ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎನ್. ರಾಜಣ್ಣ ಮಾಹಿತಿ
ಬೆಂಗಳೂರು: 2018ನೇ ಸಾಲಿನ ಒಂದು ಲಕ್ಷ ರೂ. ಸಾಲ ಮನ್ನಾ ಯೋಜನೆಯಡಿ 6,048 ರೈತರಿಗೆ 14.45 ಕೋಟಿ ರೂ.ಗಳ ಸಾಲ ಮನ್ನಾ ಮೊತ್ತದ ಬಿಡುಗಡೆ ಬಾಕಿ ಇದ್ದು ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮಂಗಳವಾರ ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಎಸ್. ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಸಿ.ಸಿ. ಬ್ಯಾಂಕುಗಳ ಮೂಲಕ ಸಾಲ ನೀಡುವ ಸಹಕಾರ ಸಂಘಗಳಲ್ಲಿ 86,305 ರೈತ ಸದಸ್ಯರಿಗೆ 359.52 ಕೋಟಿ ರೂ.ಗಳ ಸಾಲ ಮನ್ನಾ ಅರ್ಹತೆಯನ್ನು ಗುರುತಿಸಿ ಹಸಿರು ಪಟ್ಟಿ ತಯಾರಿಸಲಾಗಿದೆ. ಈ ಪೈಕಿ 2018-19, 2019-20, 2020-21ರಲ್ಲಿ 80,257 ರೈತರ 345.08 ಕೋಟಿ ರೂ.ಗಳ ಸಾಲ ಮನ್ನಾ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ ರೂ 25,000 ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.90 ಲಕ್ಷ ರೈತರಿಗೆ ರೂ. 2,000.00 ಕೋಟಿ ರೂ. ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಸಾಲ ವಿತರಿಸುವ ಗುರಿ ನಿಗದಿಪಡಿಸಿದ್ದು, ರೂ. 2566.02 ಕೋಟಿಗಳ ಹೆಚ್ಚಿನ ಕೃಷಿ ಸಾಲ ವಿತರಿಸಲಾಗುವುದು ಎಂದು ಕೆ.ಎನ್. ರಾಜಣ್ಣ ತಿಳಿಸಿದರು.
https://chat.whatsapp.com/Ge11n7QCiMj5QyPvCc0H19
ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಥಮಿಕ ಪತ್ತಿನ ಸಹಕಾರ ಸಂಘ / ಡಿ.ಸಿ.ಸಿ ಬ್ಯಾಂಕುಗಳ ಮೂಲಕ 2023-24ನೇ ಸಾಲಿನಲ್ಲಿ 29,26,910 ರೈತರಿಗೆ ರೂ. 22,982.10 ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ / ಡಿ.ಸಿ.ಸಿ ಬ್ಯಾಂಕುಗಳ ಮೂಲಕ 2024-25ನೇ ಸಾಲಿನಲ್ಲಿ 35.10 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. 25,000 ಕೋಟಿಗಳ ಅಲ್ಪಾವಧಿ ಕೃಷಿ ಸಾಲ ಮತ್ತು ಪಶುಸಂಗೋಪನೆಗೆ ದುಡಿಯುವ ಬಂಡವಾಳ ಸಾಲ ವಿತರಿಸಲು ಗುರಿ ಹೊಂದಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ / ಡಿ.ಸಿ.ಸಿ ಬ್ಯಾಂಕುಗಳ ಮೂಲಕ 2024ನೇ ಜುಲೈ 6ರವರೆಗೆ 7,80,363 ರೈತರಿಗೆ ರೂ. 6799.17 ಕೋಟಿಗಳ ಬೆಳೆ ಸಾಲ ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಾಲ ವಿತರಿಸಿದ ಮಾಹಿತಿ, ಡಿ.ಸಿ.ಸಿ ಬ್ಯಾಂಕುಗಳಲ್ಲಿರುವ ಬಂಡವಾಳ ಮತ್ತು ನಬಾರ್ಡ್‍ನ ಪುನರ್ಧನ ಆಧರಿಸಿ ಪ್ರತಿ ಜಿಲ್ಲೆಗೆ ಸರಾಸರಿ 1.13 ಲಕ್ಷ ರೈತರಿಗೆ ರೂ. 806.00 ಕೋಟಿಗಳ ಅಲ್ಪಾವಧಿ ಕೃಷಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ. ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಂಘಗಳಿಗೆ ಪ್ರೋತ್ಸಾಹ
ಬಿಜೆಪಿ ಸದಸ್ಯ ಹನುಮಂತ ನಿರಾಣಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜಣ್ಣ, ಹಾಲು ಉತ್ಪಾದಕರ ಸಂಘಗಳ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 15 ರೂ. ಪ್ರೋತ್ಸಾಹ ಧನ ಪಾವತಿಗೆ ಸಂಬಂಧಿಸಿ ಕ್ರೋಢೀಕೃತ ಮಾಹಿತಿ ಪಡೆದು ಒಕ್ಕೂಟಗಳ ಇ ಸೈನ್ ಮಾಡಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694