Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಭಾರತದ ಕೇಂದ್ರ ಬಜೆಟ್‌ನ ಇತಿಹಾಸ: ಒಂದು ಮೆಲುಕು
    News

    ಭಾರತದ ಕೇಂದ್ರ ಬಜೆಟ್‌ನ ಇತಿಹಾಸ: ಒಂದು ಮೆಲುಕು

    adminBy adminJanuary 29, 2025

    1947ರಿಂದ 2024: ಆಯವ್ಯಯ ಮಂಡಿಸಿದ ಭಾರತದ ಹಣಕಾಸು ಸಚಿವರುಗಳ ಬಗ್ಗೆ ನೋಟ

    ಮಂಗಳೂರು: ನರೇಂದ್ರ ಮೋದಿ ಸರ್ಕಾರ ತಮ್ಮ ಮೂರನೇ ಅವಧಿಯ ಪೂರ್ಣಾವಧಿ ಬಜೆಟ್‌ ಮಂಡಿಸಲು ರೆಡಿಯಾಗಿದೆ. ಕಳೆದ ಜೂನ್‌ನಲ್ಲಿ ಅಧಿಕಾರ ಹಿಡಿದ ಬಳಿಕ ಜುಲೈ 24ರಂದು ಮಧ್ಯಂತರ ಬಜೆಟ್‌ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪೂರ್ಣ ಬಜೆಟ್‌ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ.

    ಸಂವಿಧಾನದ 112ನೇ ವಿಧಿಯ ಪ್ರಕಾರ, ಕೇಂದ್ರ ಬಜೆಟ್ ಎಂಬುದು ಒಂದು ನಿರ್ದಿಷ್ಟ ವರ್ಷದ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚದ ಹಣಕಾಸು ಹೇಳಿಕೆ. ದೇಶ ಸ್ವಾತಂತ್ರ್ಯಗೊಂಡ ಬಳಿಕ ಮೊದಲ ಬಜೆಟ್‌ ಮಂಡನೆಯಾದದ್ದು 1947ರ ನವಂಬರ್‌ನಲ್ಲಿ. ಆರ್‌.ಕೆ ಷಣ್ಮುಖಂ ಚೆಟ್ಟಿ ದೇಶದ ಮೊದಲ ಹಣಕಾಸು ಸಚಿವರಾಗಿ 1947ರ ನವಂಬರ್‌ 26ರಂದು ಮೊದಲ ಕೇಂದ್ರ ಬಜೆಟ್‌ ಮಂಡಿಸಿದರು. ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆ ವೇಳೆ ಚೆಟ್ಟಿ ಅವರು ಈ ಬಜೆಟ್‌ ಏಳೂವರೆ ತಿಂಗಳಿಗೆ ಮೀಸಲಾಗಿದೆ ಎಂದು ಹೇಳಿ, ₹171.15 ಕೋಟಿ ಆದಾಯ ಮತ್ತು ₹197.39 ಕೋಟಿ ವೆಚ್ಚವನ್ನು ಮಂಡಿಸಿದ್ದರು. ಅವರದೇ ಕಾಲಘಟ್ಟದಲ್ಲಿ ಯೋಜನಾ ಆಯೋಗವೂ ರಚನೆಯಾಯಿತು. ಪಂಚವಾರ್ಷಿಕ ಯೋಜನೆಗಳೂ ಶುರುವಾದವು.

    https://chat.whatsapp.com/Ge11n7QCiMj5QyPvCc0H19

    1951-52ರಲ್ಲಿ ಸಿ.ಡಿ ದೇಶಮುಖ್‌ ಮೊದಲ ಮಧ್ಯಂತರ ಬಜೆಟ್‌ ಮಂಡಿಸಿದರು. ತಮ್ಮ ಬಜೆಟ್‌ ಮಂಡನೆ ವೇಳೆ ಅವರು ತೆರಿಗೆ ಹೆಚ್ಚಳವನು ಪ್ರಸ್ತಾಪಿಸಿದ ಕಾರ್ಪೊರೇಟ್‌ ತೆರಿಗೆಯನ್ನೂ ಪರಿಚಯಿಸಿದರು. ಇವರ ಕಾಲಘಟ್ಟದಲ್ಲಿ ನ್ಯಾಶನಲ್‌ ಕೌನ್ಸಿಲ್‌ ಆಫ್‌ ಅಪ್ಲೈಡ್‌ ಇಕನಾಮಿಕ್‌ ರೀಸರ್ಚ್‌(ಅನ್ವಯಿಕ ಆರ್ಥಿಕ ಸಂಶೋಧನಾ ರಾಷ್ಟ್ರೀಯ ಮಂಡಳಿ) ಸ್ಥಾಪನೆಯಾಯಿತು.

