ಬ್ಯಾಂಕ್‌ಗಳ ಮೆಗಾ ವಿಲೀನಕ್ಕೆ ಇನ್ನೊಂದು ಸುತ್ತಿನ ಸಿದ್ಧತೆ, ಮರೆಯಾಗಲಿವೆಯೇ ಹಲವು ಬ್ಯಾಂಕುಗಳು?
ನವದೆಹಲಿ: ಸಾರ್ವಜನಿಕ ವಲಯದ ಹಲವು ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ವಿಲೀನಗೊಂಡು ಇನ್ನೂ ಹತ್ತು ವರ್ಷಗಳು ಸಂದಿಲ್ಲ, ಅಷ್ಟರಲ್ಲೇ ಮತ್ತೊಂದು ಸುತ್ತಿನ ಬ್ಯಾಂಕುಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಂದು ಹಂತದ ದೊಡ್ಡ ಪ್ರಮಾಣದ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಒಂದು ವೇಳೆ ಇದು ಕಾರ್ಯಗತಗೊಂಡರೆ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, 2027ರೊಳಗೆ ಈ ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಗುರಿ ಇದೆ ಎನ್ನಲಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕಡಿಮೆ ಸಂಖ್ಯೆಯ, ಆದರೆ ಆರ್ಥಿಕವಾಗಿ ಬಲಿಷ್ಠವಾಗಿರುವ ಬ್ಯಾಂಕ್‌ಗಳನ್ನು ರಚಿಸಿ, ದೇಶದ ಮುಂದಿನ ಹಂತದ ಸಾಲ ವಿಸ್ತರಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಬೆಂಬಲ ನೀಡುವುದು ಈ ವಿಲೀನದ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಮೂಲಗಳ ಪ್ರಕಾರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ), ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ)ವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ (ಎಸ್‌ಬಿಐ) ದೈತ್ಯ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಸಿದ್ಧವಾಗಿದೆ.
ಈ ವಿಲೀನ ಪ್ರಸ್ತಾವನೆಯ ಕುರಿತ ಅಧಿಕೃತ ಚರ್ಚೆಯ ದಾಖಲೆಯನ್ನು (ರೆಕಾರ್ಡ್ ಆಫ್ ಡಿಸ್ಕಷನ್) ಮೊದಲು ಸಂಪುಟ ಸಭೆಯಲ್ಲಿ ಚರ್ಚಿಸಿ, ನಂತರ ಪ್ರಧಾನಮಂತ್ರಿಯವರ ಕಚೇರಿಗೆ (ಪಿಎಂಒ) ಪರಿಶೀಲನೆಗೆ ಕಳುಹಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ಬ್ಯಾಂಕ್‌ಗಳ ಅಭಿಪ್ರಾಯ ಪಡೆದು, ಆಂತರಿಕವಾಗಿ ಒಮ್ಮತ ಮೂಡಿದ ನಂತರವಷ್ಟೇ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.


ಈ ಹಿಂದೆ 2017ರಿಂದ 2020ರ ನಡುವೆ ಕೇಂದ್ರ ಸರ್ಕಾರ 10 ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ನಾಲ್ಕು ದೊಡ್ಡ ಬ್ಯಾಂಕ್‌ಗಳಾಗಿ ವಿಲೀನಗೊಳಿಸಿತ್ತು. ಇದರಿಂದಾಗಿ ದೇಶದಲ್ಲಿದ್ದ 27 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಇಳಿಕೆ ಕಂಡಿತ್ತು. ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದ್ದರೆ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಯಲ್ಲಿ ವಿಲೀನ ಮಾಡಲಾಗಿತ್ತು.
ನೀತಿ ಆಯೋಗದ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಬ್ಯಾಂಕ್ ವಿಲೀನಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. ಎಸ್‌ಬಿಐ, ಪಿಎನ್‌ಬಿ, ಬಿಒಬಿ ಮತ್ತು ಕೆನರಾ ಬ್ಯಾಂಕ್‌ನಂತಹ ಕೆಲವೇ ಕೆಲವು ದೊಡ್ಡ ಸರ್ಕಾರಿ ಬ್ಯಾಂಕ್‌ಗಳನ್ನು ಮಾತ್ರ ಉಳಿಸಿಕೊಂಡು, ಉಳಿದ ಸಣ್ಣ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಅಥವಾ ವಿಲೀನಗೊಳಿಸಲು ನೀತಿ ಆಯೋಗ ಈ ಹಿಂದೆ ಶಿಫಾರಸು ಮಾಡಿತ್ತು.

