ವಿಷಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಎಚ್.ಎನ್ ರಮೇಶ್ ಕಿವಿಮಾತು
ಮಂಗಳೂರು: ಯಾವುದೇ ಸಹಕಾರಿ ಸಂಸ್ಥೆಗಳು ಸಾಲಗಳನ್ನು ಕೊಡುವಾಗ ಅವುಗಳಿಗೆ ಸಾಲ ತೆಗೆದುಕೊಳ್ಳುವವರು ಕೊಡುವ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಹಿಂದಿನ ವರದಿಗಳನ್ನು ಗಮನಿಸಿಕೊಳ್ಳಬೇಕು ಎಂದು ಸಹಕಾರ ಸಂಘಗಳ ದಕ್ಷಿಣ ಕನ್ನಡ ಜಿಲ್ಲಾ ಉಪನಿಬಂಧಕರಾದ ಎಚ್.ಎನ್ ರಮೇಶ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಮಂಗಳೂರಿನ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ವತಿಯಿಂದ ಮಂಗಳೂರು, ಮೂಲ್ಕಿ, ಉಳ್ಳಾಲ ಹಾಗೂ ಮೂಡುಬಿದರೆ ತಾಲೂಕಿನ ಸೌಹಾರ್ದ ಸಹಕಾರಿಗಳಿಗಾಗಿ ಆಯೋಜಿಸಿದ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾರಿಗೇ ಆಗಲಿ ಸಾಲ ಕೊಡುವಾಗ ಕನಿಷ್ಠ ದಾಖಲೆಗಳನ್ನು ಪಡೆದುಕೊಳ್ಳಲೇಬೇಕು. ಸಾಲ ತೆಗೆದುಕೊಳ್ಳವವ ಅದನ್ನು ಮರುಪಾವತಿ ಮಾಡುವಷ್ಟು ಶಕ್ತನಾಗಿದ್ದಾನೆಯೇ ಎಂದು ಗಮನಿಸಿಕೊಳ್ಳಬೇಕು. ಸಾಲ ತೆಗೆದುಕೊಳ್ಳುವವ ಮರುಪಾವತಿ ಮಾಡುವಷ್ಟು ಶಕ್ತನಲ್ಲದಿದ್ದರೆ ಮುಂದೆ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಕಾನೂನು ಚೌಕಟ್ಟು ಬಿಗಿಯಾಗಿರುವ ಕಾರಣ ಎಲ್ಲ ಅಂಶಗಳ ಬಗ್ಗೆಯೂ ಗಮನ ಹರಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಈಗೀಗ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಇದರ ಬಗ್ಗೆ ಎಲ್ಲ ಸಹಕಾರಿ ಸಂಸ್ಥೆಗಳೂ ಗರಿಷ್ಠ ಗಮನ ಹರಿಸಬೇಕಾದ ಅಗತ್ಯವಿದೆ. ಆಡಳಿತ ಮಂಡಳಿಗಳೂ ಕನಿಷ್ಠ ಆರು ತಿಂಗಳಿಗೊಮ್ಮೆ ಲಾಕರ್‌ನಲ್ಲಿರುವ ಚಿನ್ನಾಭರಣಗಳನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು ಎಂದು ಎಚ್.ಎನ್ ರಮೇಶ್ ಸಲಹೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ದೇವಸ್ಯ ಸಮಯ ಸಮಯಕ್ಕೆ ಮಾಡುತ್ತಿರುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಭಾರತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಸೌಹಾರ್ದ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಸಂಪನ್ಮೂಲ ವ್ಯಕ್ತಿ ಭಾಸ್ಕರ ಹೆಗ್ಡೆ ಕಾಗೇರಿ ಉಪಸ್ಥಿತರಿದ್ದರು. ನಂದನ್ ಬಿ.ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೋಹಿತ್ ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