    ಟಿ.ಟಿ ಕೃಷ್ಣಮಾಚಾರಿ ಹಣಕಾಸು ಸಚಿವರಾಗಿದ್ದಾಗ ಬಜೆಟ್‌ನಲ್ಲಿ ಆಸ್ತಿ ತೆರಿಗೆ ಮತ್ತು ವೆಚ್ಚದ ತೆರಿಗೆ ಪ್ರಾರಂಭಿಸಲಾಯಿತು. ಎನ್‌ಎಲ್‌ಸಿ, ಐಡಿಬಿಐ, ಐಸಿಐಸಿಐ ಮತ್ತು ದಾಮೋದರ್‌ ವ್ಯಾಲಿ ಕಾರ್ಪೊರೇಷನ್‌ ಆರಂಭವಾಯಿತು. ಮುಂದ್ರಾ ಹಗರಣದಲ್ಲಿ ಹೆಸರು ಕೇಳಿಬಂದ ಕಾರಣ ಇವರು ತಮ್ಮ ಹಣಕಾಸು ಸಚಿವ ಪದವಿಗೆ  ರಾಜೀನಾಮೆ ನೀಡಿದರು.

    ಪಾರ್ಲಿಮೆಂಟ್‌ನಲ್ಲಿ ಬಜೆಟ್‌ ಮಂಡಿಸಿದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು. 1958ರಲ್ಲಿ ನೆಹರು ಅವರು ಮೊದಲ ಸಲ ಬಜೆಟ್‌ ಮಂಡಿಸಿದರು. ಅವರು ತಮ್ಮ ಬಜೆಟ್‌ ಮಂಡನೆ ವೇಳೆ ಉಡುಗೊರೆ ಟ್ಯಾಕ್ಸ್‌ ಅನ್ನು ಪರಿಚಯಿಸಿದ್ದು, ಚಾರಿಟೇಬಲ್‌ ಟ್ರಸ್ಟ್‌ಗಳು, ಸರ್ಕಾರಿ ಕಂಪನಿಗಳು, ಕೇಂದ್ರ ಅಥವಾ ರಾಜ್ಯ ಕಾಯಿದೆಗಳ ಅಡಿಯಲ್ಲಿ ಸ್ಥಾಪಿಸಲಾದ ನಿಗಮಗಳು ಮತ್ತು ಆರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳಿಂದ ನಿಯಂತ್ರಿಸಲ್ಪಡುವ ಸಾರ್ವಜನಿಕ ಕಂಪನಿಗಳಿಗೆ ಇದರಿಂದ ವಿನಾಯಿತಿ ದೊರಕಿಸಿದರು.

    ಹತ್ತು ಬಜೆಟ್‌ಗಳನ್ನು ಮಂಡಿಸಿದರು ಮೊರಾರ್ಜಿ ದೇಸಾಯಿ ಅವರು ಈ ತನಕ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದೇಶದ ಹಣಕಾಸು ಸಚಿವರು. ಈ ದಾಖಲೆಯನ್ನು ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮುರಿಯುವ ಎಲ್ಲ ಸಾಧ್ಯತೆಗಳಿವೆ. ಮೊರಾರ್ಜಿ ದೇಸಾಯಿಯವರು ಹಣಕಾಸು ಸಚಿವರಾಗಿದ್ದಾಗ  ಕೃಷಿ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡMಳಿಯ ಸ್ಥಾಪನೆಗೆ ಉತ್ತೇಜನ ನೀಡಿದರು.  ಆಮದು ಪರವಾನಗಿ ವ್ಯವಸ್ಥೆಯನ್ನೂ ಪರಿಚಯಿಸಿದರು.

    ಟಿ.ಟಿ ಕೃಷ್ಣಮಾಚಾರಿ ಮತ್ತೊಮ್ಮೆ ಹಣಕಾಸು ಸಚಿವರಾದಾಗ  ದೇಶದಲ್ಲಿ ಮೊದಲ ಬಾರಿ ಗುಪ್ತ ಆದಾಯದ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಯ ಯೋಜನೆಯನ್ನು ಪರಿಚಯಿಸಲಾಯಿತು.

