ಕೊಪ್ಪಳ: ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್‌ನ ಪ್ರಥಮ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಈಗಲೂ ಜಿಲ್ಲಾಧ್ಯಕ್ಷರಾಗಿರುವ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಕೊಪ್ಪಳದ ಸಹಕಾರಿ ಸಾಧಕ ಶೇಖರ ಗೌಡ ಮಾಲಿಪಾಟೀಲ ಅವರಿಗೆ ಈ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಗುರುವಾರ ಸಂಜೆ ರಾಜ್ಯ ಸರ್ಕಾರ ಪ್ರಕಟಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಶೇಖರ ಗೌಡ ಮಾಲಿ ಪಾಟೀಲರಿಗೆ ಪ್ರಶಸ್ತಿ ಘೋಷಣೆಯಾಗಿದ್ದು ಸಹಕಾರಿ ಕ್ಷೇತ್ರದಲ್ಲಿ ಈ ಬಾರಿಯೂ ಒಬ್ಬರನ್ನು ಮಾತ್ರ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
1997ರಲ್ಲಿ ಜೆ.ಹೆಚ್ ಪಟೇಲ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಚನೆಯಾದ ಕೊಪ್ಪಳ ಜಿಲ್ಲೆಗೆ ಮೊದಲ ಸಲ ಜಿಲ್ಲಾ ಸಹಕಾರಿ ಯೂನಿಯನ್ ರಚನೆಯಾದಾಗ ಮಾಲಿ ಪಾಟೀಲರು ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೂಲತಃ ಕುಷ್ಟಗಿ ತಾಲೂಕಿನ ಸಣ್ಣ ಹಳ್ಳಿಯವರಾದ ಶೇಖರ ಗೌಡರು, 1997ರಿಂದ 2025ರ ತನಕವೂ ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ, ಸಾಹಿತ್ಯ, ಸಹಕಾರ ಇತ್ಯಾದಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸದಾ ಕ್ರಿಯಾಶೀಲರಾಗಿ ಕನ್ನಡ ನಾಡು -ನುಡಿಗೆ ತಮ್ಮನ್ನು ಅರ್ಪಿಸಿಕೊಂಡು ಕೆಲಸ ಮಾಡುತ್ತಿರುವ ಶೇಖರ ಗೌಡ ಮಾಲಿಪಾಟೀಲರು, ರಾಜ್ಯ, ರಾಷ್ಟ್ರಮಟ್ಟದ ಸಹಕಾರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕುಷ್ಟಗಿ ತಾಲೂಕಿನ ಟಿಎಪಿಎಂಎಸ್, ಮಾರಾಟ ಸಮಿತಿಗೆ ಐದನೇ ಬಾರಿ ಅಧ್ಯಕ್ಷರಾಗಿದ್ದು, ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್‌ಗೆ ಆರನೇ ಬಾರಿ ಅಧ್ಯಕ್ಷರಾಗಿದ್ದಾರೆ.
ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್‌ಗೆ ಜಿಲ್ಲಾ ಕೇಂದ್ರದಲ್ಲಿ ನಿವೇಶನ ಒದಗಿಸಿಕೊಟ್ಟು ಅದರ ಕಟ್ಟಡದ ಕೆಲಸವನ್ನು ಪೂರ್ಣಗೊಳಿಸಿದ್ದಲ್ಲದೆ, ನಿತ್ಯ ನಿರಂತರವಾಗಿ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು, ತರಬೇತಿ ಶಿಬಿರಗಳ ಮೂಲಕ ಜನರಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಒಲವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಹಕಾರ ಕ್ಷೇತ್ರವಲ್ಲದೆ ನಾಡು ನುಡಿಗೆ ಸಂಬಂಧಿಸಿದ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





