ಸಹಕಾರ ಕ್ಷೇತ್ರಕ್ಕೆ ವಿಶೇಷ ಮಾನ್ಯತೆಯನ್ನು ನೀಡಿ ‘ಸಹಕಾರದಿಂದ ಸಮೃದ್ಧಿ’ ಎಂಬ ಘೋಷ ವಾಕ್ಯದೊಂದಿಗೆ ಪ್ರತ್ಯೇಕ ನೂತನ ಸಹಕಾರ ಸಚಿವಾಲಯವನ್ನು ರಚಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಒಂದು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿ ಹರ್ಷ ವ್ಯಕ್ತಪಡಿಸಿ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ ಅವರು ಸ್ವಾಗತಿಸಿದ್ದಾರೆ.
ಇದುವರೆಗೆ ಕೇಂದ್ರ ಸರಕಾರದ ಕೃಷಿ ಸಚಿವಾಲಯದ ಅಧೀನದಲ್ಲಿದ್ದ ಸಹಕಾರ ಇಲಾಖೆಯನ್ನು ಕೇಂದ್ರ ಸರಕಾರವು ಪ್ರತ್ಯೇಕಿಸಿ ಹೊಸ ಸಹಕಾರ ಸಚಿವಾಲಯ ರಚಿಸಿ ಮಾನ್ಯತೆಯನ್ನು ನೀಡಿರುವುದರಿಂದ ಸಹಕಾರ ಕ್ಷೇತ್ರಕ್ಕೆ ದೇಶಾದ್ಯಂತ ವಿಶೇಷವಾದ ಪರಿಗಣನೆ ಸಿಕ್ಕಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ
ಪ್ರತ್ಯೇಕ ಸಚಿವಾಲಯವನ್ನು ತೆರೆಯಲು ನಿರಂತರ ಪ್ರಯತ್ನವನ್ನು ಮಾಡಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶಕರು, ಸಹಕಾರ ಭಾರತಿಯ ಸಂರಕ್ಷಕರೂ ಆದ ಶ್ರೀ ಸತೀಶ್ ಕಾಶೀನಾಥ್ ಮರಾಠೆಯವರನ್ನು ಅವರು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ.
ಸಹಕಾರ ವಿಷಯವು ಇಂದು ರಾಜ್ಯದ ವಿಷಯವಾಗಿದೆ. ರಾಜ್ಯ ಸರಕಾರದ ಸಹಕಾರ ನೀತಿಯು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನವಾಗಿದೆ. ಇದರಿಂದ ಸಹಕಾರದ ಮೂಲಕ ಜನ ಸಮುದಾಯದ ಅತ್ಯಂತ ತಳಮಟ್ಟದ ಕೃಷಿಕರು, ಕಾರ್ಮಿಕರು, ಮಹಿಳೆಯರು, ದೀನ-ದಲಿತರು
ಸೇರಿದಂತೆ ನಿಮ್ನ ವರ್ಗದ ಸಮಗ್ರ ಅಭಿವೃದ್ಧಿಗೆ ತೊಡಕು ಉಂಟಾಗುತಿತ್ತು. ಕೇಂದ್ರ ಸರಕಾರವೇ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಿರುವುದರಿಂದ ಕೇಂದ್ರ ನೀತಿ ಆಯೋಗದ ವರದಿ ಹಾಗೂ ಕಾರ್ಯಯೋಜನೆಯಂತೆ ಪ್ರತಿಯೊಂದು ರಾಜ್ಯಗಳು ಸಾಮಾನ್ಯ ಒಂದೇ ರೀತಿಯ ಸಹಕಾರ ನೀತಿಯನ್ನು ಅಳವಡಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ಸಾಧ್ಯವಾಗುತ್ತದೆ. ಆದುದರಿಂದ ಕೇಂದ್ರ ಸರಕಾರದ ಈ ನೀತಿಯು ತಳಮಟ್ಟದ ಜನಸಮುದಾಯದ ಅಮೂಲಾಗ್ರ ಅಭಿವೃದ್ಧಿಗೆ ಕ್ರಾಂತಿಕಾರಿ ಕ್ರಮವಾಗಿದೆ ಎಂದು ಶ್ರೀ ಹರೀಶ್ ಆಚಾರ್ಯ ಇವರು ಪ್ರಕಟಣೆಯಲ್ಲಿ ಹೇಳಿದ್ದಾರೆ.