    ಸಚೀಂದ್ರ ಚೌಧರಿ ಹಣಕಾಸು ಸಚಿವರಾಗಿದ್ದಾಗ ವೆಚ್ಚದ ಮೇಲಿನ ತೆರಿಗೆಯನ್ನು ನಿಲ್ಲಿಸಲಾಯಿತು. ೧೯೬೭-೬೯ರ ಅವಧಿಯಲ್ಲಿ ಮತ್ತೊಮ್ಮೆ ಹಣಕಾಸು ಸಚಿವರಾದ ಮೊರಾರ್ಜಿ ದೇಸಾಯಿ ತಮ್ಮ ಬಜೆಟ್‌ನಲ್ಲಿ ಸಣ್ಣ ಮತ್ತು ದೊಡ್ಡ ಉತ್ಪಾದಕರಿಂದ ಸರಕುಗಳ ಸ್ವಯಂ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಿದರು. ಚಿನ್ನದ ನಿಯಂತ್ರಣ ಕಾಯ್ದೆ 1962 ಈ ಕಾಲದಲ್ಲೆ ಜಾರಿಯಾಯಿತು. ಆದರೆ ಪ್ರಧಾನಿ ಇಂದಿರಾ ಗಾಂಧಿಯವರು 14 ಪ್ರಮುಖ ಬ್ಯಾಂಕುಗಳನ್ನು ತಮ್ಮೊಂದಿಗೆ ಸಮಾಲೋಚಿಸದೆ ರಾಷ್ಟ್ರೀಕರಣಗೊಳಿಸಿದ ನಂತರ ಅದನ್ನು ಪ್ರತಿಭಟಿಸಿ  ರಾಜೀನಾಮೆ ನೀಡಿದರು.

    ಭಾರತದ ಪ್ರಧಾನ ಮಂತ್ರಿಯಾಗಿ ಹಣಕಾಸು ಖಾತೆಯನ್ನೂ ನಿಭಾಯಿಸಿದ ಇಂದಿರಾ ಗಾಂಧಿಯವರು 1970-71ರ ಬಜೆಟ್ ಭಾಷಣದಲ್ಲಿ ದೇಶದ ಬೆಳವಣಿಗೆಯ ಅಗತ್ಯವನ್ನು ಇಲ್ಲಿರುವ ನಿರ್ಗತಿಕರು ಮತ್ತು ಬಡವರ ಯೋಗಕ್ಷೇಮದ ಕಾಳಜಿಯೊಂದಿಗೆ ಸಮನ್ವಯಗೊಳಿಸುವ ನೀತಿಗಳನ್ನು ರೂಪಿಸುವುದು ಅವಶ್ಯಕ ಎಂದು ಪ್ರತಿಪಾದಿಸಿ ಅದಕ್ಕೆ ತಕ್ಕ ಯೋಜನೆಗಳನ್ನು ಜಾರಿಗೆ ತಂದರು. ಇವರ ಕಾಲಘಟ್ಟದಲ್ಲಿ ಹಸಿರು ಕ್ರಾಂತಿಯ ನಂತರ ಆಪರೇಷನ್ ಫ್ಲಡ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶ್ವೇತ ಕ್ರಾಂತಿ ನಡೆಯಿತು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಇದೇ ಕಾಲದಲ್ಲಿ ಸ್ಥಾಪಿಸಲಾಯಿತು.

    ಯಶವಂತರಾವ್‌ ಬಿ.ಚೌಹಾಣ್‌ ಹಣಕಾಸು ಸಚಿವರಾಗಿದ್ದಾಗ ಮಂಡಿಸಿದ ಬಜೆಟ್‌ನಲ್ಲಿ ವಿಮಾ ಕಂಪನಿಗಳನ್ನು ಮತ್ತು ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಣಗೊಳಿಸಿದರು. ಇವರ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಭಾರತದ ಆರ್ಥಿಕತೆಯು ಹಿಂಜರಿತಕ್ಕೆ ಸಿಲುಕಿತ್ತು. 1974-1977ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಸುಬ್ರಹ್ಮಣ್ಯಂ ಅವರು ತಮ್ಮ ಬಜೆಟ್‌ನಲ್ಲಿ ಇಎಸ್‌ಐ, ಇಪಿಎಫ್‌ ಹಾಗೂ ಕುಟುಂಬ ಪಿಂಚಣಿ ಯೋಜನಗೆಳಂತಹ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಘೋಷಿಸಿ ಅನುಷ್ಠಾನಕ್ಕೆ ತಂದರು. 1975-76ರ ಬಜೆಟ್‌ನಲ್ಲಿ ಅವರು ಭವಿಷ್ಯ ನಿಧಿ ಖಾತೆಗಳಿಂದ ನೇರವಾಗಿ ಹಣ ವಿತ್‌ಡ್ರಾ ಮಾಡದೆ ಹಣಕಾಸಿನ ನೆರವು ಪಡೆಯಲು ಪ್ರೋತ್ಸಾಹಕ ಬೋನಸ್‌ ಯೋಜನೆ ಘೋಷಣೆ ಮಾಡಿದರು.

