ಸತತ ಏಳನೇ ಬಾರಿ ಮುಂಗಡ ಪತ್ರ ಮಂಡಿಸಿ ದಾಖಲೆ ಬರೆಯಲಿದ್ದಾರೆ ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 24ರಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 22ರಂದು ಮುಂಗಾರು ಅಧಿವೇಶನ ಆರಂಭವಾಗಲಿದ್ದು, 23ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಬಹುದು ಮತ್ತು ಜುಲೈ 24ರಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಆದಾಗ್ಯೂ, ಎರಡು ದಿನಾಂಕಗಳ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಶೀಘ್ರದಲ್ಲೇ ಬಜೆಟ್ ಮಂಡಿಸುವ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ. ವಾಡಿಕೆ ಪ್ರಕಾರ ಸಂಸತ್ತಿನ ಎರಡು ಅಧಿವೇಶನಗಳ ನಡುವೆ 15 ದಿನಗಳ ಅಂತರ ಇರಬೇಕು. ಜುಲೈ 2ರಂದು 18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಮುಕ್ತಾಯಗೊಂಡಿದೆ. ಮುಂದಿನ ಅಧಿವೇಶನ ಜುಲೈ 18ರಿಂದ 22ರ ನಡುವೆ ಪ್ರಾರಂಭವಾಗಬೇಕು. ಆದರೆ, ಈ ಬಾರಿ ಅಧಿವೇಶನ ತುಸು ವಿಳಂಬವಾಗಿ ಶುರುವಾಗಬಹುದು. ಜುಲೈ 22ಕ್ಕೆ ಅಧಿವೇಶನ ಆರಂಭವಾಗಿ ಜುಲೈ 24, ಬುಧವಾರದಂದು ಬಜೆಟ್ ಮಂಡನೆ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಬಾರಿಯ ಬಜೆಟ್ನಲ್ಲಿ ಬಡವರು, ಯುವಜನರು, ಮಹಿಳೆಯರು, ರೈತರಿಗೆ ಆದ್ಯತೆ ಸಿಗಲಿದೆ. ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಅನಾವರಣಗೊಳ್ಳಲಿವೆ ಎಂದು ಹೇಳಿದ್ದರು.
ಸತತ ಏಳನೇ ಬಾರಿ ಕೇಂದ್ರ ಬಜೆಟ್ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್ ಈ ಬಾರಿ ಹೊಸ ದಾಖಲೆಯೊಂದನ್ನು ಬರೆಯಲಿದ್ದಾರೆ. ಇದುವರೆಗೆ ಮೊರಾರ್ಜಿ ದೇಸಾಯಿಯವರು ಸತತ ಆರು ಬಾರಿ ಬಜೆಟ್ ಮಂಡಿಸಿದ್ದರು. ಆ ದಾಖಲೆಯನ್ನು ನಿರ್ಮಲಾ ಈ ಬಾರಿ ಹಿಮ್ಮೆಟ್ಟಿಸಲಿದ್ದಾರೆ. 2019ರಲ್ಲಿ ಮೋದಿ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ಪ್ರಥಮ ಮಹಿಳಾ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ ಇದುವರೆಗೆ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಆರು ಬಜೆಟ್ ಮಂಡಿಸಿರುವ ಆಕೆ ಇದುವರೆಗೆ ಸತತ ಐದು ಬಜೆಟ್ ಮಂಡಿಸಿರುವ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಹೆಸರಿನಲ್ಲಿದ್ದು ಅವರು 10 ಬಾರಿ ಬಜೆಟ್ ಮಂಡಿಸಿದ್ದಾರೆ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: editor@sahakaraspandana.in , sahakaraspandana@gmail.com
ಮಾಹಿತಿಗೆ ಸಂಪರ್ಕಿಸಿ: 9901319694.