ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವದಲ್ಲಿ ಮಾಧವ ಅಮೀನ್ ಬಣ್ಣನೆ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನೀಡುತ್ತಿರುವ ಬ್ಯಾಂಕಿಂಗ್ ಸೇವೆಗಳು, ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಬ್ಯಾಂಕಿಂಗ್ ಸೇವೆಗಳಿಗೆ ಸರಿಸಮನಾಗಿದೆ ಎಂದು ಸಂಘದ ಗ್ರಾಹಕ ಮಾಧವ ಅಮೀನ್ ಹೇಳಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯನ್ನು ಸಂಘದ ಗ್ರಾಹಕರಾದ ಪ್ರದೀಪ್ ಕುಮಾರ್ ಸುವರ್ಣ, ವಿಶ್ವನಾಥ್ ರೆಂಜಾಳ, ಕೇಶವ ಹೆಚ್, ಬಾಲಕೃಷ್ಣ ಸುವರ್ಣ ಹಾಗೂ ದಯಾನಂದ ಎಸ್ ಅಮೀನ್ ಅವರ ಜೊತೆ ಜಂಟಿಯಾಗಿ ಉದ್ಘಾಟಿಸಿ ಅವರು ಮಾತನಾಡಿದರು.
https://chat.whatsapp.com/FCEnlTkAKCC0MGPhXtX4i4
ಸಂಘದ ಸದಸ್ಯ ಪ್ರದೀಪ್ ಕುಮಾರ್ ಸುವರ್ಣ ಮಾತನಾಡಿ, ಆತ್ಮಶಕ್ತಿ ಸಹಕಾರ ಸಂಘವು ಕಡಿಮೆ ಅವಧಿಯಲ್ಲೇ ಸಾಧಿಸಿರುವ ಪ್ರಗತಿ ಶ್ಲಾಘನೀಯ. ಇಲ್ಲಿನ ಸಿಬ್ಬಂದಿ ವರ್ಗದವರ ಸೇವೆಯು ಅಮೂಲ್ಯವಾಗಿದ್ದು, ಇದು ಈ ಶಾಖೆಯಲ್ಲಿ ಸಾಕಾರಗೊಂಡಿದೆ ಎಂದರು. ವಿಶ್ವನಾಥ್ ರೆಂಜಾಳ ಮಾತನಾಡಿ, ಆತ್ಮಶಕ್ತಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಸಂಘದ ಸದಸ್ಯರಾದ ನಾವೆಲ್ಲರೂ ಮಾಡೋಣ. ಮತ್ತಷ್ಟು ಎತ್ತರಕ್ಕೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತಲುಪಲಿ ಎಂದು ಶುಭ ಹಾರೈಸಿದರು. ಕೇಶವ ಹೆಚ್ ಮಾತನಾಡಿ ಒಬ್ಬ ವ್ಯಕ್ತಿಯ ಸಮಯವನ್ನು ಹಾಳು ಮಾಡದೆ ಸ್ಪಂದಿಸುವುದು ಜಗತ್ತಿನಲ್ಲಿ ಅತ್ಯಮೂಲ್ಯ ಈ ಕೆಲಸ. ಆತ್ಮಶಕ್ತಿ ಸೊಸೈಟಿಯು ಈ ವಿಷಯದಲ್ಲಿ ಗ್ರಾಹಕರ ಸಮಯಕ್ಕೆ ಹೆಚ್ಚು ಒತ್ತು ನೀಡಿ, ಗ್ರಾಹಕ ಸ್ನೇಹಿ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಸಂಘದ ಬಜ್ಪೆ ಶಾಖೆಯಲ್ಲಿ ಗ್ರಾಹಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಿರಖು ಠೇವಣಿ ಸಂಗ್ರಹ ಹಾಗೂ ಸಾಲ ವಿತರಿಸಲಾಗಿದೆ. ಬಜ್ಪೆಯ ವಠಾರದಲ್ಲಿ ಹಲವಾರು ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕುಗಳು ಇದ್ದರೂ ನಮ್ಮ ಸಂಸ್ಥೆಯು ಗ್ರಾಹಕರಿಗೆ ಸೇವೆ ಒದಗಿಸುವುದರಲ್ಲಿ ಮುಂಚೂಣಿಯಲ್ಲಿ ಇರಲು ಸಂಘದ ಗ್ರಾಹಕರ ಸಹಕಾರವೇ ಕಾರಣ. ಶಾಖೆಯ ವಾರ್ಷಿಕೋತ್ಸವದ ಪ್ರಯಕ್ತ ೧೦೦ ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.8.50, 500 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.00 ಹಾಗೂ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ.10.50 ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. 12,000ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ನಮ್ಮ ಎಲ್ಲಾ ಶಾಖೆಗಳಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್‌ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ವಿಮಾ ಪಾಲಿಸಿಗಳಾದ ಎಲ್‌ಐಸಿ, ಕೇರ್, ಇಫ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಭ್ಯವಿರುತ್ತದೆ. ಸಹಕಾರಿ ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿಯ ಪ್ರಯೋಜನ ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯವಿಜಯ್ ಸಂಘದ ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯರಾದ ಶ್ರೀಮತಿ ಲಿಲ್ಲಿ ಪಾಯ್ಸ್, ಚಿತ್ತರಂಜನ್ ಸಾಲ್ಯಾನ್, ಸುರೇಶ್ ಹಾಗೂ ನಾಗರಾಜ್ ರಾವ್ ಸಂಘದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಖೆಯ ಸಿಬ್ಬಂದಿ ಸ್ವಾತಿ ಸ್ವಾಗತಿಸಿ, ಅಕ್ಷತಾ ಎನ್ ಕೋಟ್ಯಾನ್ ವಂದಿಸಿದರು. ಶಾಖಾಧಿಕಾರಿ ರವಿಕಲಾ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