    ದೇಶದ ಪ್ರಥಮ ಕಾಂಗ್ರೆಸೇತರ ಸರ್ಕಾರದ ಹಣಕಾಸು ಸಚಿವರಾಗಿದ್ದವರು ಹೀರಾಬಾಯ್‌ ಎಂ.ಪಟೇಲ್‌. 1977ರ ಮಾರ್ಚ್‌ 26ರಿಂದ 1979ರ ಜನವರಿ 24ರ ತನಕ ಹಣಕಾಸು ಸಚಿವರಾಗಿದ್ದ ಅವರು,  ಅತ್ಯಂತ ಕಿರು ಬಜೆಟ್‌ ಮಂಡಿಸಿದ್ದರು. 1977ರಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿದ ಹೀರಾಬಾಯ್‌ ಪಟೇಲ್‌ ಕೇವಲ 800 ಪದಗಳಲ್ಲೇ ಬಜೆಟ್‌ ಭಾಷಣ ಮುಗಿಸಿದ್ದರು. ಭಾರತದಲ್ಲಿ ವ್ಯವಹಾರ ನಡೆಸುವ ವಿದೇಶಿ ಕಂಪನಿಗಳಲ್ಲಿ ಭಾರತೀಯ ಕಂಪನಿಗಳು ಶೇಕಡಾ 50ರಷ್ಟು ಪಾಲು  ಹೊಂದಿರುವ ನೀತಿಯನ್ನು ಅವರು ತಮ್ಮ ಬಜೆಟ್‌ನಲ್ಲಿ ಮಂಡಿಸಿದ್ದರು.

    1979-80ರ ಬಜೆಟ್‌ ಮಂಡಿಸಿದ್ದ ಚರಣ್‌ ಸಿಂಗ್‌, ಕೃಷಿ ಬೆಳವಣಿಗೆ ಮತ್ತು ಉದ್ಯೋಗ ಉತ್ತೇಜನದ ಮೇಲೆ ಮಹತ್ವದ ಪರಿಣಾಮ ಬೀರುವ ಕಾರ್ಯಕ್ರಮಗಳ ವೇಗ ಹೆಚ್ಚಿಸುವ ಮತ್ತು ಅದಕ್ಕೆ ಹೆಚ್ಚು ಒತ್ತು ನೀಡುವ ಪ್ರಸ್ತಾಪ ಮಾಡಿದರು. ಜೊತೆಗೆ ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳ (FMCG) ಮೇಲೆ ಭಾರೀ ಅಬಕಾರಿ ಸುಂಕಗಳನ್ನೂ ವಿಧಿಸಿದರು. ಈ ಮಧ್ಯೆ ಹೇಮ್ವತಿ ನಂದನ್‌ ಬಹುಗುಣ ಹಣಕಾಸು ಸಚಿವರಾದರೂ ಬಜೆಟ್‌ ಮಂಡನೆಗೆ ಅವರಿಗೆ ಅವಕಾಶವೇ ಲಭಿಸಲಿಲ್ಲ. 1980 – 1982ರ ಮಧ್ಯೆ ವಿತ್ತ ಸಚಿವರಾಗಿದ್ದ ಆರ್‌.ವೆಂಕಟರಮಣ್‌ ಜೀವರಕ್ಷಕ ಔಷಧಗಳು, ಸೈಕಲ್‌ಗಳು, ಹೊಲಿಗೆ ಯಂತ್ರಗಳು ಮತ್ತು ಪ್ರೆಶರ್ ಕುಕ್ಕರ್‌ಗಳಿಗೆ ಅಬಕಾರಿ ಸುಂಕದಿಂದ ವಿನಾಯಿತಿ ನೀಡಿದರು. ರೇಡಿಯೊ ಮೇಲಿನ ಪರವಾನಗಿ ಶುಲ್ಕವನ್ನೂ ತೆಗೆದು ಹಾಕಿದರು.

    1982-1984ರ ಅವಧಿಯಲ್ಲಿ ಮೊದಲ ಸಲ ಹಣಕಾಸು ಸಚಿವರಾದ ಪ್ರಣಬ್‌ ಮುಖರ್ಜಿಯವರು ಜನರಿಂದ, ವಿಶೇಷವಾಗಿ ಅನಿವಾಸಿ ಭಾರತೀಯರಿಂದ ಹಣ ರವಾನೆ ಮತ್ತು ಹೂಡಿಕೆಗಳ ಮೇಲೆ ತಮ್ಮ ಬಜೆಟ್‌ ಭಾಷಣ ಕೇಂದ್ರೀಕರಿಸಿದರು. ಸಾರ್ವಜನಿಕ ಬಳಕೆಗಾಗಿ ಖಾಸಗಿ ಉಳಿತಾಯವನ್ನು ಸಜ್ಜುಗೊಳಿಸಲು ಸಾಮಾಜಿಕ ಭದ್ರತಾ ಪ್ರಮಾಣಪತ್ರ ಮತ್ತು ಬಂಡವಾಳ ಹೂಡಿಕೆ ಬಾಂಡ್ ಅನ್ನು ಇವರ ಅವಧಿಯಲ್ಲಿ ಪರಿಚಯಿಸಲಾಯಿತು.

