ಸೌಹಾರ್ದ ಸಹಕಾರ ಚಳವಳಿಯ ‘ರಜತ ಮಹೋತ್ಸವ’ ಸಮಾರೋಪ ಉದ್ಘಾಟಿಸಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ
ಬೆಳಗಾವಿ: ‘ರಾಜ್ಯದಲ್ಲಿನ ಸೌಹಾರ್ದ ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನಾವು ನೀತಿ ರೂಪಿಸುತ್ತೇವೆ. ಸೌಹಾರ್ದ ಸಹಕಾರಿ ಸಂಘಗಳ ಬೆಳವಣಿಗೆಗೆ ಸಹಕರಿಸಲು ನಾವು ಬದ್ಧರಿದ್ದೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಬೆಳಗಾವಿಯ ಕೆಎಲ್‌ಇ ಸೆಂಟೇನರಿ ಕನ್ವೆನ್ಸನ್ ಸೆಂಟರ್‌ನಲ್ಲಿ ಭಾನುವಾರ ಸೌಹಾರ್ದ ಸಹಕಾರ ಚಳವಳಿಯ ‘ರಜತ ಮಹೋತ್ಸವ’ದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಸಹಕಾರಿ ಸಂಸ್ಥೆಗಳ ಮೇಲೆ ಒಂದಿಷ್ಟಾದರೂ ಸರ್ಕಾರದ ನಿಯಂತ್ರಣವೂ ಬೇಕಾಗುತ್ತದೆ. ಹಾಗೆಂದು ನಾವು ತೊಂದರೆ ಕೊಡುವುದಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ಗ್ರಾಹಕರು ಠೇವಣಿ ಇರಿಸುವ ಹಣ ಸುರಕ್ಷಿತವಾಗಿ ಇರಬೇಕು ಎಂಬುದಷ್ಟೇ ನಮ್ಮ ಕಳಕಳಿ. ಸೌಹಾರ್ದ ಸಹಕಾರಿಗಳ ಬೇಡಿಕೆಗಳ ಕುರಿತಾಗಿ ವಿಸ್ತೃತವಾಗಿ ಚರ್ಚೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ಕರೆದುಕೊಂಡು ಹೋಗಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳು ಗ್ರಾಹಕರ ವಿಶ್ವಾಸ ಗಳಿಸಿವೆ. ಮನೆ-ಮನೆಗೆ ಹಣ ತಲುಪಿಸುವ ಕೆಲಸ ಮಾಡುತ್ತಿವೆ. ಇಂಥ ಸಂಸ್ಥೆಗಳು ಇನ್ನಷ್ಟು ಪ್ರಗತಿಯತ್ತ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಹಕಾರವೆಂದರೆ ಎಲ್ಲರ ಜೀವನವನ್ನು ಅಭಿವೃದ್ಧಿ ಪಡಿಸಲು ಸಲ್ಲಿಸುವ ಅತ್ಯುತ್ತಮ ಸೇವೆ. ಎಲ್ಲರ ಆರ್ಥಿಕತೆಯನ್ನು ಸುಧಾರಿಸಲು ಸಹಕಾರಿ ಕ್ಷೇತ್ರದಿಂದ ಸಾಧ್ಯವಿದೆ ಎಂದು ಹೇಳಿದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ ‘ಸಹಕಾರ ಸಂಸ್ಥೆಗಳು ಬಡವರ ಆರ್ಥಿಕತೆ ಸುಧಾರಿಸಲು ವಿವಿಧ ಯೋಜನೆ ರೂಪಿಸಬೇಕು. ನಾನು ಸದಾ ಸಹಕಾರಿ ಸಂಸ್ಥೆಗಳ ಜತೆಗಿರುತ್ತೇನೆ’ ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಬೆಳಗಾವಿಗೂ, ಸಹಕಾರ ರಂಗಕ್ಕೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಯ ಅನೇಕ ದಿಗ್ಗಜರು ಕ್ರಿಯಾಶೀಲವಾಗಿ ಕೆಲಸ ಮಾಡಿ, ಸಹಕಾರ ರಂಗಕ್ಕೆ ಹೆಸರು ತಂದಿದ್ದಾರೆ’ ಎಂದರು. ರಾಜ್ಯಸಭಾ ಮಾಜಿ ಸದಸ್ಯರಾದ ಪ್ರಭಾಕರ ಕೋರೆ ಮಾತನಾಡಿ, ಸಹಕಾರ ರಂಗ ಆರಂಭವಾಗಿ 120 ವರ್ಷಗಳಾಯಿತು. ಈಗಲೂ ಸಹಕಾರ ಚಳವಳಿ ಜೀವಂತವಾಗಿದೆ. ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ಸರ್ಕಾರದ ಸಂಪೂರ್ಣ ನಿಯಂತ್ರಣ ಬೇಡ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್, ಪ್ರಮುಖರಾದ ಎಸ್.ಎಸ್ ಪಾಟೀಲ, ಕಲ್ಲಪ್ಪ ಬಬ್ಬನಗೋಳ, ಮನೋಹರ ಮಸ್ಕಿ, ಎಸ್.ಆರ್ ಸತೀಶ್ಚಂದ್ರ, ಎಚ್.ವಿ ರಾಜೀವ್, ಸಿ.ಎನ್ ಪರಶಿವಮೂರ್ತಿ, ಅನೂಪ್ ದೇಶಪಾಂಡೆ, ವಿಶ್ವನಾಥ ಹಿಋೇಮಠ, ಗುರುನಾಥ ಜಾಂತೀಕರ್, ಬಿ.ಎಚ್. ಕೃಷ್ಣ ರೆಡ್ಡಿ, ಸಚಿನ್ ಪಾಟೀಲ್, ಶರಣಗೌಡ ಪಾಟೀಲ್ ಮೊದಲಾದವರು ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

