ಕೇಂದ್ರ ಬಜೆಟ್‌ನಲ್ಲಿ ಮಕ್ಕಳಿಗಾಗಿಯೇ ಉಳಿತಾಯ ಯೋಜನೆ ಪ್ರಕಟಿಸಿದ ಹಣಕಾಸು ಸಚಿವೆ
ಮಂಗಳೂರು: ಎನ್‌ಡಿಎ ಸರಕಾರದಲ್ಲಿ ಸತತ ಏಳನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಕಳಿಗಾಗಿಯೇ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎಂಬ ಹೆಸರಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ಅಪ್ರಾಪ್ತರಿಗಾಗಿ ಮಕ್ಕಳ ಪಾಲಕರು ಮತ್ತು ಷೋಷಕರು ಈ ಯೋಜನೆ ಆರಂಭಿಸಬಹುದು. ಮಕ್ಕಳು ವಯಸ್ಸಿಗೆ ಬಂದ ನಂತರ ಇದನ್ನು ಪೂರ್ಣ ಪ್ರಮಾಣದ ಎನ್‌ಪಿಎಸ್ ಸ್ಕೀಂ ಆಗಿ ಬದಲಾಯಿಸಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೆತ್ತವರು ಅಥವಾ ಪೋಷಕರು ಎನ್‌ಪಿಎಸ್ ವಾತ್ಸಲ್ಯ ಮೂಲಕ ದೀರ್ಘಾವಧಿಯ ಉಳಿತಾಯ ಯೋಜನೆ ಆರಂಭಿಸಬಹುದು. ಈ ಯೋಜನೆ ಮೂಲಕ ಮಕ್ಕಳ ಹೆಸರಿನಲ್ಲಿ ಪಾಲಿಸಿಗಳನ್ನು ತೆಗೆದುಕೊಂಡು, ಹೆತ್ತವರು ಅಥವಾ ಪೋಷಕರು ಹಣ ಹೂಡಬಹುದು. ಮಕ್ಕಳು ವಯಸ್ಸಿಗೆ ಬಂದ ಮೇಲೆ ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಾಗಿ (ಎನ್‌ಪಿಎಸ್) ಪರಿವರ್ತಿಸಲು ಅವಕಾಶವಿದೆ. ಮಕ್ಕಳಿಗಾಗಿಯೇ ಆರಂಭಿಸಿರುವ ಹೊಸ ಸ್ಕೀಮ್ ಇದು. ಇದರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಮಕ್ಕಳ ಹೆಸರಿನಲ್ಲಿ ಹಣ ಉಳಿತಾಯ ಮಾಡಲು ಅವಕಾಶವಿದೆ.
ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ವಾತ್ಸಲ್ಯ ಖಾತೆ ಆರಂಭಿಸಬೇಕು. ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಅವಧಿಯ ಅಂತರದಲ್ಲಿ ಈ ಖಾತೆಗೆ ಹಣ ವರ್ಗಾಯಿಸುವ ಮೂಲಕ ಮಕ್ಕಳ ಹೆತ್ತವರು ಇದರಲ್ಲಿ ಹಣ ಉಳಿತಾಯ ಮಾಡುತ್ತ ಬರಬಹುದು. ಇದರಲ್ಲಿ ಹೂಡಿಕೆ ಮಾಡಲಾದ ಹಣ ಪ್ರಸಕ್ತ ಚಾಲ್ತಿಯಲ್ಲಿರುವ ಎನ್‌ಪಿಎಸ್ ಯೋಜನೆಯಂತೆಯೇ ಕಾರ್ಯನಿರ್ವಹಿಸಲಿದೆಯಾದರೂ, ಇದು 18 ವರ್ಷದೊಳಗಿನವರಿಗೆ ಮಾಡಿರುವ ಯೋಜನೆಯಾದುದರಿಂದ ಒಂದಷ್ಟು ವ್ಯತ್ಯಾಸವಿದೆ.
ಈ ಯೋಜನೆಯಡಿ, ಆರಂಭದಲ್ಲೇ ಮಕ್ಕಳಿಗೆ ಲಾಭವಿಲ್ಲ. ಈಗಿನ ಮಕ್ಕಳು ಮುಂದೆ ನಿವೃತ್ತಿ ವಯಸ್ಸು ಅಂದರೆ 58ರಿಂದ 60 ವರ್ಷ ದಾಟಿದಾಗ ಅವರಿಗೆ ಒಂದು ನಿಶ್ಚಿತ ಆದಾಯ ಈ ಯೋಜನೆಯ ಮೂಲಕ ಬರುವಂತೆ ಮಾಡುವ ಉದ್ದೇಶ ಈ ಯೋಜನೆಯಲ್ಲಿದೆ. ಇದಕ್ಕೆ ಸರ್ಕಾರದಿಂದ ನೀಡುವ ಬಡ್ಡಿ ದರ ಉಳಿದ ಉಳಿತಾಯ ಯೋಜನೆಗಳಿಗಿಂತ ಸ್ವಲ್ಪ ಹೆಚ್ಚು. ಆದ್ದರಿಂದ ಇದರಿಂದ ಸಿಗುವ ಲಾಭವೂ ಹೆಚ್ಚು. ವಾತ್ಸಲ್ಯ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೂ ತೆರಿಗೆ ವಿನಾಯಿತಿ ಸಿಗಲಿದೆ.