ಡಾ.ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
ಮಂಗಳೂರು: ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನೂತನ ರಾಷ್ಟ್ರೀಯ ಸಹಕಾರಿ ನೀತಿಯನ್ನು ಒಂಬತ್ತು ಆದ್ಯತೆಗಳಲ್ಲಿ ಮೊದಲ ಆದ್ಯತೆಯಾಗಿ ಪ್ರಸ್ತಾಪ ಮಾಡಿರುವುದನ್ನು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್ ಆರ್ ಹರೀಶ್ ಆಚಾರ್ಯ ಸ್ವಾಗತಿಸಿದ್ದಾರೆ.
ದೇಶದ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ವ್ಯವಸ್ಥಿತ, ಕ್ರಮಬದ್ಧ ಮತ್ತು ಸಮಗ್ರ ವಿಷಯಗಳನ್ನೊಳಗೊಂಡ ರಾಷ್ಟ್ರೀಯ ಸಹಕಾರಿ ನೀತಿಯನ್ನು ಹಣಕಾಸು ಸಚಿವರು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ. ಮತ್ತು ಸರ್ಕಾರ ನಿಗದಿಪಡಿಸಿರುವ ಒಂಬತ್ತು ಆದ್ಯತಾ ವಲಯಗಳ ಪೈಕಿ ಇದನ್ನು ಮೊದಲ ಆದ್ಯತಾ ವಲಯದಲ್ಲಿ ಪರಿಗಣಿಸಿರುವುದು ಉತ್ತಮ ಅಂಶ. ಈ ನೀತಿಯು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯ ವೇಗವನ್ನು ಗುರುತಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪೂರಕವಾಗಲಿದೆ ಎಂದು ಡಾ.ಹರೀಶ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಮುದ್ರಾ ಸಾಲದ ಮಿತಿ ಹೆಚ್ಚಳ
ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ. ಇಟ್ಟಿರುವುದರಿಂದ ಆ ವಲಯದ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ. ಮುದ್ರಾ ಸಾಲ ಯೋಜನೆಯಡಿ ಸಾಲದ ಮಿತಿಯನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದರಿಂದ ಯುವ ಉದ್ಯಮಿಗಳಿಗೆ ನೆರವಾಗಲಿದೆ. ಸರ್ಕಾರದ ಒಂಬತ್ತು ಆದ್ಯತೆಗಳಲ್ಲಿ ಒಂದಾದ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಔಪಚಾರಿಕ ವಲಯದಲ್ಲಿ ಮೊದಲ ಬಾರಿ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದಲೇ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಯಿಂದ ಹೊಸದಾಗಿ ಕೆಲಸಕ್ಕೆ ಹೋಗುವವರ ಜೀವನ ನಿರ್ವಹಣೆಗೆ ನೆರವಾಗಲಿದೆ. ಕೋಟ್ಯಂತರ ಯುವಕರಿಗೆ ಈ ಯೋಜನೆ ಅನುಕೂಲಕರವಾಗಿ ಪರಿಣಮಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ತೆರಿಗೆ ಸ್ಲ್ಯಾಬ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದಾಯ ತೆರಿಗೆ ಕಡಿತ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸುವ ಮಹತ್ವದ ನಿರ್ಧಾರ ಹಾಗೂ ಟಿಡಿಎಸ್ ನಿಯಮಗಳನ್ನು ಸರಳ ಮಾಡಿರುವುದರಿಂದ ಪ್ರತಿಯೊಬ್ಬ ತೆರಿಗೆದಾರರಿಗೂ ಹೆಚ್ಚುವರಿ ಉಳಿತಾಯ ಸಾಧ್ಯವಾಗಲಿದೆ. ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿರುವುದನ್ನೂ ಕೂಡಾ ಹರೀಶ್ ಆಚಾರ್ಯ ಶ್ಲಾಘಿಸಿದ್ದಾರೆ.