ಬೆಂಗಳೂರಿನ ಬಸವಶ್ರೀ ಫೌಂಡೇಷನ್‌ನಿಂದ ಗೌರವ ವಿಶೇಷ ಸೇವೆ ಸಲ್ಲಿಸಿದ ಗಣ್ಯರ ಗುರುತು
ಬೆಂಗಳೂರು: ದಕ್ಷಿಣ ಕನ್ನಡದ ಪ್ರತಿಷ್ಠಿತ ಸಹಕಾರ ಸಂಸ್ಥೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶೇಷ ಸೇವೆಯನ್ನು ಗುರುತಿಸಿ ಶುಕ್ರವಾರ ಬೆಂಗಳೂರಿನಲ್ಲಿ ಸಿದ್ಧಗಂಗಾ ರಾಷ್ಟ್ರೀಯ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಕನ್ನಡ ಭವನದಲ್ಲಿ ಬಸವಶ್ರೀ ಫೌಂಡೇಷನ್ ಬೆಂಗಳೂರು ವತಿಯಿಂದ ಭಗವಾನ್ ಬುದ್ಧ, ಬಸವೇಶ್ವರ, ಡಾ||ಬಿ.ಆರ್ ಅಂಬೇಡ್ಕರ್ ಮತ್ತು ಡಾ||ಶಿವಕುಮಾರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಮಹಾಸಂಗಮ ಸಮಾವೇಶ, ಶಾಸಕರ ಜನಸ್ಪಂದನ ಪತ್ರಿಕೆಯ 15ನೇ ವಾರ್ಷಿಕೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಪುರಸ್ಕಾರಗಳನ್ನು ನೀಡಲಾಯಿತು. ಬೆಳಗಾವಿಯ ನ್ಯಾಯವಾದಿ ಕೆ.ಎಲ್.ಕುಂದರಗಿ ಅಧ್ಯಕ್ಷತೆ ವಹಿಸಿದ್ದರು. ತುಮಕೂರಿನ ಅರೇಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ, ಶ್ರೀ ಬಸವೇಶ್ವರ ಪ್ರಾಚಿ ಯೋಗ ಮಠದ ಶ್ರೀ ತೋಟಾಪುರಿ ಸೋಮಶೇಖರ್ ಗುರೂಜಿಯವರ ಗೌರವ ಉಪಸ್ಥಿತಿಯಲ್ಲಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಕೃಷ್ಣ ಭಟ್, ಚಿತ್ತರಂಜನ್ ಬೋಳಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕರ್ನಾಟಕ ಸರ್ಕಾರದ ಕನ್ಸಲ್ಟಂಟ್ ಫ್ರೊಟೋಕಾಲ್ ಉಚ್ಚ ನ್ಯಾಯಾಲಯದ ಜಂಟಿ ರಿಜಿಸ್ಟ್ರಾರ್ ಟಿ.ಎನ್.ಕನಕರಾಜು, ಲೇಖಕ ಎಲ್.ಎನ್. ಮುಕುಂದರಾಜ, ಟಿಲಿಕಾಂ ಎಂಪ್ಲಾಯೀಸ್ ಕೋ- ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಬಿ.ಬಾಬು, ಬಿಜೆಪಿ ರಾಜ್ಯ ನೇಕಾರ ವಿಭಾಗ ರಾಜ್ಯ ಸಮಿತಿ ಸದಸ್ಯ ಬಿ.ಎಲ್.ಹರೀಶ್ ಕುಮಾರ್, ಸಾಹಿತಿ ಹಾಗೂ ಪತ್ರಕರ್ತ ಸಂಗಮೇಶ ಎನ್.ಜವಾದಿ, ಧನ್ವಂತರಿ ಸೇವಾ ಸಂಸ್ಥೆ ಅಧ್ಯಕ್ಷ ಡಾ.ಸುರೇಶ್ ಮೆಣಸಗಿ ಮುಂತಾದವರು ಉಪಸ್ಥಿತರಿದ್ದರು. ಬಸವಶ್ರೀ ಫೌಂಡೇಶನ್ ಅಧ್ಯಕ್ಷ ಎಚ್.ಸದಾಶಿವ ಸ್ವಾಗತಿಸಿ, ಚಂದನ ವಾಹಿನಿಯ ಖ್ಯಾತ ನಿರೂಪಕರಾದ ಸವಿ ಪ್ರಕಾಶ್ ನಿರೂಪಿಸಿದರು.
ಹಲವು ಪ್ರಶಸ್ತಿಗಳ ಸರದಾರ
ಚಿತ್ತರಂಜನ್ ಬೋಳಾರ್ ಅವರು, ಸಹಕಾರ ಕ್ಷೇತ್ರದ ಜೊತೆಗೆ ಸಾಮಾಜಿಕ, ಧಾರ್ಮಿಕ ಇತ್ಯಾದಿ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಅನೇಕ ರಾಷ್ಟ್ರೀಯ, ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವರಿಗೆ ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತ, ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಸಜ್ಜನ -ಚಂದನ ಸದ್ಭಾವನಾ ರಾಜ್ಯ ಪ್ರಶಸ್ತಿ, ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ, ಭಾರತರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಐಐಬಿ ಬೆಸ್ಟ್ ಬಿಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ, ಇವರನ್ನು ಹಲವಾರು ಸಹಕಾರ ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ.
ಕ್ರಿಯಾಶೀಲ, ಸಕ್ರಿಯ ಚಟುವಟಿಕೆ
ಚಿತ್ತರಂಜನ್ ಬೋಳಾರ್ ಅವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಸಂಘದ ಅಧ್ಯಕ್ಷರಾಗಿ ಸಕ್ರಿಯ ಚಟುವಟಿಕೆಯೊಂದಿಗೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದು ಉಲ್ಲೇಖನೀಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಆಡಳಿತ ಮಂಡಳಿಗೆ ಮೈಸೂರು ವಿಭಾಗದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿಯಾಗಿ, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ, ದ.ಕ.ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾಗಿ, ದ.ಕ.ಜಿಲ್ಲಾ ಸಗಟು ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.