೊ ಚಟುವಟಿಕೆಗಳು ಮತ್ತು ಅದರ ಮೌಲ್ಯವರ್ಧಿತ ಉದ್ಯಮಗಳ ಬಗ್ಗೆ ತೀವ್ರ ಆಸಕ್ತಿ ವ್ಯಕ್ತಪಡಿಸಿದರು. ರೈತರ ಕಲ್ಯಾಣ, ಮೌಲ್ಯವರ್ಧನೆ ಮತ್ತು ಗ್ರಾಮೀಣ ಆರ್ಥಿಕಾಭಿವೃದ್ಧಿಯ ನಿಟ್ಟಿನಲ್ಲಿ ಸಹಕಾರ ಸಂಸ್ಥೆಯ ಕೊಡುಗೆಯನ್ನು ಅರಿಯಲು, ಮುಂದಿನ ಅನುಕೂಲಕರ ದಿನಾಂಕದಂದು ಪುತ್ತೂರಿನಲ್ಲಿರುವ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ತಮ್ಮ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕ್ಯಾಂಪ್ಕೊ ನಿಯೋಗವು ಕೃತಜ್ಞತೆ ಸಲ್ಲಿಸಿತು. ಅವರ ಬೆಂಬಲವು ರೈತ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ನಿಯೋಗವು ವ್ಯಕ್ತಪಡಿಸಿತು.
ಈ ಸಭೆಯಲ್ಲಿ ಕ್ಯಾಂಪ್ಕೊ ಲಕ್ನೋ ಶಾಖೆಯ ವ್ಯವಸ್ಥಾಪಕರಾದ ರವಿಶಂಕರ್ ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಪ್ರಸಾದ್ ಅವರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

