ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಶಿಬಿರದಲ್ಲಿ ಕೆ.ರವಿರಾಜ್ ಹೆಗ್ಡೆ ಹೇಳಿಕೆ
ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು ಹಾಗೂ ದ.ಕ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಉಪವಿಭಾಗದ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ‘ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಶಿಬಿರ’ ಮಂಗಳವಾರ ಪುತ್ತೂರು ಕೋಆಪರೇಟಿವ್ ಟೌನ್ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ತರಬೇತಿ ಉದ್ಘಾಟಿಸಿದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮಾತನಾಡಿ, ತರಬೇತಿ ಆಯೋಜನೆಯ ಬಗ್ಗೆ ಜಿಜ್ಞಾಸೆಯಿತ್ತು. ಆದರೆ ತರಬೇತಿಯ ಅವಶ್ಯಕತೆ ಕಳೆದ ಆಡಳಿತ ಮಂಡಳಿಯ ಚುನಾವಣೆಯ ಸಂದರ್ಭದಲ್ಲಿ ನಮಗೆ ಅರಿವಾಗಿದೆ. ಹೀಗಾಗಿ ತರಬೇತಿ ಬಹಳ ಮುಖ್ಯ. ಇಂತಹ ತರಬೇತಿಯಲ್ಲಿ ಭಾಗವಹಿಸಿದಾಗ ಕಾಯ್ದೆಗಳ ತಿದ್ದುಪಡಿಗಳ ಬಗ್ಗೆ ಮಾಹಿತಿ ಪಡೆದು ಕಾರ್ಯದಲ್ಲಿ ನೈಪುಣ್ಯತೆ ಸಾಧಿಸುವುದರ ಜೊತೆಗೆ ಸಂಸ್ಥೆಯ ಬೆಳವಣಿಗೆಯೂ ಸಾಧ್ಯವಾಗುತ್ತದೆ. ಸಹಕಾರಿ ಸಂಘಗಳನ್ನು ನಡೆಸುವ ಹೊಣೆ ಕಾರ್ಯದರ್ಶಿಗಳಲ್ಲಿದ್ದು ತರಬೇತಿಗಳಲ್ಲಿ ಭಾಗವಹಿಸಿ, ಸಹಕಾರಿ ಕಾಯ್ದೆಗಳ ಸರಿಯಾದ ಮಾಹಿತಿ ಪಡೆದುಕೊಂಡು ಸಂಘಗಳನ್ನು ಮುನ್ನಡೆಸಬೇಕು. ಸಂಘದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.



ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ಕಾಯ್ದೆಯಲ್ಲಿ ಆಗುವಂತಹ ತಿದ್ದುಪಡಿಗಳನ್ನು ತಿಳಿದುಕೊಳ್ಳಲು ಇಂತಹ ತರಬೇತಿ ಅವಶ್ಯ. ಹಾಲು ಉತ್ಪಾದಕರ ಸಹಕಾರ ಸಂಘಗಳು ಜಿಲ್ಲಾ ಸಹಕಾರಿ ಯೂನಿಯನ್‌ನಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು. ಮುಂದೆ ಏನೇ ಸಮಸ್ಯೆಗಳು ಎದುರಾದಾಗ ಜಿಲ್ಲಾ ಸಹಕಾರಿ ಯೂನಿಯನ್ ಸಹಕಾರ ನೀಡಲಿದೆ. ಹಾಲಿನ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಒಂದು ಕುಟುಂಬಕ್ಕೆ ಎರಡು ಹಸುಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸುವ ಬಗ್ಗೆ ಮಾರ್ಪಾಡು ಮಾಡಿ ಮುಂದಿನ ಮಹಾಸಭೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ದ.ಕ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಎಸ್.ಬಿ ಜಯರಾಮ ರೈ ಮಾತನಾಡಿ, ದ.ಕ ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 751 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 215 ಮಹಿಳಾ ಸಹಕಾರ ಸಂಘಗಳಿವೆ. ಪ್ರಸ್ತುತ ದಿನಗಳಲ್ಲಿ ಒಕ್ಕೂಟಕ್ಕೆ ಬರುವ ಹಾಲಿನಲ್ಲಿ 50 ಸಾವಿರ ಲೀಟರ್ ಏರಿಕೆಯಾಗಿದೆ. ಪುತ್ತೂರಿನಲ್ಲಿ ಉತ್ತಮ ಜಾಗದ ಸೌಲಭ್ಯವಿದ್ದು ಒಕ್ಕೂಟದ ವತಿಯಿಂದ ಉಡುಪಿಯ ಮಾದರಿಯಲ್ಲಿ ಪುತ್ತೂರಿನಲ್ಲಿಯೂ ಯೂನಿಟ್ ಸ್ಥಾಪಿಸುವಂತೆ ವಿನಂತಿಸಿದರು.
ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ವಿಷ್ಣು ಭಟ್, ಮಂಜುನಾಥ ಎನ್.ಎಸ್, ಸವಿತಾ ಎನ್.ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎನ್ ರಘು, ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರು ಡಾ.ಸತೀಶ್ ರಾವ್ ಹಾಗೂ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೆ.ಸುಬ್ಬರಾವ್ ಉಪಸ್ಥಿತರಿದ್ದರು.
ಸನ್ಮಾನ, ಪ್ರಮಾಣ ಪತ್ರ ವಿತರಣೆ:
ದ.ಕ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಪುತ್ತೂರಿಗೆ ಆಗಮಿಸಿದ ರವಿರಾಜ ಹೆಗ್ಡೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನಲ್ಲಿ ನೋಂದಾವಣೆಗೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಪ್ರಮಾಣಪತ್ರವನ್ನು ಸಾಂಕೇತಿಕವಾಗಿ ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯವರಿಗೆ ವಿತರಿಸಲಾಯಿತು.


ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ ಸ್ವಾಗತಿಸಿ, ವಂದಿಸಿದರು. ರಾಜೇಶ್ ಕಾಮತ್, ಆದಿತ್ಯ, ಮಾಲತಿ, ಶ್ರೀದೇವಿ, ನಾಗಪ್ರಸಾದ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎರಡು ಹಂತದ ತರಬೇತಿನ ಶಿಬಿರದಲ್ಲಿ ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ ಮತ್ತು ಒಕ್ಕೂಟದ ಯೋಜನೆಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಸಹಕಾರಿ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೆ. ಸುಬ್ಬರಾವ್ ಲೆಕ್ಕಪತ್ರಗಳ ನಿರ್ವಹಣೆ, ಸಂಘದಲ್ಲಿ ಇರಬೇಕಾದ ಪ್ರಮುಖ ದಾಖಲೆ ಪುಸ್ತಕಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

