ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಂಪೂರ್ಣ ಬೆಂಬಲ, ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸಹಕಾರಿಗಳು ಬದ್ಧ: ಡಾ.ಎಂ.ಎನ್.ರಾಜೇಂದ್ರ ಕುಮಾರ್
ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧ: ಡಾ.ಎಂ ಮೋಹನ ಆಳ್ವ
ಭಕ್ತರು, ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ, ಅಭಿಮಾನದಿಂದ ಹೆಚ್ಚಿನ ಉತ್ಸಾಹ: ಡಾ.ಡಿ.ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಹಲವು ರೀತಿಯ ಷಡ್ಯಂತ್ರಗಳನ್ನು ವಿರೋಧಿಸಿ ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಜಾಗೃತಿ ಯಾತ್ರೆ ಕೈಗೊಂಡು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶ ಸಾರಿದರು.
https://chat.whatsapp.com/EbVKVnWB6rlHT1mWtsgbch
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಸಹಕಾರಿಗಳು ಜೊತೆ ಸೇರಿ ಹಮ್ಮಿಕೊಂಡ ಧರ್ಮ ಜಾಗೃತಿ ಯಾತ್ರೆಯು ಆಯಾ ಕೇಂದ್ರಗಳಿಂದ ಸಾವಿರಾರು ವಾಹನಗಳ ಮೂಲಕ ಮಧ್ಯಾಹ್ನ 12 ಗಂಟೆಗೆ ಉಜಿರೆ ತಲುಪಿತು. ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಧರ್ಮ ಜಾಗೃತಿ ಯಾತ್ರೆ ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿದರು. ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರಗಳ ವಿರುದ್ಧ ಸಂದೇಶ ನೀಡಲು, ಧರ್ಮ ಸಂರಕ್ಷಣೆಗಾಗಿ ತಾವು ಬದ್ಧ ಎಂದು ಸಹಕಾರಿಗಳು ಒಕ್ಕೊರಲ ಉದ್ಘೋಷ ಹಾಕಿದರು.


ಮೆರವಣಿಗೆ ಸಮಾಪನಗೊಂಡ ಬಳಿಕ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಧರ್ಮಜಾಗೃತಿ ಸಮಾವೇಶದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಎಂಬುದು ಈ ನಾಡಿಗಷ್ಟೇ ಅಲ್ಲ, ರಾಜ್ಯ, ದೇಶ, ವಿದೇಶಗಳಲ್ಲೂ ಪವಿತ್ರ ಕ್ಷೇತ್ರವೆಂದೇ ಹೆಸರು ಪಡೆದಿದೆ. ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಹಾಗೂ ವ್ಯಾಪಕ ಸುಳ್ಳು ವದಂತಿಯನ್ನು ನಾವು ಖಂಡಿಸುತ್ತೇವೆ. ಜಾತಿ-ಮತ, ಪಕ್ಷಭೇದ ಮರೆತು ಸರ್ವ ಸಹಕಾರಿಗಳೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂಪೂರ್ಣ ಬೆಂಬಲಕ್ಕೆ ಇದ್ದೇವೆ. ಸಹಕಾರಿಗಳು ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಆಗಿದ್ದು, ಧರ್ಮಸ್ಥಳದ ಜೊತೆ ಸದಾ ಇರುತ್ತೇವೆ ಎಂದು ಹೇಳಿದರು.
ಎಲ್ಲರೂ ಡಾ.ವೀರೇಂದ್ರ ಹೆಗ್ಗಡೆಯವರ ಜೊತೆಗಿದ್ದು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಧರ್ಮಸ್ಥಳ ಕ್ಷೇತ್ರದ ರಕ್ಷಣೆ ಎಲ್ಲಾ ಭಕ್ತರು ಹಾಗೂ ಅಭಿಮಾನಿಗಳ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಇಂತಹ ಪವಿತ್ರ ಸೇವೆಯಿಂದ ಭಕ್ತರ ಮನಸ್ಸಿಗೂ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿದ್ದೇವೆ. “ಸತ್ಯಮೇವ ಜಯತೇ” ಎಂಬ ವಾಕ್ಯದಂತೆ ಸತ್ಯಕ್ಕೆ ಸದಾಕಾಲವೂ ಜಯ ಇದ್ದೇ ಇರುತ್ತದೆ. ಸತ್ಯದ ಜೊತೆಗೆ ನಾವಿದ್ದೇವೆ ಎಂದು ಹೇಳಿದರು. ಡಾ.ಹೆಗ್ಗಡೆಯವರ ನೇತೃತ್ವದಲ್ಲಿ ಹಲವು ಸಮಾಜಮುಖಿ ಸೇವಾಕಾರ್ಯಗಳ ಮೂಲಕ ಧರ್ಮಸ್ಥಳ ಇಂದು ಇಡೀ ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ ಎಂದೂ ಅವರು ಶ್ಲಾಘಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ ಮತ್ತು ಅಭಿಮಾನ ತಮಗೆ ಹೆಚ್ಚಿನ ಉತ್ಸಾಹ ಮತ್ತು ಭರವಸೆ ಮೂಡಿಸಿದೆ. ಸಹಕಾರಿ ಕ್ಷೇತ್ರವನ್ನು ತಮ್ಮ ಮಾರ್ಗದರ್ಶನ ಮತ್ತು ನಾಯಕತ್ವದೊಂದಿಗೆ ಜನಪ್ರಿಯಗೊಳಿಸಿರುವ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಸೇವೆ, ಸಾಧನೆ ಎಲ್ಲರಿಗೂ ಮಾದರಿ. ಸಮಾಜಕ್ಕೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ದಕ್ಷ, ಪ್ರಾಮಾಣಿಕ ಹಾಗೂ ನಿಷ್ವಾರ್ಥ ನಾಯಕರ ಅಗತ್ಯವಿದೆ ಎಂದರು.



ತಮ್ಮ ಸಂಸದರ ನಿಧಿಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ ನೀಡಲಾಗಿದೆ. ಅಲ್ಲದೆ ಧರ್ಮಸ್ಥಳದಿಂದ ಎಲ್ಲಾ ಸಹಕಾರಿ ಸಂಘಗಳಿಗೂ ಸಕಾಲಿಕ ನೆರವು, ಪ್ರೋತ್ಸಾಹ ನೀಡಲಾಗುತ್ತದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅಪಪ್ರಚಾರ ಹಾಗೂ ಸುಳ್ಳು ವದಂತಿ ಪ್ರಸಾರದಿಂದ ತಮಗೆ ಅಪಾರ ನೋವು ಉಂಟಾಗಿದೆ. ಆದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಚಂದ್ರನಾಥ ಸ್ವಾಮಿ ಇಬ್ಬರೂ ಶಾಂತ ಸ್ವಭಾವದವರಾಗಿದ್ದು, ದೇವರ ಅನುಗ್ರಹ, ಧರ್ಮದೇವತೆಗಳು ಮತ್ತು ಅಣ್ಣಪ್ಪ ಸ್ವಾಮಿಯ ಅಭಯದಿಂದ ನೋವು ಮರೆಯಲು ಸಾಧ್ಯವಾಗಿದೆ. ಅಪವಾದ, ಅಪಪ್ರಚಾರ ಮಾಡಿದವರಿಗೂ ಅಭಿನಂದನೆ ಹೇಳಿದ ಹೆಗ್ಗಡೆಯವರು ಅವರಿಂದಾಗಿ ಪ್ರತಿದಿನ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಬಂದು ತಮ್ಮ ಪ್ರೀತಿ-ವಿಶ್ವಾಸ, ಗೌರವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.