    1984 -1987ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ ಸಿಂಗ್‌ ತಮ್ಮ ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸಲು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಅನ್ನು ಪರಿಚಯಿಸಿದರು. ಪುರಸಭೆಯ ಕಸ ಗುಡಿಸುವವರಿಗೆ ಅಪಘಾತ ವಿಮಾ ಯೋಜನೆ ಮತ್ತು ರಿಕ್ಷಾ ಚಾಲಕರಿಗೆ ಸಬ್ಸಿಡಿ ಬ್ಯಾಂಕ್ ಸಾಲಗಳಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅವರು ರಫ್ತು ಪ್ರೋತ್ಸಾಹಕಗಳನ್ನು ಮತ್ತು ಪ್ರಮುಖ ತೆರಿಗೆ ಸುಧಾರಣೆಯಾದ ಮಾರ್ಪಡಿಸಿದ ಮೌಲ್ಯವರ್ಧಿತ ತೆರಿಗೆ (MODVAT) ಅನ್ನೂ ಪರಿಚಯಿಸಿದರು.

    1987ರಲ್ಲಿ ಹಣಕಾಸು ಸಚಿವ ಪದವಿಯನ್ನೂ ಪಡೆದಿದ್ದ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಬಜೆಟ್‌ ಮಂಡನೆ ವೇಳೆ ಕಾರ್ಪೊರೇಟ್ ತೆರಿಗೆಯನ್ನು ಕನಿಷ್ಠ ಪರ್ಯಾಯ ತೆರಿಗೆ ಎಂದು ಬದಲಿಸಿದರು. ವಸತಿ ಅಭಿವೃದ್ಧಿಗೆ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ವಸತಿಗಾಗಿ ಸಮಗ್ರ ಕಾರ್ಯಕ್ರಮ ಪ್ರಾರಂಭಿಸುವ ಪ್ರಸ್ತಾಪ ಮಾಡಿದರು.

    ಎನ್‌.ಡಿ ತಿವಾರಿ 1987-1988ರ ಬಜೆಟ್‌ನಲ್ಲಿ ಯಂತ್ರೋಪಕರಣಗಳು ಮತ್ತು ಕಚ್ಚಾ ವಸ್ತುಗಳ ಆಮದು ಹೆಚ್ಚಿಸಲು ರಫ್ತು ಲಾಭಗಳಿಗೆ ಶೇ. 100ರಷ್ಟು ಆದಾಯ ತೆರಿಗೆ ವಿನಾಯಿತಿ ನೀಡಿದರು ಮತ್ತು ರಫ್ತು ಸಾಲದ ಮೇಲಿನ ಬಡ್ಡಿದರವನ್ನು ಶೇ.12ರಿಂದ 9ಕ್ಕೆ ಇಳಿಸಿದರು. 1988-1989ರ ಅವಧಿಯಲ್ಲಿ ಬಜೆಟ್‌ ಮಂಡಿಸಿದ್ದ ಶಂಕರರಾವ್‌ ಬಿ.ಚವಾಣ್‌ ಜವಾಹರಲಾಲ್ ನೆಹರು ರೋಜ್‌ಗಾರ್ ಯೋಜನೆ ಎಂಬ ಗ್ರಾಮೀಣ ಉದ್ಯೋಗ ಕಾರ್ಯಕ್ರಮ ಜಾರಿಗೆ ತಂದರು. ವೈಯಕ್ತಿಕ ಉಳಿತಾಯವನ್ನು ಷೇರುಗಳಿಗೆ ಹಣದ ಹರಿವು ಉತ್ತೇಜಿಸಲು ಈಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ಪರಿಚಯಿಸಲಾಯಿತು. ಮ್ಯೂಚುವಲ್ ಫಂಡ್‌ಗಳು ಮತ್ತು ಹೂಡಿಕೆಗಳಿಂದ ಬರುವ ಗಳಿಕೆಯ ನಿರ್ದಿಷ್ಟ ಮಿತಿಯವರೆಗೆ ತೆರಿಗೆ ವಿನಾಯಿತಿಯನ್ನೂ ಇವರ ಅವಧಿಯಲ್ಲಿ ನೀಡಲಾಯಿತು.

