ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆರೋಗ್ಯ ಶಿಬಿರದಲ್ಲಿ ಲಿಲ್ಲಿ ಮೇರಿ ಸಲಹೆ
ಬಜ್ಪೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ ರೋಟರಿ ಕ್ಲಬ್ ಬಜ್ಪೆ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜ್ಪೆ ಕರಂಬಾರು ಹಾಗೂ ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಬಜ್ಪೆ ಇಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸದಸ್ಯರಾದ ಲಿಲ್ಲಿ ಮೇರಿ ಉದ್ಘಾಟಿಸಿ ಮಾತನಾಡಿ ಆರೋಗ್ಯದ ರಕ್ಷಣೆ ತುಂಬಾ ಮಹತ್ವದ್ದಾಗಿದೆ. ನಾವು ಆರೋಗ್ಯವಾಗಿ ಇದ್ದರೆ ಎಲ್ಲವನ್ನು ಸಂಪಾದಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ನಿಯಮಿತವಾಗಿ ಆರೋಗ್ಯದ ತಪಾಸಣೆ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, ಜನರ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ರೋಟರಿ ಕ್ಲಬ್ ಬಜ್ಪೆಯ ಅಧ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಮಾತನಾಡಿ, ಆರೋಗ್ಯವೇ ಭಾಗ್ಯ, ಆರೋಗ್ಯ ಎಲ್ಲರಿಗೂ ಮುಖ್ಯವಾಗಿ ಬೇಕಾಗಿರುವಂತದ್ದು. ಇಂದಿನ ಯುವ ಜನರಿಗೆ ಬಾಹ್ಯ ಸೌಂದರ್ಯ ಕಾಪಾಡಿಕೊಳ್ಳುವ ಬಗ್ಗೆ ಬಹುವಾದ ಕಾಳಜಿ ಇದೆ. ಆದರೆ ಆರೋಗ್ಯ ಕೆಡಿಸುವ ತಿನಿಸುಗಳ ವಿಚಾರಗಳ ಬಗ್ಗೆ ಜಾಗರೂಕತೆ ಬಹಳ ಕಡಿಮೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೇವಲ ಆರ್ಥಿಕ ಚಟುವಟಿಕೆಗಳಿಗಷ್ಟೆ ಸೀಮಿತವಾಗಿರದೇ, ಸಂಘದ ಸದಸ್ಯರ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಸಂಘದ ಸಮಾಜಮುಖಿ ಕಾರ್ಯಚಟುವಟಿಕೆಗಳು ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜ್ಪೆ, ಕರಂಬಾರು, ಇದರ ಅಧ್ಯಕ್ಷರಾದ ಶಿವರಾಮ ಪೂಜಾರಿ ಮಾತನಾಡಿ ಬಜ್ಪೆಯಲ್ಲಿ ಕಳೆದ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ ಆಯೋಜಿಸಿರುವುದು ಈ ಪರಿಸರದ ಜನರಿಗೆ ತುಂಬ ಉಪಯುಕ್ತವಾಗಿದೆ ಎಂದರು.
ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯರಾದ ಡಾ.ತಾನಿಯಾ ಗೌಡ ಮಾತನಾಡಿ ಇವತ್ತಿನ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಮಧುಮೇಹ ತಪಾಸಣೆ, ಬಿಪಿ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ-ಮೂಗು, ಗಂಟಲು ತಪಾಸಣೆ ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಶಿಬಿರಾರ್ಥಿಗಳು ಇಂತಹ ಶಿಬಿರಗಳಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದರು.
ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸನ್ ಮಂಗಳೂರು ಇದರ ದಂತ ವೈದ್ಯರಾದ ಡಾ.ನವ್ಯಾ ಮಾತನಾಡಿ, ಈ ವೈದ್ಯಕೀಯ ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ಆರೋಗ್ಯ ತಪಾಸಣೆ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಹಲ್ಲುಗಳ ಶುಚಿಗೊಳಿಸುವುದು. ಅಲ್ಲದೇ ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡ್ ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ 14 ವರ್ಷಗಳಿಂದ ಸಂಘದ ಪ್ರತೀ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ ಆಯೋಜಿಸುತ್ತ ಬರುತ್ತಿದ್ದು, ಈ ವೈದ್ಯಕೀಯ ಶಿಬಿರವು 104ನೇ ಶಿಬಿರವಾಗಿದ್ದು, ತುಂಬ ಜನರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಿ, ರೋಗ ಬರುವ ಮೊದಲೇ ನಿಯಮಿತ ಆರೋಗ್ಯ ತಪಾಸಣೆ ಮಾಡುವುದು ಉತ್ತಮ. ಉಚಿತ ವೈದ್ಯಕೀಯ ಶಿಬಿರವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ತಿಳಿಸಿದರು. ಸಹಕಾರಿ ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿಯ ಪ್ರಯೋಜನ ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು. ಸಂಘದ 34ನೇ ನೂತನ ಶಾಖೆಯು ಮಂಗಳೂರಿನ ಬೋಳಾರದಲ್ಲಿ ಶುಭಾರಂಭಗೊಂಡಿದ್ದು, ಈ ಪ್ರಯಕ್ತ 100 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.8.50, 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.00 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.50 ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಠ ಮೌಲ್ಯ ರೂ. 12,000ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ಸದಸ್ಯರಿಗೆ ನೀಡಲಾಗುವುದು. ಮುಂದಿನ ತಿಂಗಳಲ್ಲಿ ಸಂಘದ ನೂತನ 35ನೇ ಶಾಖೆಯು ಮೂಡುಬಿದಿರೆಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ತಿಳಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತರರು ಉಪಸ್ಧಿತರಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ರವಿಕಲಾ ಸ್ವಾಗತಿಸಿ, ಸಿಬ್ಬಂದಿ ಅನುಜಿತ ವಂದಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಜೊತೆ ಕಾರ್ಯದರ್ಶಿ ವಿಶ್ವನಾಥ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

