ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅಧಿಕೃತ ನೋಂದಣಿ
ಕೇಂದ್ರ ಸಹಕಾರ ಸಚಿವಾಲಯದ ಕ್ರಾಂತಿಕಾರಿ ಹೆಜ್ಜೆ
ಟ್ಯಾಕ್ಸಿ ಚಾಲಕರ ಸಬಲೀಕರಣ, ಸಹಕಾರಿ ಉದ್ಯಮಶೀಲತೆಯ ಉತ್ತೇಜನ ಗುರಿ
ನವದೆಹಲಿ: ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯವಾಕ್ಯದೊಂದಿಗೆ ಮುಂದಡಿಯಿಡುತ್ತಿರುವ ಕೇಂದ್ರ ಸಹಕಾರ ಸಚಿವಾಲಯವು ತೆಗೆದುಕೊಂಡಿರುವ ಕ್ರಾಂತಿಕಾರಿ ಹೆಜ್ಜೆಯೊಂದರಲ್ಲಿ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯನ್ನುಅಧಿಕೃತವಾಗಿ ನೋಂದಣಿ ಮಾಡಲಾಗಿದೆ.
ಟ್ಯಾಕ್ಸಿ ಚಾಲಕರನ್ನು ಸಬಲೀಕರಣಗೊಳಿಸುವ ಮತ್ತು ಸಹಕಾರಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಚಿವಾಲಯವು, ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಅನ್ನು ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯಡಿ ಅಧಿಕೃತವಾಗಿ ನೋಂದಣಿ ಮಾಡಿದೆ. ಇದು ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕಾರ್ಯವ್ಯಾಪ್ತಿಯನ್ನು ಹೊಂದಿದೆ.
https://chat.whatsapp.com/EbVKVnWB6rlHT1mWtsgbch
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC)ದಿಂದ ಉತ್ತೇಜಿಸಲ್ಪಟ್ಟ ಸಹಕಾರ್ ಟ್ಯಾಕ್ಸಿ, ಭಾರತದ ಏಳು ಪ್ರಮುಖ ಸಹಕಾರಿ ಸಂಸ್ಥೆಗಳಾದ ಅಮುಲ್, ನಾಫೆಡ್, ನಬಾರ್ಡ್, ಇಫ್ಕೋ, ಕ್ರಿಭ್ಕೋ, ಎನ್‌ಡಿಡಿಬಿ ಮತ್ತು ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (NCEL) ಗಳಿಂದ ಬೆಂಬಲ ಪಡೆಯಲಿದೆ. ಸಹಕಾರಿ ಟ್ಯಾಕ್ಸಿ ವ್ಯವಸ್ಥೆಯು ಉಬರ್ ಮತ್ತು ಓಲಾದಂತಹ ವೇದಿಕೆಗಳ ತಾಂತ್ರಿಕ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ನೋಂದಾಯಿಸಲ್ಪಟ್ಟ ಸೊಸೈಟಿಯ ಸದಸ್ಯರ ಒಡೆತನದಲ್ಲಿರಲಿದೆ. ಅಂದರೆ ಟ್ಯಾಕ್ಸಿ ಚಾಲಕರೇ ಮಾಲೀಕರಾಗಿರುತ್ತಾರೆ. ಸಾರಿಗೆ ವಲಯದಲ್ಲಿ ಸುಸ್ಥಿರ, ಮತ್ತು ಪ್ರಜಾಪ್ರಭುತ್ವ ಮಾದರಿ ನಿರ್ಮಿಸಲು ಈ ಸಂಸ್ಥೆಗಳು “ಸಹಕಾರ ಸಂಸ್ಥೆಗಳ ನಡುವಿನ ಸಹಕಾರ” ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.

