ಕಿಸಾನ್ ಸಮ್ಮಾನ್ ನೆರವು 12,000ಕ್ಕೆ ಏರಿಕೆ?
ದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ ಬಹುಮತ ಕಳೆದುಕೊಂಡು ಮಿತ್ರಪಕ್ಷಗಳ ನೆರವಿನಿಂದ ಸರ್ಕಾರ ನಡೆಸುತ್ತಿರುವ ಬಿಜೆಪಿ ಮುಂಬರುವ ಚುನಾವಣೆಗಳ ಬಗ್ಗೆ ಅಲರ್ಟ್ ಆಗಿದ್ದು, ರೈತರು ಹಾಗೂ ಮಹಿಳೆಯರ ಮನಸ್ಸು ಗೆಲ್ಲಲು ಮುಂದಾಗಿದ್ದು ಬಜೆಟ್‌ನಲ್ಲಿ ರೈತರಿಗೆ ಮತ್ತು ಮಹಿಳೆಯರಿಗೆ ಬಂಪರ್ ಘೋಷಣೆಗೆ ಮುಂದಾಗಿದೆ.
ಸದ್ಯ ಕೇಂದ್ರದಿಂದ ಕಿಸಾನ್ ಸಮ್ಮಾನ್ ಸಹಾಯಧನದಡಿಯಲ್ಲಿ ರೈತರಿಗೆ ನೀಡುತ್ತಿರುವ ೬,೦೦೦ ರೂ. ನೆರವನ್ನು ೧೨,೦೦೦ಕ್ಕೇರಿಸುವ ಮಹತ್ವದ ಘೋಷಣೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಹೇಳಲಾಗಿದೆ. ತಕ್ಷಣಕ್ಕೆ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಬಿಜೆಪಿ ಪಾಲಿಗೆ ನಿರ್ಣಾಯಕವಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ರೈತರು ಮತ್ತು ಮಹಿಳೆಯರ ಮನ ಗೆಲ್ಲಲು ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕ ನೆರವನ್ನು 12,000 ರೂ.ಗೆ ಹೆಚ್ಚಿಸಬಹುದು ಹಾಗೂ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 1 ಲಕ್ಷ ರೂ. ನೆರವು ನೀಡುವ ಹೊಸ ಯೋಜನೆಯನ್ನೂ ಪ್ರಕಟಿಸುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಬಿಜೆಪಿ, ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿವೆ. ಈ ಹಿನ್ನೆಲೆಯಲ್ಲಿ ಜುಲೈ 23ರಂದು ಮಂಡನೆಯಾಗಲಿರುವ 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳೆಯರತ್ತ ಹೆಚ್ಚಿನ ಗಮನ ಹರಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ.ಗಳನ್ನು ವರ್ಗಾಯಿಸುವ ಯೋಜನೆಯನ್ನೂ ಬಜೆಟ್‌ನಲ್ಲಿ ಪ್ರಕಟಿಸಬಹುದು ಎನ್ನಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694