ಮಂಗಳೂರು: ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ (ಎಂ.ಸಿ.ಸಿ.) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇತ್ತೀಚೆಗೆ ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಗಳೂರು ಧರ್ಮಪ್ರಾಂತ ಮಾಜಿ ಪ್ರೊ ಕುರೇಟರ್ ಜಾನ್ ವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ಯಾಂಕಿನ ಸಿಬ್ಬಂದಿ ಬ್ಯಾಂಕಿನಲ್ಲಿ ಕೆಲಸ ಮಾಡಲು ಉತ್ತಮ ಮನೋಭಾವ ಹೊಂದಿರಬೇಕು ಹಾಗೂ ಕೆಲಸದ ಮೇಲೆ ಅವರಿಗೆ ತೃಪ್ತಿ ಇರಬೇಕು. ಬ್ಯಾಂಕಿನ ಪ್ರಗತಿ ಹೆಚ್ಚಿಸಲು ನಿಗದಿತ ಗುರಿ ಸಾಧಿಸುವುದು ಅತಿ ಆಗತ್ಯ ಎಂದು ಬಣ್ಣಿಸಿದರು. ಆಕಾಶದತ್ತ ಗುರಿಯಿಡಿ, ನೀವು ಮರದ ತುದಿಯನ್ನು ತಲುಪುತ್ತೀರಿ ಎಂಬ ಮಾತು ನೆನಪಿಸಿಕೊಂಡ ಅವರು, ಕಳೆದ ದಶಕದಲ್ಲಿ ಎಂ.ಸಿ.ಸಿ ಬ್ಯಾಂಕಿನ ಸಾಧಿಸಿದ ಅಗಾಧ ಪ್ರಗತಿಗಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಸಮರ್ಪಿತ ಸೇವೆಗಾಗಿ ಬ್ಯಾಂಕಿನ ಸಿಬ್ಬಂದಿಯನ್ನು ಶ್ಲಾಘಿಸಿ, ಅಬಿನಂದಿಸಿದರು. ಬಳಿಕ ಮಾತನಾಡಿದ ಅವರು, ೨೦೨೩-೨೪ನೇ ಹಣಕಾಸು ವರ್ಷದಲ್ಲಿ ವೈಯಕ್ತಿಕ ಮೈಲಿಗಲ್ಲು ಮತ್ತು ಶೇರು ಬಂಡವಾಳ ಗುರಿಯನ್ನು ಸಾಧಿಸಿದ ಎಲ್ಲ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ ಮುಂದಿನ ವರ್ಷ ಎಲ್ಲಾ ಶಾಖೆಗಳು ಗುರಿ ಸಾಧಿಸಿ ಪ್ರಶಸ್ತಿ ಪಡೆಯಲಿ ಎಂದು ಹಾರೈಸಿದರು. ಸಿಬ್ಬಂದಿಗಳ ಸಾಮೂಹಿಕ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲಾ ಶಾಖೆಗಳು ಶ್ರಮ ವಹಿಸಿ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.
ಜಾನ್ ಡಿಸಿಲ್ವಾ ಶುಭ ಹಾರೈಸಿದರು.ಬ್ಯಾಂಕಿನ ಸಲಹೆಗಾರರಾದ ಎಸ್.ಎಚ್.ವಿಶ್ವೇಶ್ವರಯ್ಯ ಬ್ಯಾಂಕಿನ ೨೦೨೩-೨೪ನೇ ಸಾಲಿನ ಕಾರ್ಯಕ್ಷಮತೆಯ ವಿಮರ್ಶೆ ಮಾಡಿ, ೨೦೨೪-೨೫ನೇ ಗುರಿ ತಲುಪುವ ಬಗ್ಗೆ ಮಾಹಿತಿ ನೀಡಿದರು. ೨೦೨೩-೨೪ನೇ ಸಾಲಿನಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿ ಗುರು ತಲುಪಿದ ಸಂಸ್ಥಾಪಕರ ಶಾಖೆ, ಕಂಕನಾಡಿ, ಕುಲಶೇಖರ, ಬಜ್ಪೆ, ಸುರತ್ಕಲ್ ಮತ್ತು ಕುಂದಾಪುರ ಶಾಖಾ ವ್ಯವಸ್ಥಾಪಕರನ್ನು ಗೌರವಿಸಲಾಯಿತು. ವೈಯಕ್ತಿಕ, ಮೈಲಿಗಲ್ಲು ಕೊಡುಗೆ ಹಾಗೂ ಶೇರು ಬಂಡವಾಳ ಗುರಿ ಸಾಧಿಸಿದ ಸಿಬ್ಬಂದಿಗಳನ್ನೂ ಗೌರವಿಸಲಾಯಿತು. ನಿರ್ದೇಶಕರಾದ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ಜೆ.ಪಿ. ರೊಡ್ರಿಗಸ್, ಡಾ|ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಡಾ|ಫ್ರೀಡಾ ಡಿಸೋಜ, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಫೆಲಿಕ್ಸ್ ಡಿಕ್ರೂಜ್ ಹಾಜರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೇಜಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿರ್ವಹಿಸಿದರು. ಶಿರ್ವ ಶಾಖಾ ಸಿಬ್ಬಂದಿ ರಿತೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ವಂದಿಸಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ: sahakaraspandana@gmail.com
ಮಾಹಿತಿಗೆ: 9901319694.