2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಶೇ.16 ಡಿವಿಡೆಂಡ್ ಘೋಷಣೆ
ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್‌ನ “ಸ್ಪರ್ಶಾ ಕಲಾಮಂದಿರ”ದಲ್ಲಿ ಇತ್ತೀಚೆಗೆ ಸಂಘದ ಅಧ್ಯಕ್ಷ ಜೀವನ್ ಲೊಯ್ಡ್ ಪಿಂಟೊ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2023-24ನೇ ಸಾಲಿನ ಆರ್ಥಿಕ ವರ್ಷ ರೂ. 2.10 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 16 ಡಿವಿಡೆಂಡ್ ಘೋಷಣೆ ಮಾಡಲಾಯಿತು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
27ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೊ, ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು ಹಾಗೂ ಸದ್ರಿ ಆಡಳಿತ ಮಂಡಳಿಯ ಕೊನೆಯ ವಾರ್ಷಿಕ ಸಭೆಯ ಬಗ್ಗೆ ಪ್ರಸ್ತಾಪಿಸಿ, ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಠೇವಣಿ ಮತ್ತು ಸಾಲಗಳ ವಿಭಾಗದಲ್ಲಿ ಸಂಘವು ಸಾಧಿಸಿದ ಪ್ರಗತಿಯನ್ನು ಸಭೆಯ ಮುಂದಿಟ್ಟು, ಸಂಘವನ್ನು ಬೆಳೆಸಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿದರು. ಸಂಘದ ದೊಡ್ಡ ಕನಸಾಗಿರುವ ಪ್ರಧಾನ ಕಛೇರಿ ಹಾಗೂ ಬಿ.ಸಿ.ರೋಡ್ ಶಾಖೆಯ ನೂತನ ಕಟ್ಟಡದ ಯೋಜನೆಗೆ ಶಿಲಾನ್ಯಾಸದ ಮುಖಾಂತರ ಈಗಾಗಲೇ ಚಾಲನೆ ದೊರಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಂಘವು ಒಟ್ಟು 9 ಶಾಖೆಗಳನ್ನು ಹೊಂದಿದ್ದು, 10ನೇ ಶಾಖೆಯು ಫಜೀರು ಗ್ರಾಮದ ಗ್ರಾಮಚಾವಡಿ ಎಂಬಲ್ಲಿ ಉದ್ಘಾಟನೆಗೆ ಸಿದ್ಧವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಘವು ಪ್ರಸಕ್ತ ವರ್ಷ ರೂ. 695.92 ಕೋಟಿ ವ್ಯವಹಾರ ನಡೆಸಿದೆ. ಮಾರ್ಚ್ 2024ರ ಅಂತ್ಯಕ್ಕೆ ಸಂಘವು ಪಾಲು ಬಂಡವಾಳ ರೂ.3.76 ಕೋಟಿ ಠೇವಣಿ ರೂ. 104.02 ಕೋಟಿ ಹಾಗೂ ಸದಸ್ಯರ ಸಾಲ ರೂ. 89.60 ಕೋಟಿ ಹೊಂದಿದೆ. ಸಂಘದ ದುಡಿಯುವ ಬಂಡವಾಳ ರೂ. 114.46 ಕೋಟಿ ಆಗಿರುತ್ತದೆ. ಸಂಘವು ಪ್ರತಿವರ್ಷ ಲೆಕ್ಕಪರಿಶೋಧನೆಯಲ್ಲಿ “ಎ” ಗ್ರೇಡ್ ಶ್ರೇಣಿಯನ್ನು ಹೊಂದಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲಿನ್ ಗ್ರೇಸಿ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ವಲೇರಿಯನ್ ಬರೆಟ್ರೊ ವಂದಿಸಿದರು. ನಿರ್ದೇಶಕರಾದ ಬೆನೆಡಿಕ್ಟಾ ಗ್ರೇಸಿ ಮೊಂತೇರೊ, ಬೆನೆಡಿಕ್ಟಾ ಸಲ್ಡಾನ್ಹಾ, ಡೆನಿಸ್ ಪಿಂಟೊ, ಎವಿನ್ ಲೋಬೊ, ಫ್ರಾನ್ಸಿಸ್ ಮೆಂಡೋನ್ಸಾ, ಹೆನ್ರಿ ಪಾಸ್ಕಲ್ ಪಿರೇರ, ಕ್ಯೂಬರ್ಟ್ ಲೋಬೊ, ಜೋನ್ ಪ್ರಕಾಶ್ ಪಿಂಟೊ, ಲಾದ್ರು ಮಿನೇಜಸ್, ರಿಚರ್ಡ್ ಮಿನೇಜಸ್, ವಿನ್ಸೆಂಟ್ ಕ್ಲಾಡಿ ಕಾರ್ಲೊ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com