ಬೆಳಗಾವಿ: ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಣ್ಣಾಸಾಹೇಬ ಜೊಲ್ಲೆ, ರಾಜು ಕಾಗೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಒಮ್ಮತದಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ, ರಾಜು ಕಾಗೆ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಆ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕಿಗೆ ಆಗಮಿಸಿ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ನೂತನ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಬ್ಯಾಂಕ್ ನಂ.1 ಸ್ಥಾನಕ್ಕೆ ಹೋಗಲಿದೆ-ಬಾಲಚಂದ್ರ ಜಾರಕಿಹೊಳಿ ವಿಶ್ವಾಸ:
ಅಣ್ಣಾಸಾಹೇಬ ಜೊಲ್ಲೆ ಬೆಳಗಾವಿಯ ಮನಮೋಹನ್ ಸಿಂಗ್ ಇದ್ದಂತೆ. ಆರ್ಥಿಕ ತಜ್ಞರೂ ಆಗಿರುವ ಅಣ್ಣಾಸಾಹೇಬ ಜೊಲ್ಲೆ ಅವರ ಆಡಳಿತದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ 6,500 ಕೋಟಿ ರೂ. ಇರುವ ಠೇವಣಿಯನ್ನು 10 ಸಾವಿರ ಕೋಟಿಗೆ ಹೆಚ್ಚಿಸಲಿದ್ದು, ರಾಜ್ಯದಲ್ಲೇ ನಂ.1 ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಬೆಳಗಾವಿ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು..
ಐದು ವರ್ಷದಲ್ಲಿ ನಂ.1 ಮಾಡುತ್ತೇವೆ:
ನೂತನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, “ಜಾರಕಿಹೊಳಿ ಕುಟುಂಬ ಮತ್ತು ಎಲ್ಲ ನಿರ್ದೇಶಕರು ನಮ್ಮನ್ನು ಅಧ್ಯಕ್ಷರನ್ನಾಗಿ, ರಾಜು ಕಾಗೆ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ನಮ್ಮ ಬ್ಯಾಂಕ್ ಬರುವ ಐದು ವರ್ಷದಲ್ಲಿ ನಂ.1 ಸ್ಥಾನಕ್ಕೆ ಬರುವ ವಿಶ್ವಾಸವಿದೆ. ಸಾಕಷ್ಟು ಹಣಕಾಸು ಸಂಸ್ಥೆಗಳನ್ನು ನಡೆಸಿದ ಅನುಭವ ನನಗಿದೆ. ಈ ಅವಕಾಶವನ್ನು ಬಳಸಿಕೊಂಡು ಮಾದರಿ ಬ್ಯಾಂಕ್ ಮಾಡುವೆ. ಗ್ರಾಹಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇನೆ. ಗ್ರಾಹಕರು, ಪಿಕೆಪಿಎಸ್ ಗಳ ಸಭೆ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ” ಎಂದರು.