    ಮಧು ದಂಡವತೆ ಅವರ ಅವಧಿಯಲ್ಲಿ, ಕುಶಲಕರ್ಮಿಗಳು ಮತ್ತು ಸಣ್ಣ ಅಕ್ಕಸಾಲಿಗರಿಗೆ ಅನುಕೂಲವಾಗುವಂತೆ ದೇಶೀಯ ವ್ಯಾಪಾರವನ್ನು ನಿಯಂತ್ರಿಸುವ ಚಿನ್ನದ ನಿಯಂತ್ರಣ ಕಾಯ್ದೆಯನ್ನು ರದ್ದುಪಡಿಸಲಾಯಿತು. ದಂಡವತೆ ಹಣಕಾಸು ಖಾತೆಯನ್ನು ವಹಿಸಿಕೊಂಡ ಅವಧಿಯಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಎಂಬ ಸಂಸ್ಥೆಯನ್ನೂ ಸ್ಥಾಪಿಸಲಾಯಿತು. 1991 ರಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿದ ಯಶವಂತ್‌ ಸಿನ್ಹಾ, ಆರ್ಥಿಕ ಸುಧಾರಣೆಗಳಿಗೆ ಅಡಿಪಾಯ ಹಾಕಿದರು.

    1991-1996ರ ಅವಧಿಗೆ ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್‌ ಸಿಂಗ್‌ ಕ್ರಾಂತಿಕಾರಿ ಬಜೆಟ್‌ ಮಂಡಿಸಿದ್ದರು. ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣಗಳ ಮೂಲಕ ದೇಶದ ಮಾರುಕಟ್ಟೆಯನ್ನು ವಿದೇಶಗಳಿಗೆ ತೆರೆದರು. ವಿದೇಶಿ ವಿನಿಮಯ ಮೀಸಲು ಹೆಚ್ಚಿಸುವುದು, ಹಣಕಾಸಿನ ಕೊರತೆ ಕಡಿಮೆ ಮಾಡುವುದು ಮತ್ತು ವ್ಯಾಪಾರ ನೀತಿ ಸುಧಾರಣೆಗಳನ್ನು ಪರಿಚಯಿಸುವತ್ತ ಇವರು ಗಮನ ಹರಿಸಿದರು.

    1996ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗ ಜಸ್ವಂತ್ ಸಿಂಗ್ ಹಣಕಾಸು ಸಚಿವರಾದರು. ಆದರೆ ಹದಿಮೂರೇ ದಿನದಲ್ಲಿ ಸರಕಾರ ಪತನಗೊಂಡಿದ್ದರಿಂದ ಅವರು ಅತ್ಯಂತ ಕಡಿಮೆ ಅವಧಿಗೆ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಳಿಕ ಬಂದ ಹೆಚ್‌.ಡಿ ದೇವೇಗೌಡ ಸರಕಾರದಲ್ಲಿ ಹಣಕಾಸು ಸಚಿವರಾದ ಪಿ.ಚಿದಂಬರಂ ಹೆಚ್ಚುತ್ತಿರುವ ಹಣಕಾಸಿನ ಕೊರತೆ ನೀಗಿಸಲು ತೆರಿಗೆ ಸುಧಾರಣಾ ಕಾರ್ಯಕ್ರಮ  ಪ್ರಾರಂಭಿಸಿದರು. ಅವರು ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ಕಂಪನಿ (ಐಡಿಎಫ್‌ಸಿ) ಸ್ಥಾಪನೆಯನ್ನೂ ಪ್ರಸ್ತಾಪಿಸಿದರು. 1997- 98ರಲ್ಲಿ ಪಿ.ಚಿದಂಬರಂ ಮಂಡಿಸಿದ ಬಜೆಟ್‌ ಅನ್ನು ಡ್ರೀಮ್‌ ಬಜೆಟ್‌ ಎಂದು ಕರೆಯಲಾಗಿದೆ. ಈ ಬಜೆಟ್‌ ದೇಶದಲ್ಲಿ ಆರ್ಥಿಕ ಸುಧಾರಣೆಗಳಿಗೆ ಮಾರ್ಗಸೂಚಿಯೊಂದನ್ನು ಮಂಡಿಸಿತು. ಇದು ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡುವುದು, ಕಾರ್ಪೊರೇಟ್ ತೆರಿಗೆಗಳ ಮೇಲಿನ ಸರ್‌ಚಾರ್ಜ್ ಅನ್ನು ತೆಗೆದುಹಾಕುವುದು ಮತ್ತು ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು.

    1998 -2002ರ ಅವಧಿಗೆ ಹಣಕಾಸು ಸಚಿವರಾಗಿದ್ದ ಯಶವಂತ್‌ ಸಿನ್ಹಾ ಮಾರ್ಪಡಿಸಿದ ಮೌಲ್ಯವರ್ಧಿತ ತೆರಿಗೆ (MODVAT) ಅನ್ನು ಕೇಂದ್ರ ಮೌಲ್ಯವರ್ಧಿತ ತೆರಿಗೆ (CENVAT) ಯೊಂದಿಗೆ ಬದಲಾಯಿಸಿದರು. ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಅವರು ವಿಶೇಷ ಆರ್ಥಿಕ ವಲಯಗಳನ್ನು ಪರಿಚಯಿಸಿದರು.  ಸಾಲ ಮಾರುಕಟ್ಟೆ ಪುನರ್ರಚನೆಯನ್ನೂ ಪ್ರಾರಂಭಿಸಿದರು.

