ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನ ಗೌಡ ಅಭಿಪ್ರಾಯ
ಮಂಗಳೂರು: ಸೌಹಾರ್ದ ಸಹಕಾರಿ ಸಂಘಗಳು ರಾಜ್ಯಾದ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಪ್ರಗತಿಪಥದಲ್ಲಿ ಮುನೆನಡೆಯುತ್ತಿವೆ. ದೇಶದ ಪ್ರಗತಿಗೆ ಸಹಕಾರಿ ಸಂಘಗಳಿಂದ ಅಪಾರವಾದ ಕೊಡುಗೆ ಇದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನ ಗೌಡ ಅಭಿಪ್ರಾಯಪಟ್ಟರು.
https://chat.whatsapp.com/EbVKVnWB6rlHT1mWtsgbch
ಮಂಗಳೂರಿನ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಇದರ ವತಿಯಿಂದ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷದಂತೆ ಈ ಬಾರಿಯೂ ಸೌಹಾರ್ದ ಸಂಯುಕ್ತ ಸಹಕಾರಿಯ ಸಾಮಾನ್ಯ ಸಭೆ ನಡೆಸುವ ಮೊದಲು ರಾಜ್ಯಾದ್ಯಂತ ಎಲ್ಲ ವಿಭಾಗಗಳಲ್ಲಿ ಸಹಕಾರ ಕ್ಷೇತ್ರದ ಜ್ವಲಂತ ಸಮಸ್ಯೆಗಳು, ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಸೌಹಾರ್ದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಈ ಸಭೆ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ರತ್ನ ಎಸ್ ಆರ್ ಸತೀಶ್ಚಂದ್ರ ಮಾತನಾಡಿ, ಕೇಂದ್ರ ಸರ್ಕಾರ ಅನಾವರಣ ಮಾಡಿರುವ ಸಹಕಾರ ನೀತಿ -೨೦೨೫ರ ಬಗ್ಗೆ ಮಾಹಿತಿ ನೀಡಿ, ದೇಶದ ಜಿಡಿಪಿಗೆ ಸಹಕಾರ ಕ್ಷೇತ್ರದ ಕೊಡುಗೆಗಳನ್ನು ಹೆಚ್ಚಿಸಬೇಕಾದಲ್ಲಿ ಸೌಹಾರ್ದ ಸಹಕಾರಿಗಳ ಪಾತ್ರವನ್ನೂ ವಿಶ್ಲೇಷಿಸಿದರು.





ದ.ಕ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ದೇವಸ್ಯ ಮುಖ್ಯ ಅತಿಥಿಯಾಗಿ ಮಾತನಾಡಿ, ಸಹಕಾರಿ ವೃತ್ತಿ ಏಕವ್ಯಕ್ತಿಯಿಂದ ಆಗುವಂಥದ್ದಲ್ಲ. ಅದು ಸಾಮೂಹಿಕ ಪ್ರಕ್ರಿಯೆ. ಯಾವುದೇ ಕೆಲಸದಲ್ಲಿ ಸಾಮೂಹಿಕವಾಗಿ ಪಾಲ್ಗೊಂಡಾಗ ಮಾತ್ರ ಸಹಕಾರಿಯ ಕೆಲಸ ಸುಲಭವಾಗುತ್ತದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿ, ಸೌಹಾರ್ದ ಸಹಕಾರಿಗಳ ನಿರ್ದೇಶಕರು, ಅಧ್ಯಕ್ಷರು ಇಂಥ ಸಭೆಗಳಲ್ಲಿ ಭಾಗವಹಿಸಿ ಸೌಹಾರ್ದ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕ ಮಾತನಾಡಿದ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯು ಎಲ್ಲ ವಲಯಗಳಲ್ಲೂ ಈ ರೀತಿಯ ಸಭೆಗಳನ್ನು ಆಯೋಜಿಸುತ್ತಿದೆ. ಇಂಥ ತರಬೇತಿಗಳಲ್ಲಿ ಭಾಗವಹಿಸಿದಾಗ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರು, ಪದಾಧಿಕಾರಿಗಳಲ್ಲಿ ಜ್ಞಾನ ವೃದ್ಧಿಯಾಗುತ್ತದೆ. ಇದರಿಂದ ತಮ್ಮ ಕೆಲಸದ ಜಾಗಗಳಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೌಹಾರ್ದ ಸಹಕಾರಿ ಅಧಿಕಾರಿ ವಿಜಯ್ ಬಿ.ಎಸ್ ಸ್ವಾಗತಿಸಿದರು. ನಂದನ್ ಬಿ.ಎಸ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

