ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಅಭಿಪ್ರಾಯ
ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಶ್ರೀಶಾ ಸೌಹಾರ್ದ ಸೊಸೈಟಿಯ ವತಿಯಿಂದ ಭಾನುವಾರ ಮಂಗಳಾದೇವಿಯ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಮಂಗಳೂರು ತಾಲೂಕಿನ 2026ನೇ ಸಾಲಿನ ಸರಕಾರಿ/ಅನುದಾನಿತ ಕನ್ನಡ ಮಾಧ್ಯಮದ ಶಾಲೆಗಳ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಹಾಗೂ ಸರಕಾರಿ/ಅನುದಾನಿತ ಪದವಿಪೂರ್ವ ಕಾಲೇಜುಗಳ ಅಂತಿಮ ಪರೀಕ್ಷೆಯಲ್ಲಿ 90% ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಒಟ್ಟು 120 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ ಶಾಲು ಹೊದಿಸಿ, ಹಾರ ಹಾಕಿ, ಫ್ರೇಮ್ ಹಾಕಿದ ಪ್ರಶಂಸನ ಪತ್ರಗಳನ್ನು ನೀಡಿ ಗೌರವಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ಆರ್ಭಟದ ನಡುವೆ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿ ಸರಕಾರಿ ಶಾಲೆಗಳ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಶ್ರೀಶಾ ಸೊಸೈಟಿಯು ಅವರಿಗೆ ಸಹಾಯಧನದ ಜೊತೆಗೆ ಗೌರವಪೂರ್ವಕ ಸನ್ಮಾನ ಮಾಡಿರುವುದು ಅತೀವ ಸಂತಸ ತಂದಿದೆ. ಈ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಸಹಾಯಧನ ನೀಡುವುದನ್ನು ನೋಡಿದ್ದೇವೆ. ಆದರೆ 120 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವುದರ ಜೊತೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣವಾಗಿದ್ದು ಇದು ಅತೀವ ಸಂತಸ ತಂದಿದೆ. ವಿದ್ಯಾರ್ಥಿಗಳು ಈ ಸನ್ಮಾನವನ್ನು ಎಂದಿಗೂ ಮರೆಯಲಾರರು. ಶ್ರೀಶಾ ಸೊಸೈಟಿಯ ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಶ್ರೀಶಾದಂತಹ ಸೊಸೈಟಿಗಳು ನಮ್ಮ ನಗರದಲ್ಲಿರುವುದು ನಮಗೆಲ್ಲಾ ಹೆಮ್ಮೆ ಹಾಗೂ ಗೌರವ. ಶ್ರೀಶಾದ ಸೇವಾ ಕಾರ್ಯಗಳು ಹೀಗೆಯೇ ಮುಂದುವರಿಯಲಿ” ಎಂದು ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜೇಮ್ಸ್ ಕುಟಿನ್ಹಾ ಮತ್ತು ಹೆಚ್.ಆರ್.ಈಶ್ವರ್ ಸಾಂದರ್ಭಿಕವಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ಅಧ್ಯಕ್ಷ ಜಿ.ನಂಜನ ಗೌಡ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ,ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ಈ ಬಗೆಯ ಅಂಕಗಳನ್ನು ಪಡೆದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಇವರ ಈ ಸಾಧನೆಯನ್ನು ಗುರುತಿಸಿ ಗೌರವಿಸುತ್ತಿರುವ ಶ್ರೀಶಾದಂತಹ ಸೊಸೈಟಿ ನಮ್ಮ ರಾಜ್ಯ ಫೆಡರೇಶನ್‌ನಲ್ಲಿರುವುದೇ ನಮಗೆ ಹೆಮ್ಮೆ ಹಾಗೂ ಗೌರವ. ರಾಜ್ಯದಲ್ಲಿ 6500 ಸೌಹಾರ್ದ ಸೊಸೈಟಿಗಳು ಕಾರ್ಯ ನಿರ್ವಹಿಸುತ್ತಿದ್ದು ಶ್ರೀಶಾ ಮಾದರಿ ಸೊಸೈಟಿಯಾಗಿ ಹೊರಹೊಮ್ಮಿದೆ. ತಾನು ಗಳಿಸಿದ ಲಾಭದ ಒಂದು ದೊಡ್ಡ ಪಾಲನ್ನು ಮರಳಿ ಸಮಾಜಕ್ಕೆ ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ನೀಡುತ್ತಿರುವುದು ಈ ಸಹಕಾರಿಯ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ” ಎಂದು ಹೇಳಿದರು.
ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷರಾದ ಎಂ.ಎಸ್.ಗುರುರಾಜ್ ಅವರನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪರವಾಗಿ ಅಧ್ಯಕ್ಷ ನಂಜನ ಗೌಡರವರು ಸನ್ಮಾನಿಸಿದರು. ದೇಶದ ಗಡಿ ಕಾಯುವ ಸಂದರ್ಭದಲ್ಲಿ ಹುತಾತ್ಮರಾದ 50 ವೀರಯೋಧರ ಬಗ್ಗೆ ಪುಸ್ತಕವನ್ನು ಬರೆದಿರುವ ಡಾ.ಸಿಂಧು ಭಟ್ ಅವರನ್ನು ಸೊಸೈಟಿಯ ವತಿಯಿಂದ ಗೌರವಿಸಲಾಯಿತು. ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷರಾದ ಎಂ.ಎಸ್.ಗುರುರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಪ್ರಸನ್ನ ಕುಮಾರ ವಂದನಾರ್ಪಣೆಗೈದರು. ಖ್ಯಾತ ನಿರೂಪಕ ಆರ್.ಜೆ.ಪ್ರಸನ್ನ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com