    2002-2004ರ ಅವಧಿಯಲ್ಲಿ ಜಸ್ವಂತ್‌ ಸಿಂಗ್‌ ಹಣಕಾಸು ಸಚಿವರಾಗಿದ್ದಾಗ ಇಲೆಕ್ಟ್ರಾನಿಕ್ ಆದಾಯ ತೆರಿಗೆ ಸಲ್ಲಿಕೆಯನ್ನು ಪರಿಚಯಿಸಲಾಯಿತು. ಅವರು ಪ್ರಮಾಣಿತ ಕಡಿತವನ್ನು ಸ್ವಲ್ಪ ಹೆಚ್ಚಿಸುವ ಮೂಲಕ ಮತ್ತು ₹5 ಲಕ್ಷದವರೆಗಿನ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಅನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡುವ ಮೂಲಕ ತೆರಿಗೆದಾರರಿಗೆ ಪರಿಹಾರ  ಒದಗಿಸಿದರು. ಇಬ್ಬರು ಮಕ್ಕಳಿಗೆ ₹12,000ವರೆಗಿನ ಶಿಕ್ಷಣ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿಯನ್ನೂ ಇವರ ಕಾಲದಲ್ಲಿ ಪರಿಚಯಿಸಲಾಯಿತು.

    2004 -2008ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವಧಿಯಲ್ಲಿ ಗ್ರಾಮೀಣ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಒದಗಿಸಲು MGNREGS ಅನ್ನು ಪರಿಚಯಿಸಲಾಯಿತು. ತೆರಿಗೆ ರಹಿತ ಮೂಲಸೌಕರ್ಯ ಬಾಂಡ್‌ಗಳನ್ನು ನೀಡಲಾಯಿತು. ಅವರು ₹7 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಕೃಷಿ ಸಾಲಗಳನ್ನು ಮನ್ನಾ ಮಾಡಿದರು.

    2009 -2012ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವಧಿಯಲ್ಲಿ ಆಹಾರ ಭದ್ರತಾ ಮಸೂದೆಯನ್ನು ಪರಿಚಯಿಸಲಾಯಿತು. ಆದಾಯ ಗಳಿಸಲು 3G ಸ್ಪೆಕ್ಟ್ರಮ್ ತರಂಗಗಳನ್ನು ಹರಾಜು ಮಾಡಲಾಯಿತು. ಭಾರತೀಯ ಕಂಪನಿಯ ಆಸ್ತಿಗಳ ಖರೀದಿಯಲ್ಲಿನ ವಹಿವಾಟುಗಳನ್ನು ತೆರಿಗೆಗೆ ಒಳಪಡಿಸಲು ಆದಾಯ ತೆರಿಗೆ ಕಾಯ್ದೆಯನ್ನು ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಲಾಯಿತು. ಕೊರತೆ  ಕಡಿಮೆ ಮಾಡಲು ಪ್ರಣಬ್ ಮುಖರ್ಜಿ ಸರ್ಕಾರಿ ಖರ್ಚಿನಲ್ಲಿ ಕಠಿಣ ಕ್ರಮಗಳನ್ನು ಸಹ ತಂದರು.

    2012 -2014ರ ಅವಧಿಯಲ್ಲಿ ಮತ್ತೆ ಹಣಕಾಸು ಸಚಿವರಾದ ಪಿ.ಚಿದಂಬರಂ ₹1 ಕೋಟಿಗಿಂತ ಹೆಚ್ಚಿನ ತೆರಿಗೆ ವಿಧಿಸಬಹುದಾದ ಆದಾಯಕ್ಕೆ 10% ಸರ್‌ಚಾರ್ಜ್ ವಿಧಿಸುವ ಕ್ರಮ ಪರಿಚಯಿಸಿದರು. ಅವರ ಅಧಿಕಾರಾವಧಿಯಲ್ಲಿ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆ ಜಾರಿಗೆ ತರಲಾಯಿತು. ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಮೊದಲ ಪಿಎಸ್‌ಯು ಬ್ಯಾಂಕ್ ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಇದೇ ಅವಧಿಯಲ್ಲಿ ಪರಿಚಯಿಸಲಾಯಿತು.

