ಮಂಗಳೂರಿನಲ್ಲಿ ಸಹಕಾರ ಸಪ್ತಾಹ ಉದ್ಘಾಟಿಸಿ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅಭಿಪ್ರಾಯ
ಮಂಗಳೂರು: ದೇಶದಲ್ಲಿ ಸಹಕಾರದಿಂದ ಮಾತ್ರ ಸ್ವಾವಲಂಬನೆ ಸಾಧ್ಯ. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ದೇಶದಲ್ಲಿ ಗ್ರಾಮೀಣ ಭಾಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸಹಕಾರ ಕ್ಷೇತ್ರ ಮಾಡುತ್ತ ಬಂದಿದೆ. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ, ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಕೆಲಸವನ್ನು ಸಹಕಾರ ಕ್ಷೇತ್ರ ಮಾಡುತ್ತಿದೆ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಎಲ್ಲಾ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜರುಗಿದ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯ ಮಹಿಳೆಯರು ಸ್ವಾವಲಂಬನೆ, ಸ್ವಾಭಿಮಾನದ ವಿಷಯದಲ್ಲಿ ದೇಶಕ್ಕೆ ಪ್ರೇರಣೆ ನೀಡಬಲ್ಲವರು. ಹಂಚಿನ ಕಾರ್ಖಾನೆ, ಬೀಡಿ ಉದ್ಯಮ, ಬೀಜದ ಕಾರ್ಖಾನೆಗಳಲ್ಲಿ ದುಡಿದು ತಮ್ಮ ಮಕ್ಕಳನ್ನು ಇಂಜಿನಿಯರಿಂಗ್, ಡಾಕ್ಟರ್ ಓದಿಸಿದ್ದಾರೆ. ಇದು ದೇಶಕ್ಕೆ ಮಾದರಿ. ಸ್ವಾವಲಂಬನೆಯ ದಾರಿ ತೋರಿಸಿಕೊಟ್ಟ ಮಹಿಳೆಯರಲ್ಲಿ ನಾಯಕತ್ವದ ಗುಣವೂ ಇದೆ. ಒಂದು ಕುಟುಂಬವನ್ನೇ ಸಂಭಾಳಿಸಿಕೊಂಡು ಹೋಗುವ ಶಕ್ತಿ ಅವರಲ್ಲಿದೆ ಎಂದು ಹೇಳಿದರು.
ವಾಣಿಜ್ಯ ಬ್ಯಾಂಕುಗಳು ಸಾಲ ಕೊಡದೆ ಇದ್ದಾಗ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಕರೆದು ಕಡಿಮೆ ಬಡ್ಡಿಗೆ ಸಾಲ ನೀಡಿದ್ದಾರೆ. ಇದರಿಂದ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದೂ ಖಾದರ್ ಹೇಳಿದರು.


ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಮಾತನಾಡಿ, ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಕನಸು ನನಸು ಮಾಡಲು ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರ ಸಪ್ತಾಹದ ಮೂಲಕ ಸಹಕಾರ ಕ್ಷೇತ್ರಕ್ಕೆ ನೆಹರು ಅವರ ಕೊಡುಗೆಯನ್ನು ಸ್ಮರಿಸುವ ಕೆಲಸವಾಗುತ್ತಿದೆ. ಸಹಕಾರ ಕ್ಷೇತ್ರ ಇಲ್ಲದೆ ನಿದ್ದಿದ್ದರೆ ದೇಶದ ಅಭಿವೃದ್ಧಿ ಇಷ್ಟು ವೇಗವಾಗಿ ಸಾಧ್ಯವಾಗುತ್ತಿರಲಿಲ್ಲ. ಸ್ವಾವಲಂಬನೆಗೆ ಸಹಕಾರ ಕ್ಷೇತ್ರದ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ಮಂಗಳೂರು ಎಂದರೆ ಸುಂದರ ನೆಲ, ಚುರುಕಿನ ಜನ ಎಂದು ಇಂದಿರಾ ಗಾಂಧಿ ಹೇಳಿದ್ದರು. ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಕಂಡಾಗ ಇಲ್ಲಿನ ಜನರ ಚುರುಕುತನದ ಅರಿವಾಗುತ್ತದೆ. ಇಲ್ಲಿನ ಜನರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವಂತೆ ಮಾಡುವಲ್ಲಿ ರಾಜೇಂದ್ರ ಕುಮಾರ್ ಅವರ ಪರಿಶ್ರಮವಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಗೈರುಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮುಂದಿನ ಸಾಲಿನ ಸಹಕಾರ ಸಪ್ತಾಹದ ಆಚರಣೆಯ ವೇಳೆ ದಕ್ಷಿಣ ಕನ್ನಡದವರೇ ಸಚಿವರಾಗಬೇಕು. ಈ ಬಗ್ಗೆ ಮನವಿಯನ್ನು ಮುಖ್ಯಮಂತ್ರಿಯವರಿಗೆ ತಿಳಿಸಿ ಎಂದು ಸ್ಪೀಕರ್ ಖಾದರ್ ಅವರಲ್ಲಿ ನಿವೇದಿಸಿಕೊಂಡರು. ಇದೇ ವೇಳೆ ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳು ಇಷ್ಟು ಅಚ್ಚುಕಟ್ಟಾಗಿ ಬೇರೆಲ್ಲಿ ಆಗುತ್ತದೆ ಎಂದು ಜಿ.