ನವೀಕೃತ ವಿಶ್ವಸೌಧ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಶುಭ ಹಾರೈಕೆ
ಮಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳು ಜನರಿಗೆ ಸಾಲ ನೀಡಲು ಹಿಂಜರಿಯುತ್ತಿವೆ. ಆದರೆ ಸಹಕಾರಿ ಸಂಸ್ಥೆಗಳು ಜನರ ಮನೆ ಬಾಗಿಲಿಗೆ ಹೋಗಿ ಉತ್ತಮ ಸೇವೆ ನೀಡುತ್ತಾ ಶುಭ ಕಾರ್ಯಗಳು ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ತ್ವರಿತವಾಗಿ ಸಾಲ ನೀಡುತ್ತಾ ಬೆಳೆಯುತ್ತಿವೆ. ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ರಾಜ್ಯಾದ್ಯಂತ ಶಾಖೆಗಳನ್ನು ವಿಸ್ತರಿಸಿ ಇನ್ನಷ್ಟು ಮಂದಿ ಉದ್ದಿಮೆ ಆರಂಭಿಸಲು ನೆರವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಶುಭ ಹಾರೈಸಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಕೇಂದ್ರ ಕಚೇರಿ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಎಸ್.ಕೆ ಗೋಲ್ಡ್ ಸ್ಮಿತ್ಸ್ ಸೊಸೈಟಿಯ ನೂತನ ಕಟ್ಟಡಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಪಾಲ್ಕೆ ಬಾಬುರಾಯ ಆಚಾರ್ಯರು 1964ರಲ್ಲಿ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿ ಸಮಾಜದ ಜನರಿಗೆ ಆರ್ಥಿಕವಾಗಿ ಬಲ ನೀಡಿದ್ದಾರೆ. ಇಂದು ಸೊಸೈಟಿ ಮಾದರಿಯಾಗಿ ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು. ಸೊಸೈಟಿ ಉತ್ತಮ ವ್ಯವಹಾರದ ಜತೆಗೆ ಸಮಾಜಮುಖಿ ಕಾರ್ಯಗಳಿಂದಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಇರುವ 18 ಶಾಖೆಗಳು ಮುಂದೆ 180 ಆಗಲಿ ಎಂದು ಶುಭ ಹಾರೈಸಿದರು.
ಆಶೀರ್ವಚನ ನೀಡಿದ ಅರಕಲಗೂಡು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಸತ್ ಸಂಕಲ್ಪದಿಂದ ಸಂಸ್ಥೆಯನ್ನು ಆರಂಭ ಮಾಡಿದಾಗ ಅದರಿಂದ ನಾಡಿಗೆ ಸೇವೆ ದೊರೆಯುತ್ತದೆ. ಅದರಂತೆ ಪಾಲ್ಕೆ ಬಾಬುರಾಯ ಅಚಾರ್ಯ ಅವರ ಸತ್ ಸಂಕಲ್ಪ, ಸಹೃದಯತೆಯಿಂದಾಗಿ ಸಮಾಜಕ್ಕೆ ಪ್ರಯೋಜನವಾಗಿದೆ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಸಹಕಾರ ಕರಾವಳಿಯ ಸಹಜ ಗುಣ. ಇಲ್ಲಿ ಹಲವು ಸಹಕಾರಿ ಸಂಸ್ಥೆಗಳು ಮಾದರಿಯಾಗಿದ್ದು ಇದರಲ್ಲಿ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಕೂಡ ಒಂದು ಎಂದು ಹೇಳಿದರು.
ಪಾಲ್ಕೆ ಬಾಬುರಾಯ ಆಚಾರ್ಯ ಅವರ ಪುತ್ಥಳಿ ಅನಾವುಣಗೊಳಿಸಿದ ಅಯೋಧ್ಯಾ ಶ್ರೀ ರಾಮಲಲ್ಲಾ ವಿಗ್ರಹದ ನಿರ್ಮಾತೃ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಮಾತನಾಡಿ, ಬ್ಯಾಂಕುಗಳಿಗಿಂತ ಸಹಕಾರಿ ಸಂಸ್ಥೆಗಳು ಜನರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ನನ್ನ ಮೊದಲ ಕೆತ್ತನೆಗೆ ಮಾರ್ಬಲ್ ಖರೀದಿಸಲು ಸಹಕಾರಿ ಸಂಸ್ಥೆಯೇ ನೆರವಾಗಿತ್ತು ಎಂದು ಹೇಳಿದರು.
ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ ಶುಭ ಹಾರೈಸಿದರು. ಎಸ್.ಕೆ ಗೋಲ್ಡ್ ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಜ್ಯುವೆಲ್ಲರ್ಸ್ ನ ಧನಂಜಯ ಪಾಲ್ಕೆ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ದ.ಕ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮನಪಾ ಮಾಜಿ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ವಂದಿಸಿದರು. ಎನ್.ಆರ್. ದಾಮೋದರ ಆಚಾರ್ಯ, ವಾರುಣಿ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಎ.ಆನಂದ ಆಚಾರ್ಯ ವಂದಿಸಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಹಾಯಧನ ವಿತರಿಸಲಾಯಿತು.

