ನಿರಂತರ “ಎ” ಗ್ರೇಡ್ ಮಾನ್ಯತೆ, 1.70 ಕೋಟಿ ರೂ.ಗಳ ನಿವ್ವಳ ಲಾಭ
ಮಂಗಳೂರು: ನಗರದ ಪ್ರತಿಷ್ಠಿತ, ಗ್ರಾಹಕ ಸ್ನೇಹಿ ಸೊಸೈಟಿ ಎಂದೇ ಜನಾನುರಾಗಿಯಾಗಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ 2024-25ನೇ ಆರ್ಥಿಕ ವರ್ಷದ ಸರ್ವಸದಸ್ಯರ ಮಹಾಸಭೆ ಭಾನುವಾರ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಎಂ.ಎಸ್.ಗುರುರಾಜ್, ಕಳೆದ ವರ್ಷದ ವರದಿ ಮಂಡಿಸುತ್ತ, ಶ್ರೀಶಾ ಸೌಹಾರ್ದ ಸೊಸೈಟಿಯು ತನ್ನ ವಸ್ತುನಿಷ್ಠ ಮತ್ತು ವೃತ್ತಿಪರತೆ ಆಡಳಿತದ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತರೋತ್ತರ ಅಭಿವೃದ್ಧಿ ಕಾಣುತ್ತಿದೆ. 2024 -25ನೇ ಸಾಲಿನಲ್ಲಿ 1.70 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿ ದಾಖಲೆ ನಿರ್ಮಿಸಿ ಸದಸ್ಯರಿಗೆ ಈ ವರ್ಷವೂ ಶೇಕಡಾ.25 ಡಿವಿಡೆಂಡ್ ನೀಡಿದೆ. ಸಾಲ ವಸೂಲಾತಿಯು 98.3% ಇದ್ದು, ಇದು ಹೆಚ್ಚಿನ ಲಾಭ ಗಳಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಠೇವಣಿ ಸಂಗ್ರಹದಲ್ಲಿ 25% ಹೆಚ್ಚಳದೊಂದಿಗೆ 41 ಕೋಟಿಗೆ ತಲುಪಿದೆ. ಸಾಲ ನೀಡಿಕೆಯಲ್ಲಿ 23% ಹೆಚ್ಚಳದೊಂದಿಗೆ 32 ಕೋಟಿಗೆ ತಲುಪಿದೆ. ಸೊಸೈಟಿಯ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಸಾಧನೆಯೊಂದಿಗೆ ಈ ವರ್ಷವೂ “ಎ” ಗ್ರೇಡ್ ಮಾನ್ಯತೆ ಪಡೆದಿದೆ. ಇದಕ್ಕೆ ಶಿಸ್ತುಬದ್ಧ ಆಡಳಿತ ಮಂಡಳಿ ಸಹಕಾರ ಹಾಗೂ ಸಿಬ್ಬಂದಿ ವರ್ಗದ ನಿರಂತರ ಪರಿಶ್ರಮವೇ ಕಾರಣ ಎಂದು ಹೇಳಿದರು.


ಗ್ರಾಹಕ ಸ್ನೇಹಿಯಾಗಿ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜಕ್ಕೆ ಏನಾದರೂ ಹೊಸತನ್ನು ನೀಡಬೇಕೆಂಬ ಆಶಯದೊಂದಿಗೆ ಶ್ರೀಶಾ ಸೊಸೈಟಿ 2019ರಲ್ಲಿ ಆರಂಭಗೊಂಡಿತು. ಅಂದಿನಿಂದ ಇಂದಿನವರೆಗೂ ಈ ಮೂಲ ಆಶಯ ಮರೆಯದೆ ನಿರಂತರವಾಗಿ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಅದರಲ್ಲೂ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಇದು ಹೀಗೆಯೇ ಮುಂದುವರಿಯಲಿದೆ ಎಂದು ಎಂ.ಎಸ್ ಗುರುರಾಜ್ ಹೇಳಿದರು.
2024-25ರ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಶೇ.99.3% ದೊಂದಿಗೆ 625ಕ್ಕೆ 621 ಅಂಕಗಳನ್ನು ಪಡೆದು ರಾಜ್ಯಕ್ಕೇ ಐದನೇ rank ಪಡೆದ ಶ್ರೀಲಕ್ಷ್ಮೀ ಭಟ್ ಅವರನ್ನು ಗೌರವಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷ ಉದಯ ವಿ.ಶಾಸ್ತ್ರಿ ಸ್ವಾಗತಿಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ ಆಯ-ವ್ಯಯದ ವಿವರಗಳನ್ನು ಮಂಡಿಸಿದರು. ನಿರ್ದೇಶಕ ಪ್ರಸನ್ನ ಕುಮಾರ ವಂದಿಸಿದರು. ವಿದ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಕಾಯಕಯೋಗಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಸನ್ಮಾನ
ಸಮಾಜಸೇವೆಯೇ ಪರಮ ಧರ್ಮವೆಂದು ನಂಬಿ ಅದನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬಂದಿರುವ ಕಾಯಕಯೋಗಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಶ್ರೀಶಾ ಸೊಸೈಟಿಯ ಸಮಸ್ತ ಬಳಗದ ಪರವಾಗಿ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪುನರೂರು ಅವರು, ಸಮಾಜದಿಂದ ಗಳಿಸಿದ ಸಂಪತ್ತನ್ನು ಮರಳಿ ಸಮಾಜಕ್ಕೆ ನೀಡಿದ್ದೇನೆ. ಜೀವನದಲ್ಲಿ ಶಿಸ್ತು, ಪಾರದರ್ಶಕತೆ, ಪ್ರಾಮಾಣಿಕತೆ ಬಹು ಮುಖ್ಯ. ನಿಷ್ಠುರತೆ ಮಿತ್ರರನ್ನು ಶತ್ರುವನ್ನಾಗಿಸಿದರೂ ಜೀವನದಲ್ಲಿ ಅದನ್ನು ಬಿಡಬಾರದು. ಶ್ರೀಶಾ ಸೊಸೈಟಿಯ ಸೇವಾ ಕಾರ್ಯಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಇತರೆ ಸಂಸ್ಥೆಗಳು ಇದನ್ನು ಅನುಸರಿಸಿದರೆ ಸಮಾಜದ ಅನೇಕ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಬಹುದು ಎಂದು ಹೇಳಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










