ಚಿಕ್ಕಮಗಳೂರು: ಸಹಕಾರ ಭಾರತಿಯ ಕರ್ನಾಟಕ ರಾಜ್ಯಮಟ್ಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಪ್ರಶಿಕ್ಷಣ ವರ್ಗವು ಭಾನುವಾರ ಮತ್ತು ಸೋಮವಾರ ಶೃಂಗೇರಿಯ ಶಾರದಾ ಕಂಫರ್ಟ್ಸ್ ಸಭಾಭವನದಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಿ.ಟಿ .ರವಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಕೆ.ಎಸ್ ನಯನ ವಹಿಸಿದ್ದರು. ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಭಾರತಿ ಕರ್ನಾಟಕದ ಅಧ್ಯಕ್ಷ ಪ್ರಭುದೇವ ಆರ್ ಮಾಗನೂರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಪ್ರಶಿಕ್ಷಣ ವರ್ಗದ ಮಹತ್ವವನ್ನು ತಿಳಿಸಿದರು. ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪೊರೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಅಭ್ಯಾಸ ವರ್ಗದ ಪ್ರಥಮ ಅವಧಿಯಲ್ಲಿ ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರಿಯ ಪ್ರಮುಖರಾದ ಎಸ್.ಆರ್. ಸತೀಶ್ಚಂದ್ರ ಸಂಘಟನಾ ಕಾರ್ಯದರ್ಶಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಪರಸ್ಪರ ಪರಿಚಯ ಮತ್ತು ಸಂವಾದದ ಮೂಲಕ ಅರಿವು ಮೂಡಿಸಿದರು. ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪೊರೆ ಸಂಘಟನಾತ್ಮಕ ವಿಚಾರಗಳ ಬಗ್ಗೆ ಮನದಟ್ಟು ಮಾಡಿದರು. ರಾತ್ರಿ ಭೋಜನದ ಬಳಿಕ ಶೃಂಗೇರಿ ಶ್ರೀಗಳ ದರ್ಶನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸೋಮವಾರ ಸಹಕಾರ ಭಾರತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಬಿ.ಆರ್, ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಸಂರಚನೆ, ಸಕ್ರಿಯತೆ, ವಿಭಾಗ ಮಟ್ಟದಲ್ಲಿ ಸಭೆ ಮತ್ತು ಕಾರ್ಯಕ್ರಮಗಳ ಆಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕರ್ತ ಮತ್ತು ಕಾರ್ಯ ಪದ್ಧತಿ ಎಂಬ ವಿಚಾರದ ಬಗ್ಗೆ ರಾಜ್ಯ ಸಹಕಾರ ಭಾರತಿ ಪ್ರಭಾರಿಗಳಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಮಾಹಿತಿ ನೀಡಿದರು. ಆ ಬಳಿಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪೊರೆ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮುಕ್ತ ಸಂವಾದ ಮತ್ತು ಚರ್ಚೆ ನಡೆಸಿಕೊಟ್ಟರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪೊರೆ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳು ಮತ್ತು ಸಹಕಾರ ಭಾರತಿಯ ಕಾರ್ಯಕರ್ತರಿಗೆ ಇರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ವಿಶೇಷ ಮಾಹಿತಿ ಮಾರ್ಗದರ್ಶನ ನೀಡಿದರು. ಎರಡು ದಿನಗಳ ಯಶಸ್ವಿ ಪ್ರಶಿಕ್ಷಣ ವರ್ಗವನ್ನು ವ್ಯವಸ್ಥೆಗೊಳಿಸಿದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಭಾರತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ರಾಜ್ಯದ 21 ಜಿಲ್ಲೆಗಳಿಂದ ಸಂಘಟನಾ ಕಾರ್ಯದರ್ಶಿಗಳು ಮತ್ತು 4 ವಿಭಾಗ ಸಂಘಟನಾ ಪ್ರಮುಖರು ಮತ್ತು ಇಬ್ಬರು ಸಹ ಸಂಘಟನಾ ಪ್ರಮುಖರು 2 ದಿನಗಳ ಪ್ರಶಿಕ್ಷಣ ವರ್ಗದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com





