ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳಿಗೆ ವಿನಾಯಿತಿ
ಬೆಂಗಳೂರು: ದುಬಾರಿ ಬಡ್ಡಿಗೆ ಸಾಲ ನೀಡಿ ಜನರನ್ನು ಶೋಷಿಸುತ್ತಿದೆ ಎಂಬ ಆರೋಪ ಹೊತ್ತಿರುವ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾನೂನು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರೂ. ದಂಡ, ಕಪ್ಪುಹಣಕ್ಕೆ ಕಡಿವಾಣ ಹಾಗೂ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಈ ವಿಧೇಯಕ ಅಂಗೀಕರಿಸಲಾಗಿದೆ.
https://chat.whatsapp.com/EbVKVnWB6rlHT1mWtsgbch
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ಈ ವಿಧೇಯಕಕ್ಕೆ ಸುದೀರ್ಘ ಚರ್ಚೆಯ ಬಳಿಕ ಪ್ರತಿಪಕ್ಷಗಳ ಸಲಹೆ ಹಾಗೂ ಸಹಮತದಿಂದ ಅನುಮೋದನೆ ಸಿಕ್ಕಿದೆ. ವಿಧೇಯಕ ಮಂಡಿಸಿ ಮಾತನಾಡಿದ ಎಚ್.ಕೆ ಪಾಟೀಲ್, ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದರು. ಸಾಲಗಳನ್ನು ಪಡೆಯುವ ಮತ್ತು ಸಾಲಗಳಲ್ಲೇ ಮುಳುಗಿ ಹೋಗಿರುವ ಅಸಹಾಯಕರನ್ನು ಕಾಪಾಡುವ ಮತ್ತು ರಕ್ಷಿಸುವ ಉದ್ದೇಶವಿದೆ. ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲ ವರ್ಗದವರನ್ನು ಪೀಡಿಸುತ್ತಿವೆ. ಸಾಲಗಾರನಿಗೆ ಕೆಲವೊಮ್ಮೆ ಹೆಚ್ಚಿನ ಬಡ್ಡಿ ಪಾವತಿಸಲು ಒತ್ತಾಯಿಸಲಾಗುತ್ತಿದೆ. ಲೇವಾದೇವಿದಾರರ ಕಾರಣದಿಂದ ಸಾಲಗಾರರು ಬೀದಿಗೆ ಬರುವಂತೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಪಡಿಸಲಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಪೊಲೀಸರಿಗೆ ಇನ್ನಷ್ಟು ಬಲ ನೀಡಿ ಕಾನೂನು ರಕ್ಷಣೆ ಮಾಡಬಹುದಾಗಿದೆ ಎಂದರು.
ಕಾಯ್ದೆ ಬೆಂಬಲಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಈಗಾಗಲೇ ಇರುವ ಕಾನೂನುಗಳ ಮೂಲಕ ಫೈನಾನ್ಸ್ ದಂಧೆ ಮಾಡುವವರನ್ನು ಬಗ್ಗುಬಡಿಯಬಹುದಾಗಿತ್ತು. ಆದರೆ, ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಇದರಿಂದ ಬಡಜನರ ಪ್ರಾಣವೂ ನಷ್ಟವಾಯಿತು. ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಲೇವಾದೇವಿದಾರರ ಕಿರುಕುಳಕ್ಕೆ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು. ರಾಜ್ಯ ಸರ್ಕಾರ ಕಾನೂನು ಜಾರಿಗೆ ಹೊರಟಿದೆ. ಇದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಯಾವುದೇ ಕಾರಣಕ್ಕೂ ಕೋರ್ಟಿನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಜೊತೆಗೆ, ನ್ಯಾಯಯುತವಾಗಿ ಸಾಲ ನೀಡುವ ಮಂದಿಗೂ ಹಾನಿಯಾಗದಂತೆ ಸರ್ಕಾರ ಗಮನ ನೀಡಬೇಕು ಎಂದೂ ಸಲಹೆ ಇತ್ತರು. ಕಾಯ್ದೆ ಬೆಂಬಲಿಸಿ ಕಾಂಗ್ರೆಸ್ಸಿನ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಮಾತನಾಡಿದರು. ನಂತರ ಧ್ವನಿ ಮತದ ಮೂಲಕ ಮಸೂದೆ ಅಂಗೀಕಾರಗೊಂಡಿತು.
ಕಾನೂನು ಚೌಕಟ್ಟುಗಳವರೆಗೆ ಕಾರ್ಯಾಚರಣೆಗೆ ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಮೂಲಭೂತ ಹಕ್ಕುಗಳ ರಕ್ಷಣೆ ಖಚಿತಪಡಿಸುವುದು, ಆರ್‌ಬಿಐನ ಕಣ್ತಪ್ಪಿಗೆ ಒಳಪಡದೇ, ನೋಂದಾಯಿತವಲ್ಲದ ಮತ್ತು ಅನಿಯಂತ್ರಿತ ಲೇವಾದೇವಿದಾರರಿಗೆ ಈ ವಿಧೇಯಕ ಅನ್ವಯವಾಗಲಿದೆ. ಕಾನೂನುಬದ್ಧ ಲೇವಾದೇವಿಯನ್ನು ನಿಷೇಧಿಸುವುದಿಲ್ಲ. ಆದರೆ, ಬಲವಂತದ ವಸೂಲಾತಿಗಳನ್ನು ನಿರ್ಬಂಧಿಸುತ್ತದೆ. ಬಲವಂತದ ಹಾಗೂ ಅಮಾನವೀಯ ಸಾಲ ವಸೂಲಾತಿಯಲ್ಲಿ ತಪ್ಪಿತಸ್ಥರಿಗೆ 10 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲುವಾಸ, 5 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡವನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅಧ್ಯಾದೇಶದ ಮೂಲಕ ಜಾರಿ ಮಾಡಿದ್ದ ಕಾನೂನನ್ನು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳನ್ನು ಈ ವಿಧೇಯಕದಿಂದ ಹೊರಗಿಡಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com