ಬೆಳಗಾವಿ: ಹಿರಿಯ ಸಹಕಾರಿ ಧುರೀಣ, ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ರಾವ್ ಸಾಹೇಬ ಪಾಟೀಲ್ (ದಾದಾ) ಮಂಗಳವಾರ ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
1944ರ ಏಪ್ರಿಲ್ 11ರಂದು ರೈತ ಕುಟುಂಬದಲ್ಲಿ ಜನಿಸಿದ್ದ ರಾವ್ ಸಾಹೇಬ ಪಾಟೀಲ್ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ್ದರು. ಬೆಳಗಾವಿ ಜಿಲ್ಲೆಯ ಬೋರೆಗಾಂವ್ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡಿ ಅನೇಕ ಪ್ರಗತಿ ಚಟುವಟಕೆಗಳನ್ನು ಕೈಗೊಂಡಿದ್ದರು. ಹಲವಾರು ಸಹಕಾರ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ಧಾರ್ಮಿಕ ಕಾರ್ಯಗಳನ್ನೂ ಸಂಯೋಜಿಸಿದರು. ಬೋರೆಗಾಂವ್‌ನಲ್ಲಿ ಅರಿಹಂತ್ ಉದ್ಯೋಗ್ ಗ್ರೂಪ್ ಎಂಬ ಸಂಸ್ಥೆ ಸ್ಥಾಪಿಸಿ ರೈತರ ಏಳಿಗೆಗೆ ಶ್ರಮಿಸಿದ್ದರು. ವಿವಿಧ ವೇತನ ಯೋಜನೆಗಳು, ಆವಾಸ್ ಯೋಜನೆಗಳು, ಅಂಗವಿಕಲರಿಗೆ ಸೈಕಲ್ ವಿತರಣೆ ಮತ್ತು ನಿರ್ಗತಿಕರಿಗೆ ಶೈಕ್ಷಣಿಕ ಸಾಮಗ್ರಿಗಳ ಮೂಲಕ ಸಮಾಜಸೇವೆಯ ಕೈಂಕಯದಲ್ಲಿ ತೊಡಗಿಸಿಕೊಂಡರು.
ರಾಜಕೀಯ ಸೇವೆ ಮಾಡುತ್ತಲೇ ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಿದ ಪಾಟೀಲರು, ಬೋರೆಗಾಂವ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು.
ಬೋರೆಗಾಂವ್ ಜೊತೆಗೆ ನಿಪ್ಪಾಣಿ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗೂ ಪ್ರಯತ್ನಿಸಿ ಇಡೀ ಬೆಳಗಾವಿ ಜಿಲ್ಲೆಯಲ್ಲೇ ಛಾಪು ಮೂಡಿಸಿದ್ದರು. ಸಹಕಾರ ಕ್ಷೇತ್ರದ ಸಾಧನೆಗಾಗಿ ಸಹಕಾರ ರತ್ನ ಪುರಸ್ಕಾರವನ್ನೂ ಪಡೆದಿದ್ದರು.
ನೀರಿನ ಯೋಜನೆ ಚಾಲನೆ
ಬೋರೆಗಾಂವ್‌ನ ಜನರು ನಿತ್ಯ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ವಿಶ್ವಬ್ಯಾಂಕ್‌ನಿಂದ ನೀರಿನ ಯೋಜನೆಗೆ ಅನುಮೋದನೆ ಪಡೆಯಲು ಶ್ರಮಿಸಿದ್ದರು. ಇದರಿಂದಾಗಿ ಇಡೀ ನಗರದ ನಿವಾಸಿಗಳು ಇಂದು ಕುಡಿಯುವ ನೀರು ಪಡೆಯುವಂತಾಗಿದೆ. ಇಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಜನ ಸಾಕಷ್ಟು ನಿರಾಳರಾಗುವಂತಾಗಿದೆ.
ದಕ್ಷಿಣ ಭಾರತ ಜೈನ ಸಭಾ ಪುನರುಜ್ಜೀವನ
ಜೈನ ಸಮುದಾಯದ ಪ್ರತಿಷ್ಠೆಯೆಂದು ಪರಿಗಣಿಸಲಾದ ದಕ್ಷಿಣ ಭಾರತ ಜೈನ ಸಭಾದ ಅಧ್ಯಕ್ಷರಾದ ರಾವ್ ಸಾಹೇಬ ಪಾಟೀಲರು ನಾಲ್ಕು ದಶಕಗಳಿಂದ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದರು. ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಯೋಜನೆ ರೂಪಿಸಿದರು. ಇಂದು ಈ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಅನೇಕ ವಿದ್ಯಾರ್ಥಿಗಳು ಕಲಿಯುವಂತಾಗಿದೆ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: editor@sahakaraspandana.in, sahakaraspandana@gmail.com
ಮಾಹಿತಿಗೆ: 9901319694.