ಟಿ ದೇವೇಗೌಡರನ್ನು ಪ್ರಶ್ನಿಸಿದರು. ಸಹಕಾರ ಸಂಘಗಳ ಪರಿಶ್ರಮದಿಂದ ಇಂದು ಇಷ್ಟು ಜನ ಸೇರಿದ್ದಾರೆ. ಬ್ಯಾಂಕುಗಳ ತವರೂರು ಆಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸ್ಥಾಪನೆಯಾಗಿದ್ದ ಬ್ಯಾಂಕುಗಳ ವಿಲೀನಗೊಳ್ಳುತ್ತಿವೆ. ಈ ಸಮಯದಲ್ಲಿ ಸಹಕಾರಿ ಸಂಘಗಳು ಜನರ ಸೇವೆಗೆ ಮುಂದೆ ಬರುತ್ತಿವೆ ಎಂದು ಹೇಳಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡುವ ಸಹಕಾರಿ ಮಾಣಿಕ್ಯ ಪ್ರಶಸ್ತಿಯನ್ನು ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಕೋಟ ವ್ಯವಸಾಯಿಕ ಸಹಕಾರಿ ಸಂಘ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಪ್ರದಾನ ಮಾಡಲಾಯಿತು. ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘ, ಉತ್ತಮ ಪತ್ತಿನ ಸಹಕಾರಿ ಸಂಘ, ಉತ್ತಮ ಆಡಳಿತಾತ್ಮಕ ಸಹಕಾರ ಸಂಘ, ಉತ್ತಮ ಸೌಹಾರ್ದ ಸಹಕಾರಿ ಸಂಘ, ಉತ್ತಮ ಟಿ.ಎ.ಪಿ.ಸಿ.ಎಂ.ಎಸ್ ಪ್ರಶಸ್ತಿಗಳನ್ನು ಹಾಗೂ ವಜ್ರಮಹೋತ್ಸವ ಪೂರೈಸಿದ ಸಹಕಾರಿ ಸಂಘ-ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪೂರೈಸಿದ ಸಹಕಾರಿ ಸಂಘ ವಿಶೇಷ ಪ್ರಶಸ್ತಿ, ಉತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ, ಉತ್ತಮ ನವೋದಯ ಸ್ವಸಹಾಯ ಗುಂಪು ಪ್ರಶಸ್ತಿಗಳನ್ನು ನೀಡಲಾಯಿತು. ಮೂಡುಬಿದಿರೆ ಸಹಕಾರ ತರಬೇತಿ ಕೇಂದ್ರದ ಮೊದಲ ರ್ಯಾಂಕ್ ವಿಜೇತರಾದ ಚೇತನಾ ಬಿ.ಎಸ್. ಹಾಗೂ ಪ್ರತೀಕ್ಷಾ ಬಲ್ಪoತಿ ಮತ್ತು ಪತ್ರಿಕಾ ರಂಗದ ಪ್ರಶಸ್ತಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಇವರಿಗೆ ನೀಡಲಾಯಿತು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ನವೋದಯ ಸಮಾವೇಶದ ಸ್ಮರಣ ಸಂಚಿಕೆ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಹೊರತರಲಾಗುವ ಕರಾವಳಿ ಸಹಕಾರಿ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉಡುಪಿ ಶಾಸಕ, ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ನಬಾರ್ಡ್ ಮುಖ್ಯ ಮಹಾಪ್ರಬಂಧಕ ಡಾ.ಸುರೇಂದ್ರ ಬಾಬು, ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ ಕುಮಾರ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್ ನವೀನ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಲಿಂಗರಾಜ್, ಸಹಕಾರ ಸಂಘಗಳ ಮೈಸೂರು ಪ್ರಾಂತ ಜಂಟಿ ನಿಬಂಧಕರಾದ ಪ್ರಸಾದ್ ರೆಡ್ಡಿ ಪಿ., ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್., ಉಡುಪಿ ಜಿಲ್ಲಾ ಉಪನಿಬಂಧಕಿ ಲಾವಣ್ಯ ಕೆ.ಆರ್., ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಕೆ.ಗೋಪಾಲಕೃಷ್ಣ ಭಟ್, ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಿತೆಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಇದಕ್ಕೂ ಮೊದಲು ಎಸ್‌ಸಿಡಿಸಿಸಿ ಬ್ಯಾಂಕ್ ಆವರಣದಿಂದ ಕರಾವಳಿ ಉತ್ಸವ ಮೈದಾನದ ತನಕ ಆಕರ್ಷಕ ಮೆರವಣಿಗೆ ನಡೆಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com