ಮೇಲ್ವಿಚಾರಣೆ ಮಾಡಲು ಮಧ್ಯಂತರ ಮಂಡಳಿ
ಸಹಕಾರ್ ಟ್ಯಾಕ್ಸಿ ವ್ಯವಸ್ಥೆಯ ಆರಂಭಿಕ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮಧ್ಯಂತರ ಮಂಡಳಿಯೊಂದನ್ನು ರೂಪಿಸಲಾಗಿದೆ. ಎನ್‌ಸಿಡಿಸಿಯ ಉಪ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಗುಪ್ತಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ವಿ.ಶ್ರೀಧರ್ (ಎನ್‌ಡಿಡಿಬಿ), ತರುಣ್ ಹಂಡಾ (ಎನ್‌ಎಎಫ್‌ಇಡಿ), ನವೀನ್ ಕುಮಾರ್ (ನಬಾರ್ಡ್), ಸಂತೋಷ್ ಶುಕ್ಲಾ (ಇಫ್ಕೊ), ಮತ್ತು ಎಲ್.ಪಿ. ಗಾಡ್ವಿನ್ (ಕೆಆರ್‌ಐಬಿಎಚ್‌ಸಿಒ) ಇವರು ಆಡಳಿತ ಮಂಡಳಿಯಲ್ಲಿ ಸೇರಿದ್ದಾರೆ.
ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯು 300 ಕೋಟಿ ರೂ.ಗಳ ಅಧಿಕೃತ ಷೇರು ಬಂಡವಾಳವನ್ನು ಹೊಂದಿದ್ದು, ಎಂಟು ಸಹಕಾರಿ ಸಂಸ್ಥೆಗಳು ಈಗಾಗಲೇ 80 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ. ಸಾಫ್ಟ್‌ವೇರ್ ಮತ್ತು ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿದ್ದು ಮುಂದಿನ ಆರು ತಿಂಗಳೊಳಗೆ ಸಹಕಾರ್ ಟ್ಯಾಕ್ಸಿಯ ಕಾರ್ಯಾರಂಭವನ್ನು ನಿರೀಕ್ಷಿಸಲಾಗಿದೆ.
ಅಮಿತ್ ಷಾ ಕನಸಿನ ಕೂಸು
ಸಹಕಾರ್ ಟ್ಯಾಕ್ಸಿಯ ಕಲ್ಪನೆಯನ್ನು ಮೊದಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಪ್ರಸ್ತಾಪಿಸಿದ್ದು, ದ್ವಿಚಕ್ರ ವಾಹನಗಳು, ರಿಕ್ಷಾಗಳು, ಟ್ಯಾಕ್ಸಿಗಳು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಒಂದೇ ವೇದಿಕೆಯಡಿ ನೋಂದಾಯಿಸಲು ಅನುವು ಮಾಡಿಕೊಡುವ ಸಹಕಾರಿ ಟ್ಯಾಕ್ಸಿ ಸೇವೆಯ ಅಗತ್ಯವನ್ನು ಪ್ರತಿಪಾದಿಸಿದರು. ಇದರಲ್ಲಿ ಮುಖ್ಯವಾಗಿ ಲಾಭವು ನೇರವಾಗಿ ಆಯಾ ವಾಹನಗಳ ಚಾಲಕರಿಗೆ ಹೋಗಲಿದ್ದು, ಅವರ ಆದಾಯ ಮತ್ತು ಜೀವನದ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅವರು ಮನಗಂಡು ಈ ಯೋಜನೆಯನ್ನು ಹರಿಯಬಿಟ್ಟರು. “ಸಹಕಾರ ಸೇ ಸಮೃದ್ಧಿ” ಎಂಬ ಮಂತ್ರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್, ಗ್ರಾಹಕರಿಗೆ ಕೈಗೆಟುಕುವ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಸಾರಿಗೆ ಸೇವೆಗಳನ್ನು ತಲುಪಿಸುವಾಗ ಟ್ಯಾಕ್ಸಿ ಚಾಲಕರ ಕೆಲಸದ ಪರಿಸ್ಥಿತಿಗಳು, ಆದಾಯ ಮತ್ತು ಜೀವನ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com





