ಶೇ. 5.5 ಮುಂದುವರಿಕೆ: ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಪ್ರಕಟಣೆ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ದ್ವೈಮಾಸಿಕ ಆರ್ಥಿಕ ನೀತಿಯನ್ನು ಘೋಷಿಸಿದ್ದು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಶೇ.5.5 ಅನ್ನೇ ಮುಂದುವರಿಸಲಾಗಿದೆ.
https://chat.whatsapp.com/EbVKVnWB6rlHT1mWtsgbch
ಆರು ಸದಸ್ಯರ ಹಣಕಾಸು ಸಮಿತಿ ಆರ್ಥಿಕ ವರ್ಷ 2026ರ ಮೂರನೇ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದೆ. ಭಾರತದ ಆಮದುಗಳ ಮೇಲೆ ಶೇ.25ರಷ್ಟು ಅಮೆರಿಕಾದ ಸುಂಕದ ನಿರ್ಧಾರ, ಆಗಸ್ಟ್ ಏಳರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ರಷ್ಯಾ ಜೊತೆಗಿನ ವ್ಯವಹಾರ ಮುಂದುವರಿಸಿಕೊಂಡು ಹೋಗುವ ಭಾರತದ ನಿರ್ಧಾರದಿಂದಾಗಿ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರೆಪೋ ದರ ಶೇ. 5.5ರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಟ್ರಂಪ್ ಹೇರಿದ ಸುಂಕ ಮತ್ತು ಹಣದುಬ್ಬರದ ಕಾರಣಗಳಿಂದ ರೆಪೋ ದರದಲ್ಲಿ ಬದಲಾವಣೆ ತರುವ ಮುನ್ಸೂಚನೆಯನ್ನು ಸಂಜಯ್ ಮಲ್ಹೋತ್ರಾ ನೀಡಿದ್ದರು. ಜೂನ್ ತಿಂಗಳಲ್ಲಿ ಐವತ್ತು ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಲಾಗಿತ್ತು. ಆದರೂ, ಈಗಿರುವ ರೆಪೋ ದರವನ್ನೇ ಮುಂದುವರಿಸುವ ಮಹತ್ವದ ನಿರ್ಧಾರಕ್ಕೆ ರಿಸರ್ವ್ ಬ್ಯಾಂಕ್ ಬಂದಿದೆ. 2025 – 26ನೇ ಸಾಲಿನ ಜಿಡಿಪಿ ಬೆಳವಣಿಗೆ ಶೇ.6.5 ಎಂದು ಅಂದಾಜಿಸಲಾಗಿದೆ. ನಮ್ಮ ಹಿಂದಿನ ಅಂದಾಜು, ಮೊದಲ ತ್ರೈಮಾಸಿಕದಲ್ಲಿ ಶೇ. 6.5, ಎರಡನೇ ತ್ರೈಮಾಸಿಕದಲ್ಲಿ ಶೇ.6.7 ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇ. 6.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 6.3 ಬೆಳವಣಿಗೆ ನಿರೀಕ್ಷಿಸಲಾಗಿದೆ. 2026-27ನೇ ಸಾಲಿಗೆ ಮೊದಲ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಶೇ.6.6ರಷ್ಟು ಅಂದಾಜಿಸಲಾಗಿದೆ ” ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ತಿಳಿಸಿದ್ದಾರೆ.
ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ನಡುವೆ ಸಮತೋಲನ ಕಾಪಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ. ಒಟ್ಟಾರೆಯಾಗಿ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ರೆಪೋ ದರವನ್ನು ಸ್ಥಿರವಾಗಿ ಉಳಿಸಿಕೊಳ್ಳಲಾಗಿದೆ. ರೆಪೋ ದರದಲ್ಲಿ ಬದಲಾವಣೆ ಆಗದ ಹಿನ್ನಲೆಯಲ್ಲಿ ಸ್ಥಿರ ಠೇವಣಿಯ ಮೇಲಿನ ಬಡ್ಡಿದರಗಳು ಹಾಗೆಯೇ ಮುಂದುವರಿಯುವ ಸಾಧ್ಯತೆಯಿದೆ. ಗೃಹಸಾಲದ ಮೇಲೂ ಹೆಚ್ಚು ಪರಿಣಾಮ ಬೀರದು. ಹೀಗಾಗಿ, ಇಎಂಐ ಕೂಡಾ ಸ್ಥಿರವಾಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