    2014-2019ರ ಅವಧಿಯಲ್ಲಿ ಹಣಕಾಸು ಸಚಿವರಾದ ಅರುಣ್‌ ಜೇಟ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜಿಎಸ್‌ಟಿ ಮತ್ತು ನೋಟು ರದ್ದತಿ ಅವರ ಅಧಿಕಾರಾವಧಿಯಲ್ಲಿ ಎರಡು ದೊಡ್ಡ ನಿರ್ಧಾರಗಳಾಗಿದ್ದವು. 2017 ರಲ್ಲಿ, ಫೆಬ್ರವರಿ ಕೊನೆಯ ಕೆಲಸದ ದಿನದಂದು ಬಜೆಟ್ ಮಂಡಿಸುವ ಬಹಳ ಹಿಂದಿನ ಸಂಪ್ರದಾಯವನ್ನು ಅರುಣ್‌ ಜೇಟ್ಲಿ ಬದಲಿಸಿ, ಫೆಬ್ರವರಿ 1ರಂದೇ ಬಜೆಟ್‌ ಮಂಡಿಸುವ ಕ್ರಮ ಶುರು ಮಾಡಿದರು. 2017-18ರಲ್ಲಿ “ಏಕೀಕೃತ” ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವರಾಗಿ ಖ್ಯಾತಿ ಪಡೆದು ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನೊಂದಿಗೆ ವಿಲೀನಗೊಳಿಸಿದರು.

    2018 ಮತ್ತು 2019 ರಲ್ಲಿ ಪಿಯೂಷ್ ಗೋಯಲ್ ಹಣಕಾಸು ಸಚಿವರ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದು, ಫೆಬ್ರವರಿ 1, 2019ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಬಜೆಟ್‌ ಮಂಡಿಸಿದ ಗೋಯಲ್‌ ಆದಾಯ ತೆರಿಗೆದಾರರಿಗೆ ₹12,500 ಪರಿಹಾರ ಘೋಷಿಸಿದ್ದು ಅವರ ಬಜೆಟ್‌ನ ಪ್ರಮುಖ ಅಂಶವಾಗಿತ್ತು.

    2019ರಿಂದ ಈ ತನಕ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌, ಕೇಂದ್ರ ಬಜೆಟ್‌ ಮಂಡಿಸಿದ ಎರಡನೇ ಮಹಿಳಾ ಹಣಕಾಸು ಸಚಿವೆ ಎನಿಸಿದರು. ಜುಲೈ 5, 2019ರಂದು ಸೀತಾರಾಮನ್ ತಮ್ಮ ಮೊದಲ ಬಜೆಟ್ ಭಾಷಣ ಮಂಡಿಸಿ, ಅತಿ ಶ್ರೀಮಂತರ ಮೇಲಿನ ಹೆಚ್ಚುವರಿ ಸರ್‌ಚಾರ್ಜ್, ಹೆಚ್ಚುವರಿ ಆದಾಯ ತೆರಿಗೆ ಸ್ಲ್ಯಾಬ್‌ಗಳು, ಕಸ್ಟಮ್ಸ್ ಸುಂಕದಲ್ಲಿ ಹಲವಾರು ಹೆಚ್ಚಳ ಮತ್ತು ಆತ್ಮನಿರ್ಭರ ಭಾರತ್ ದೃಷ್ಟಿಕೋನದ ಮೇಲೆ ಗಮನ ಮತ್ತು ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಮುಂದಿಟ್ಟರು. 2022 ಮತ್ತು 2024 ರ ಬಜೆಟ್‌ಗಳು ಅತ್ಯಂತ ನಿರ್ಣಾಯಕ ಕೇಂದ್ರ ಬಜೆಟ್‌ಗಳಲ್ಲಿ ಸೇರಿವೆ. ಇದು ಅಮೃತ್ ಕಾಲ್ ಮತ್ತು ‘ವಿಕಸಿತ ಭಾರತ್’ಗಾಗಿ ಹಲವಾರು ಆದ್ಯತೆಗಳಿಗೆ ನೀಲಿನಕ್ಷೆಯನ್ನು ಪ್ರಸ್ತುತಪಡಿಸಿದೆ. ಇದು ಭಾರತವನ್ನು ವಿಶ್ವದ ಅಗ್ರಮಾನ್ಯ ಆರ್ಥಿಕತೆಗಳಲ್ಲಿ ಒಂದಾಗಿಸಲು ಅನುವು ಮಾಡಿಕೊಡುತ್ತದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Indira Gandhi Budget Manmohan Singh Budget Morarji Desayi Nirmala Seetharaman Sahakara Spandana Spandana Union Budget
    Previous Articleವಿಶ್ವಕರ್ಮ ಸಹಕಾರ ಬ್ಯಾಂಕ್‌ ಅಧ್ಯಕ್ಷರಾಗಿ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಪುನರಾಯ್ಕೆ
    Next Article ಕುದ್ರೋಳಿಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದಿಂದ ವೈದ್ಯಕೀಯ ಉಚಿತ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.